ನವದೆಹಲಿ: ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ ಸಕಲ ರೀತಿಯಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಲು ರಣತಂತ್ರ ರೂಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಬುಧವಾರ ರಾತ್ರೋರಾತ್ರಿ ಸಭೆ ನಡೆದಿದ್ದು, ಲೋಕಸಭೆ ಚುನಾವಣೆ, ಸಂಪುಟ ಪುನರ್ ರಚನೆ, ಪಕ್ಷದ ಬಲವರ್ಧನೆ ಸೇರಿ ಹಲವು ವಿಷಯಗಳನ್ನು ಚರ್ಚಿಸುವ ಜತೆಗೆ ಮಾಸ್ಟರ್ ಪ್ಲಾನ್ ಕೂಡ ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿ ಪಕ್ಷದ ಹಲವು ಹಿರಿಯ ನಾಯಕರು ಸಭೆಯಲ್ಲಿ ಹಾಜರಾಗಿದ್ದರು. ಲೋಕಸಭೆ ಚುನಾವಣೆಗೆ ಪಕ್ಷದ ರಣತಂತ್ರಗಳು ಹೇಗಿರಬೇಕು? ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಸಂಪುಟ ಪುನರ್ ರಚನೆ ಮಾಡಬೇಕು. ಬಿಜೆಪಿ ಪ್ರಾಬಲ್ಯ ಇರದ ರಾಜ್ಯಗಳಿಗೂ ಸಂಪುಟದಲ್ಲಿ ಆದ್ಯತೆ ನೀಡಿ ಜನರ ಬೆಂಬಲ ಸೆಳೆಯುವುದು ಸೇರಿ ಹಲವು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
4 ರಾಜ್ಯಗಳ ಚುನಾವಣೆಗೆ ಆದ್ಯತೆ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಇದರ ಕುರಿತು ಕೂಡ ಮೋದಿ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಳು ಲೋಕಸಭೆ ಚುನಾವಣೆಗೆ ಮುನ್ನುಡಿ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಕರ್ನಾಟಕದಲ್ಲಿ ಮಾಡಿದ ತಪ್ಪುಗಳನ್ನು ಈ ರಾಜ್ಯಗಳಲ್ಲಿ ಪುನರಾವರ್ತಿಸದೆ ಮುನ್ನಡೆ ಸಾಧಿಸುವ ಕುರಿತು ಮಾಸ್ಟರ್‌ಪ್ಲಾನ್ ರೂಪಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟವನ್ನು ಪುನರ್‌ರಚನೆ ಮಾಡಲಾಗುತ್ತದೆ ಎಂದೂ ಹೇಳಲಾಗುತ್ತಿದೆ. ಉತ್ತರ ಪ್ರದೇಶದ ನಾಲ್ವರು, ಮಧ್ಯಪ್ರದೇಶದ ಒಬ್ಬರು, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ತಲಾ ಇಬ್ಬರಿಗೆ ಸಚಿವ ಸ್ಥಾನ ನೀಡುವುದು ರಣತಂತ್ರವಾಗಿದೆ. ಆ ಮೂಲಕ ಈ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿ, ಇದರ ಲಾಭವನ್ನು ಚುನಾವಣೆಯಲ್ಲಿ ಗಳಿಸುವುದು ಪಕ್ಷದ ಅಜೆಂಡಾ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: Lok Sabha Election 2024: ಸಾರ್ವತ್ರಿಕ ಚುನಾವಣೆಗೆ ಮೆಗಾ ಪ್ಲಾನ್; ಬಿ.ಎಲ್. ಸಂತೋಷ್ ಸಭೆ, ಏನೆಲ್ಲ ಬದಲಾವಣೆ?
ಈಗಾಗಲೇ ಪಕ್ಷದ ನಾಯಕರು ಸಭೆ ನಡೆಸಿದ್ದು, ಹಲವು ರಣತಂತ್ರ ರೂಪಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷವನ್ನು ಬಲವರ್ಧನೆಗೊಳಿಸುವುದು ಬಿಜೆಪಿ ನಾಯಕರ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಮೂವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ನಾಲ್ವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸುವುದು ಪಕ್ಷದ ಆದ್ಯತೆಯಾಗಿದೆ. ಯಾರಿಗೆ ಈ ಹುದ್ದೆಗಳನ್ನು ನೀಡಬೇಕು ಎಂಬ ಕುರಿತು ಕೂಡ ಈಗಾಗಲೇ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