Site icon Vistara News

Times Now Survey: ಮೋದಿ ಹ್ಯಾಟ್ರಿಕ್‌ ನಿಶ್ಚಿತ ಎಂದ ಟೈಮ್ಸ್‌ ನೌ ಸಮೀಕ್ಷೆ; NDAಗೆ ಎಷ್ಟು, I.N.D.I.Aಗೆ ಎಷ್ಟು ಸ್ಥಾನ?

PM Narendra Modi

Narendra Modi Will Become PM Again, NDA To Win 326 Seats: Says Times Now ETG Survey

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ (I.N.D.I.A) ಎಂಬ ಒಕ್ಕೂಟ ರಚಿಸಿವೆ. ಅತ್ತ, ಎನ್‌ಡಿಎ ಕೂಡ ಸಭೆ ನಡೆಸಿ ಬಲ ಪ್ರದರ್ಶಿಸಿದೆ. ಇದರ ಬೆನ್ನಲ್ಲೇ ಲೋಕಸಭೆ ಚುನಾವಣೆ ಕುರಿತು ಟೈಮ್ಸ್‌ ನೌ ಇಟಿಜಿ ಸಮೀಕ್ಷೆ (Times Now Survey) ವರದಿ ಪ್ರಕಟಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ ಎಂದು ತಿಳಿಸಿದೆ.

ಟೈಮ್ಸ್‌ ನೌ ಇಟಿಜಿ ಸಮೀಕ್ಷೆ ಪ್ರಕಾರ, ಇಂದೇ ಚುನಾವಣೆ ನಡೆದರೂ ಬಿಜೆಪಿ ಒಂದೇ ಪಕ್ಷ 300ಕ್ಕೂ ಅಧಿಕ ಸೀಟುಗಳನ್ನು ಗೆಲ್ಲಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು 296-326 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಇಂಡಿಯಾ ಒಕ್ಕೂಟವು 160-190 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇದರೊಂದಿಗೆ ನರೇಂದ್ರ ಮೋದಿ ಅವರೇ ಹ್ಯಾಟ್ರಿಕ್‌ ಪಿಎಂ ಆಗಲಿದ್ದಾರೆ ಎಂಬುದು ಸಮೀಕ್ಷೆಯ ಸಾರವಾಗಿದೆ.

ಹಿಂದಿ ಬೆಲ್ಟ್‌ನಲ್ಲಿ ಬಿಜೆಪಿ ಪ್ರಾಬಲ್ಯ

ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಶೇ.80ರಷ್ಟು ಮತಗಳು ಬಿಜೆಪಿಗೆ ಹಿಂದಿ ಭಾಷಿಕ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ಲಭಿಸಲಿವೆ. ಅಷ್ಟೇ ಅಲ್ಲ, ಗುಜರಾತ್‌, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿಯೇ ಬಿಜೆಪಿಯು ಒಟ್ಟು 80 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳನ್ನು ಜಯಿಸಲಿದೆ ಎಂದು ತಿಳಿಸಿದೆ.

ಕರ್ನಾಟಕದಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?

ಕರ್ನಾಟಕದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೂ ಬಿಜೆಪಿ ಪ್ರಾಬಲ್ಯವೇ ಇರಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕರ್ನಾಟಕದಲ್ಲಿ ಬಿಜೆಪಿಯು 18-20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ತಮಿಳುನಾಡಿನಲ್ಲಿ ಇಂಡಿಯಾ ಒಕ್ಕೂಟವು 30-34 ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆಯಲಿದೆ. ಬಿಹಾರ, ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಇಂಡಿಯಾ ತೀವ್ರ ಪೈಪೋಟಿ ನೀಡಿದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯೇ ಹೆಚ್ಚು ಕ್ಷೇತ್ರ ಗೆಲ್ಲಲಿದೆ. ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯು ಲೋಕಸಭೆ ಚುನಾವಣೆ ವೇಳೆ ನಿಯಮಿತ ಪರಿಣಾಮ ಮಾತ್ರ ಬೀರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: Opposition Meet: ಯಾವ ಪಕ್ಷ ಯಾವ ಕೂಟದಲ್ಲಿದೆ? ‘ಎನ್‌ಡಿಎ’, ‘ಇಂಡಿಯಾ’ ಪರ ಇರುವ ಪಕ್ಷಗಳೆಷ್ಟು?

ಇಂಡಿಯಾ ಟವಿ-ಸಿಎನ್ಎಕ್ಸ್ ಸಮೀಕ್ಷೆ ವರದಿ ಏನಿತ್ತು?

ಇಂದೇ ಲೋಕಸಭೆಗೆ ಚುನಾವಣೆ ನಡೆದರೆ ಎನ್‌ಡಿಎಗೆ ಸ್ಪಷ್ಟ ಬಹುಮತ ದೊರೆಯಲಿದೆ. ಆದರೆ, ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಒಟ್ಟು ಸೀಟುಗಳಲ್ಲಿ 13 ಸೀಟುಗಳು ಕಡಿಮೆಯಾಗಬಹುದು. ಅಂದರೆ, ಈ ಬಾರಿ ಬಿಜೆಪಿ 290 ಸೀಟು ಗೆದ್ದರೆ, ಕಾಂಗ್ರೆಸ್ ಪಕ್ಷದ ಪಾಲಿಗೆ 66 ಸೀಟುಗಳು ದೊರೆಯಲಿವೆ ಎಂದು ಕೆಲ ದಿನಗಳ ಹಿಂದಷ್ಟೇ ಇಂಡಿಯಾ ಟವಿ-ಸಿಎನ್ಎಕ್ಸ್ ಸಮೀಕ್ಷೆ ತಿಳಿಸಿತ್ತು.

ಇನ್ನುಳಿದಂತೆ ಟಿಎಂಸಿ 29, ಆಪ್ 10, ಬಿಜೆಡಿ 13, ಶಿವಸೇನೆ(ಶಿಂಧೆ) 2, ಶಿವಸೇನೆ (ಉದ್ಧವ್) 11, ಸಮಾಜವಾದಿ ಪಾರ್ಟಿ 4, ಬಹುಜನ ಸಮಾಜವಾದಿ ಪಾರ್ಟಿ 0, ರಾಷ್ಟ್ರೀಯ ಜನತಾದಳ 7, ಜೆಡಿಯು 7, ಡಿಎಂಕೆ 19, ಎಐಎಡಿಎಂಕೆ 8, ಎನ್‌ಸಿಪಿ(ಶರದ್) 4, ಎನ್‌ಸಿಪಿ (ಅಜಿತ್) 2, ವೈಎಸ್ಆರ್ ಕಾಂಗ್ರೆಸ್ 18, ಟಿಡಿಪಿ 7, ಎಡಪಕ್ಷಗಳು 8, ಬಿಆರೆಸ್ 8, ಸ್ವತಂತ್ರ ಸೇರಿ ಇನ್ನುಳಿದಂತೆ 30 ಸ್ಥಾನಗಳನ್ನು ಗೆಲ್ಲಲಿದೆ. ಲೋಕಸಭೆಯು 543 ಪ್ಲಸ್ 2 ಸದಸ್ಯ ಬಲವನ್ನು ಹೊಂದಿದೆ.

Exit mobile version