ನವದೆಹಲಿ: ಐನೂರು ಹಾಗೂ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ತಾವು ತೆಗೆದುಕೊಂಡ ನಿರ್ಧಾರ ‘ಮಹಾ ವೈಫಲ್ಯ’ ಎಂಬುದಾಗಿ ಒಪ್ಪಿಕೊಂಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟೀಕಿಸಿದ್ದಾರೆ.
ದೇಶದ ಜನರ ಬಳಿ ದಾಖಲೆಯ 30.88 ಲಕ್ಷ ಕೋಟಿ ರೂ. ನಗದು ಇದೆ ಎಂಬ ಕುರಿತು ಮಾಧ್ಯಮ ಸಂಸ್ಥೆಯೊಂದು ಮಾಡಿರುವ ವರದಿ ಟ್ವೀಟ್ ಮಾಡಿರುವ ಅವರು, “ದೇಶದಲ್ಲಿ ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ನೋಟು ನಿಷೇಧಗೊಳಿಸಲಾಗಿದೆ ಎಂಬ ಭರವಸೆ ನೀಡಲಾಗಿತ್ತು. ಆದರೆ, ನೋಟು ನಿಷೇಧ ಎಂಬ ‘ಮಾಸ್ಟರ್ ಸ್ಟ್ರೋಕ್’ನಿಂದ ಆರು ವರ್ಷದಲ್ಲಿ ಉದ್ಯಮಗಳು ನಾಶವಾಗಿವೆ, ಜನ ಉದ್ಯೋಗ ಕಳೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“2016ರಲ್ಲಿ ಜನರ ಬಳಿ ಇದ್ದ ನಗದಿನ ಪ್ರಮಾಣವನ್ನು 2022ಕ್ಕೆ ಹೋಲಿಸಿದರೆ ಅದು ಶೇ.72ರಷ್ಟು ಏರಿಕೆಯಾಗಿದೆ. ಹೀಗಿದ್ದರೂ ಮೋದಿ ಅವರು ನೋಟು ಅಮಾನ್ಯೀಕರಣವನ್ನು ಮಹಾ ವೈಫಲ್ಯ ಎಂಬುದಾಗಿ ಒಪ್ಪಿಕೊಂಡಿಲ್ಲ” ಎಂದಿದ್ದಾರೆ. “ಆರ್‌ಬಿಐ ವರದಿ ಪ್ರಕಾರ, 2016ರ ನವೆಂಬರ್ 4ರಂದು ದೇಶಾದ್ಯಂತ ಜನರ ಬಳಿ 17.7 ಲಕ್ಷ ಕೋಟಿ ರೂ. ನಗದು ಇತ್ತು. 2022ರ ಅಕ್ಟೋಬರ್ ವೇಳೆಗೆ ಇದು 30.88 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ” ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | Sarvodaya Samavesha | ಸಣ್ಣಪುಟ್ಟ ಭಿನ್ನಮತ ಇದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ: ಖರ್ಗೆಗೆ ಸಿದ್ದು ಮಾತು