Site icon Vistara News

2ನೇ ದಿನವೂ ಮುಂದುವರಿದ ರಾಹುಲ್‌ ಗಾಂಧಿ ಇ ಡಿ ವಿಚಾರಣೆ; ಧರಣಿ ಕುಳಿತ ಕಾಂಗ್ರೆಸ್ಸಿಗರು

National Herald Case

ನವ ದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ (National Herald Case) ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಇಂದು (ಜ.14) ಮತ್ತೆ ಅನುಷ್ಠಾನ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ನಿನ್ನೆ (ಜ.13) ಬರೋಬ್ಬರಿ 11 ತಾಸುಗಳ ಕಾಲ ರಾಹುಲ್‌ ಗಾಂಧಿಗೆ ಇ.ಡಿ. ಅಧಿಕಾರಿಗಳು ಗ್ರಿಲ್‌ ಮಾಡಿದ್ದಾರೆ. ಆದರೆ ವಿಚಾರಣೆ ಇನ್ನೂ ಪೂರ್ಣವಾಗಿಲ್ಲ. ಇಂದು ಅವರ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆಯೇ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸೋದರ ರಾಹುಲ್‌ ಗಾಂಧಿ ನಿವಾಸಕ್ಕೆ ಆಗಮಿಸಿದ್ದಾರೆ.

ನಿನ್ನೆ ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ರಾಹುಲ್‌ ಗಾಂಧಿ ಇ.ಡಿ. ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ನೂರಾರು ಕಾರ್ಯಕರ್ತರೊಂದಿಗೆ, ಥೇಟ್‌ ಚುನಾವಣಾ ಪ್ರಚಾರದ ಮಾದರಿಯಲ್ಲೇ ಹೋಗಿ ಇ.ಡಿ. ಕಚೇರಿ ತಲುಪಿದ್ದ ರಾಹುಲ್‌ ಗಾಂಧಿಗೆ ಮಧ್ಯಾಹ್ನ 2.10ರ ಹೊತ್ತಿಗೆ ಒಮ್ಮೆ ಮಾತ್ರ ಬ್ರೇಕ್‌ ಕೊಡಲಾಗಿತ್ತು. ಮತ್ತೆ 3.30ರಿಂದ ಸಂಜೆಯವರೆಗೂ ವಿಚಾರಣೆ ಮುಂದುವರಿದಿತ್ತು.

ಮುಂದುವರಿದ ಪ್ರತಿಭಟನೆ
ರಾಹುಲ್‌ ಗಾಂಧಿ ಇ.ಡಿ. ವಿಚಾರಣೆ ವಿರೋಧಿಸಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ನಿನ್ನೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ (ಜೂ.13) ಕಾಂಗ್ರೆಸ್‌ ನಾಯಕರು ಸತ್ಯಾಗ್ರಹ ಮೆರವಣಿಗೆ ನಡೆಸಿದ್ದರು. ನೂಕುನುಗ್ಗಲು ಉಂಟಾಗಿತ್ತು. ಪ್ರತಿಭಟನಾ ನಿರತರಾಗಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಛತ್ತೀಸ್‌ಗಢ್‌ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌, ವಕ್ತಾರರಣದೀಪ್‌ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮತ್ತಿತರರನ್ನು ನಿನ್ನೆ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ʼಪಪ್ಪುʼ ಎಂದ ಯುವ ಕಾಂಗ್ರೆಸ್‌!

ಈ ಹೋರಾಟದ ಕಾವು ಇವತ್ತೂ ಕೂಡ ಮುಂದುವರಿದಿದೆ. ಇಂದೂ ರಾಹುಲ್‌ ಗಾಂಧಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್‌ ಕಾರ್ಯಕರ್ತರು ದೆಹಲಿಯ ಅಕ್ಬರ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಧರಣಿ ಕುಳಿತಿದ್ದಾರೆ. ನಿನ್ನೆಯೂ ಕೂಡ ಕಾಂಗ್ರೆಸ್‌ ನಾಯಕರಿಗೆ ಪಕ್ಷದ ಕಚೇರಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಇತ್ತು. ಆದರೆ ಅವರು ಸಾರ್ವಜನಿಕವಾಗಿ ಮೆರವಣಿಗೆ ನಡೆಸಿ, ಇ.ಡಿ. ಕಚೇರಿಯವರೆಗೂ ಬಂದಿದ್ದರು. ಇ.ಡಿ. ಆವರಣದಲ್ಲಿ ಹೇರಲಾಗಿದ್ದ ಸೆಕ್ಷನ್‌ 144 ಉಲ್ಲಂಘಿಸಿದ್ದರು. ಹಾಗಾಗಿ ವಶಕ್ಕೆ ಪಡೆಯಬೇಕಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: National Herald: ರಾಹುಲ್‌ ಗಾಂಧಿಗೆ ಇ.ಡಿ ಫುಲ್ ಗ್ರಿಲ್‌;‌ ದೇಶಾದ್ಯಂತ ಕೈ ಪ್ರತಿಭಟನೆಯ ಸವಾಲ್‌

Exit mobile version