Site icon Vistara News

ರಾಷ್ಟ್ರೀಯ ಲಾಂಛನದ ಸಿಂಹಗಳಿಗೆ ಉಗ್ರ ಸ್ವರೂಪ: ಪ್ರತಿಪಕ್ಷದ ಆರೋಪಕ್ಕೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?

national emblem

ನವ ದೆಹಲಿ: ನಿರ್ಮಾಣ ಹಂತದಲ್ಲಿರುವ ನೂತನ ಸಂಸತ್‌ ಭವನದ ಮೇಲೆ ರೂಪಿಸಲಾಗಿರುವ ಭವ್ಯವಾದ ರಾಷ್ಟ್ರೀಯ ಲಾಂಛನದ ಸ್ವರೂಪದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಕುರಿತಂತೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ “ಅನಾವರಣಗೊಳಿಸಿರುವ ರಾಷ್ಟ್ರೀಯ ಲಾಂಛನ ಮೂಲ ಸಾರನಾಥ ಸಿಂಹ ಲಾಂಛನದಂತೆ ಇದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸಾಕಷ್ಟು ಅಧ್ಯಯನ ನಡೆಸಿಯೇ ಇದನ್ನು ರೂಪಿಸಲಾಗಿದೆʼʼ ಎಂದು ಸ್ಪಷ್ಟಪಡಿಸಿದೆ.

ಸೋಮಾರವಾರ ಪ್ರಧಾನಿ ನರೇಂದ್ರ ಮೋದಿ ಈ ರಾಷ್ಟ್ರೀಯ ಲಾಂಛನವನ್ನು ಅನಾರವಣಗೊಳಿಸಿದ್ದರು. ಅಶೋಕಸ್ತಂಭದ ನಾಲ್ಕು ಸಿಂಹಗಳ ಮುಖವನ್ನು ಒಳಗೊಂಡ ರಾಷ್ಟ್ರೀಯ ಲಾಂಛನದ ‘ಸ್ವರೂಪ’ವನ್ನು ಬದಲಾಯಿಸಲಾಗಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ. ಲಾಂಛನದಲ್ಲಿ ಸಿಂಹಗಳ ಮುಖ ಸೌಮ್ಯವಾಗಿದ್ದರೆ, ಸಂಸತ್‌ ಭವನದ ಮೇಲೆ ರೂಪಿಸಲಾಗಿರುವ ಲಾಂಛನದಲ್ಲಿ ಉಗ್ರ ಸ್ವರೂಪವನ್ನು ನೀಡಲಾಗಿದೆ ಎಂದು ಬೊಟ್ಟು ಮಾಡಿದ್ದಾರೆ.

ಈ ಆರೋಪಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, “ಸೌಂದರ್ಯ ಎನ್ನುವುದು ನೋಡುಗನ ದೃಷ್ಟಿಯಲ್ಲಿರುತ್ತದೆ ಎಂಬ ಮಾತಿದೆ, ಮುಖದ ಶಾಂತತೆ ಹಾಗೂ ಉಗ್ರತೆ ಕೂಡ ಹಾಗೆಯೇ. ಈಗ ಅನಾವರಣಗೊಳಿಸಿರುವ ರಾಷ್ಟ್ರೀಯ ಲಾಂಛನ ಮೂಲ ಸಾರನಾಥ ಸಿಂಹ ಲಾಂಛನದಂತೆ ಇದೆ. ಇದರಲ್ಲಿ
ಯಾವುದೇ ಬದಲಾವಣೆ ಮಾಡಲಾಗಿಲ್ಲʼʼ ಎಂದು ವಿವರಿಸಿದ್ದಾರೆ.

ಕೇಂದ್ರ ಸರ್ಕಾರವು ಲಾಂಛನದಲ್ಲಿನ ಸಿಂಹಗಳ ಸ್ವರೂಪವನ್ನು ಬದಲಾಯಿಸುವುದರ ಮೂಲಕ ರಾಷ್ಟ್ರೀಯ ಲಾಂಛನಕ್ಕೆ ಅಗೌರವ ತೋರಿದೆ ಎಂದು ರಾಜ್ಯಸಭಾ ಸದಸ್ಯ ಜಯರಾಮ್‌ ರಮೇಶ್‌ ಸೇರಿದಂತೆ ಅನೇಕ ವಿಪಕ್ಷಗಳ ನಾಯಕರು ಕಿಡಿ ಕಾರಿದ್ದಾರೆ. “ಹಿತಭಾವ, ಘನತೆ, ಆತ್ಮವಿಶ್ವಾಸದ ಪ್ರತೀಕವಾಗಿದ್ದ ಸಿಂಹಗಳ ಮುಖಭಾವಕ್ಕೆ ಬದಲಾಗಿ, ಕೇಡುಂಟು ಮಾಡುವ, ಆಕ್ರಮಣ ಶೈಲಿಯ ಮುಖಭಾವ ಇರುವಂತೆ ಈ ಲಾಂಛನವಿದೆʼʼ ಎಂದು
ಆಕ್ಷೇಪಿಸಿದ್ದಾರೆ.

