Site icon Vistara News

NITI Aayog Meeting: ವಿಕಸಿತ ಭಾರತದ ಕನಸು ಬಿತ್ತಿದ ಮೋದಿ; 11 ಸಿಎಂಗಳು ಗೈರಾದರೂ ಪ್ರಧಾನಿ ಅಭಿವೃದ್ಧಿ ಮಂತ್ರ

Narendra Modi Speech At NITI Aayog Meeting

Narendra Modi's Viksit Bharat push at NITI Aayog meet; 11 CMs skip huddle

ನವದೆಹಲಿ: ನೀತಿ ಆಯೋಗದ ಎಂಟನೇ ಗವರ್ನಿಂಗ್‌ ಸಮಿತಿ ಸಭೆ ನಡೆದಿದ್ದು, 11 ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಉಳಿದ ಸಿಎಂಗಳು ಹಾಜರಾಗಿದ್ದು, ಇದೇ ವೇಳೆ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತದ ಅಭಿವೃದ್ಧಿಯ ನಕ್ಷೆ ಹಾಕಿದ್ದಾರೆ. “ಎಲ್ಲರೂ ಒಗ್ಗೂಡಿ ವಿಕಸಿತ ಭಾರತದ (ಅಭಿವೃದ್ಧಿ ಹೊಂದಿದ ಭಾರತ) ಕನಸು ನನಸು ಮಾಡೋಣ” ಎಂದು ಹೇಳಿದ್ದಾರೆ.

“ಭಾರತವು ಏಳಿಗೆ ಹೊಂದುತ್ತಿದ್ದು, ಸರ್ವ ಕ್ಷೇತ್ರಗಳಲ್ಲಿ ನಾವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಒಕ್ಕೂಟದ ವ್ಯವಸ್ಥೆಯ ಬೇರುಗಳು ಇನ್ನಷ್ಟು ಬಲವಾಗಬೇಕು. ದೇಶದ ಜನರಿಗೆ ಸಕಲ ಮೂಲ ಸೌಕರ್ಯಗಳು ಸಿಗುವಂತಾಗಬೇಕು. ಜಲ ಸಂರಕ್ಷಣೆ, ಪರಿಸರ ರಕ್ಷಣೆ, ಆರ್ಥಿಕ ಶಿಸ್ತಿನಲ್ಲಿ ನಾವು ಇನ್ನಷ್ಟು ನೈಪುಣ್ಯ ಸಾಧಿಸಬೇಕು. ಜಾಗತಿಕ ಮಟ್ಟದ ಸ್ಪರ್ಧೆಗೆ ನಾವು ಇನ್ನಷ್ಟು ಮುಕ್ತವಾಗಬೇಕು. ಸಣ್ಣ ಕೈಗಾರಿಕೆಗಳು, ಎಂಎಸ್‌ಎಂಇಗಳ ಏಳಿಗೆಯಾಗಬೇಕು. ಇದರಿಂದ ಮಾತ್ರ ಭಾರತ ಏಳಿಗೆ ಹೊಂದಲು ಸಾಧ್ಯ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂತಹ ಮನೋಭಾವದೊಂದಿಗೆ 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣ ಮಾಡಬೇಕು” ಎಂದು ಕರೆ ನೀಡಿದರು.

ನೀತಿ ಆಯೋಗದ ಸಭೆಯಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ 100 ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್‌ ಗವರ್ನರ್‌ಗಳು, ಕೇಂದ್ರ ಸಚಿವರು ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲಾಗಿದೆ. ಎಂಎಸ್‌ಎಂಇ, ಮೂಲ ಸೌಕರ್ಯ, ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ, ಕೌಶಲಾಭಿವೃದ್ಧಿ ಸೇರಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.

ಗೈರಾದ ಸಿಎಂಗಳು ಯಾರು? ಏಕೆ?

ದೆಹಲಿಯಲ್ಲಿ ಆಡಳಿತ ಸೇವೆಗಳ ಮೇಲಿನ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಭೆಗೆ ಹಾಜರಾಗಿಲ್ಲ. ಇನ್ನು, ಕೇಂದ್ರದಿಂದ ಅನುದಾನ ಸಿಗುತ್ತಿಲ್ಲ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಕೂಡ ಗೈರಾಗಿದ್ದಾರೆ. ಕರ್ನಾಟಕದಲ್ಲಿ ಸಚಿವರ ಪ್ರಮಾಣವಚನ, ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ನೂತನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.

ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌, ಬೇರೆ ಕಾರ್ಯಕ್ರಮದಿಂದಾಗಿ ಒಡಿಶಾ ಸಿಎಂ ನವೀನ್‌ ಪಾಟ್ನಾಯಕ್‌, ಕೇಂದ್ರದ ಮೇಲಿನ ಅಸಮಾಧಾನದಿಂದಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್‌ ಕುಮಾರ್‌, ತೆಲಂಗಾಣದ ಕೆ.ಚಂದ್ರಶೇಖರ ರಾವ್‌ ಹಾಗೂ ಯಾವುದೇ ಕಾರಣ ನೀಡದೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.

ಇದನ್ನೂ ಓದಿ: NITI Aayog Meeting:‌ ಕೇಂದ್ರಕ್ಕೆ ಬಾಯ್ಕಾಟ್‌ ಬಿಸಿ; ದೀದಿ ಬಳಿಕ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕೇಜ್ರಿವಾಲ್

Exit mobile version