ಈ ಲಾಂಛನವನ್ನು ಸರಿಯಾಗಿ ಅಧ್ಯಯನ ನಡೆಸಿಯೇ ರೂಪಿಸಲಾಗಿದೆ. ಮೂಲ ಲಾಂಛನದಲ್ಲಿ ಮುಖಭಾವ ಹೇಗಿದೆಯೋ ಹಾಗಿಯೇ ಇದೂ ಇದೆ. ಮೂಲ ಸಾರನಾಥ ರಾಷ್ಟ್ರೀಯ ಲಾಂಛನ 1.6 ಮೀಟರ್ಎ ತ್ತರ ಇದೆ. ಸಂಸತ್ತಿನ
ಈಗ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನ 6.5 ಮೀಟರ್ ಎತ್ತರ ಇದೆ. ಇಷ್ಟೇ ವ್ಯತ್ಯಾಸ ಬಿಟ್ಟರೆ ಬೇರೇನೂ ಮಾಡಲಾಗಿಲ್ಲ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಾಕಾರರ ಬಾಯಿ ಮುಚ್ಚಿಸಲು ಪ್ರಯತ್ನಿಸಿದ್ದಾರೆ.


ಬಿಜೆಪಿ ಕೂಡ ವಿಪಕ್ಷಗಳ ಈ ಆರೋಪವನ್ನು ತಳ್ಳಿಹಾಕಿದ್ದು, ಇದು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುವ ಕೆಲಸ ಎಂದು ದೂರಿದೆ. ಮೂಲ ಲಾಂಛನವನ್ನು ನೋಡದೇ ಕೆಲ ಕಾಂಗ್ರೆಸ್‌ ನಾಯಕರು ಆಕ್ಷೇಪಣೆ ವ್ಯಕ್ತಪಡಿಸುತ್ತಿರುವುದು ಆಶ್ಚರ್ಯಕರ ಎಂದಿದೆ.

ನೂತನ ಸಂಸತ್‌ ಭವನ ಕಟ್ಟಡದ ಕೇಂದ್ರ ಭಾಗದ ಚಾವಣಿಯ ಮೇಲೆ ಪ್ರತಿಷ್ಠಾಪನೆಯಾಗಿರುವ ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. ಇದು ೬.೫ ಮೀಟರ್‌ ಎತ್ತರ ಮತ್ತು ೪.೪ ಮೀಟರ್‌ ಅಗಲವಿದ್ದು, ೯,೫೦೦ ಕೆ.ಜಿ ತೂಕವಿದೆ. ರಾಷ್ಟ್ರ ಲಾಂಛನಕ್ಕೆ ಪೂರಕವಾಗಿ ಉಕ್ಕಿನಿಂದ ತಯಾರಿಸಿದ ೬,೫೦೦ ಕೆ.ಜಿ ತೂಕದ ರಚನೆಯನ್ನೂ ಅಳವಡಿಸಲಾಗಿದೆ. ಒಟ್ಟು ಎಂಟು ಹಂತಗಳಲ್ಲಿ ಈ ಲಾಂಛನವನ್ನು ನಿರ್ಮಿಸಲಾಗಿದೆ. 

ಈ ಲಾಂಛನವನ್ನು ಅನಾವರಣ ಗೊಳಿಸುವಾಗ ವಿಪಕ್ಷಗಳ ನಾಯಕರಿಗೆ ಆಹ್ವಾನ ನೀಡಿರಲಿಲ್ಲ. ಅಲ್ಲದೆ ಧಾರ್ಮಿಕ ಆಚರಣೆಗಳನ್ನು ನಡೆಸಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ ಎಂದು ಸೋಮವಾರ ವಿಪಕ್ಷಗಳ ನಾಯಕರು ಟೀಕಿಸಿದ್ದರು. ಇದರ ಬೆನ್ನಲ್ಲೇ ಈಗ ಲಾಂಛನದ ಸ್ವರೂಪದ ವಿವಾದ ಭುಗಿಲೆದ್ದಿದೆ.

ಇದನ್ನೂ ಓದಿ| ಮೋದಿಯಿಂದ ನೂತನ ಸಂಸತ್‌ ಭವನದ ಭವ್ಯ ರಾಷ್ಟ್ರೀಯ ಲಾಂಛನ ಅನಾವರಣ, ಇದರ ತೂಕ ಎಷ್ಟಿರಬಹುದು?

Exit mobile version