Site icon Vistara News

National Herald Case | ಆರು ಗಂಟೆಗಳ ಕಾಲ ಸೋನಿಯಾ ಗಾಂಧಿ ವಿಚಾರಣೆ

National Herald Case

ನವ ದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ಗೆ (National Herald Case) ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಮಂಗಳವಾರ ಒಟ್ಟು ಆರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಬೆಳಗ್ಗೆ ೧೧ ಗಂಟೆಗೆ ಎರಡನೇ ಸುತ್ತಿನ ವಿಚಾರಣೆಗಾಗಿ ಕಚೇರಿಗೆ ಆಗಮಿಸಿದ ಅವರಿಂದ ಮೊದಲಿಗೆ ಸುಮಾರು ಎರಡೂವರೆಗಂಟೆಗಳ ಕಾಲ ಇಡಿ ಅಧಿಕಾರಿಗಳು ಹೇಳಿಕೆ ಪಡೆದುಕೊಂಡಿದ್ದಾರೆ.

ಮಧ್ಯಾಹ್ನ ೨ ಗಂಟೆಯ ಹೊತ್ತಿಗೆ ಭೋಜನ ವಿರಾಮ ನೀಡಲಾಗಿತ್ತು. ಬಳಿಕೆ ೩.೩೦ರ ವೇಳೆಗೆ ಮತ್ತೆ ವಿಚಾರಣೆಗೆ ಹಾಜರಾದ ಸೋನಿಯಾಗಾಂಧಿ ಸಂಜೆ ೭ ಗಂಟೆಯವರೆಗೆ ವಿಚಾರಣೆ ಎದುರಿಸಿದರು. ಒಟ್ಟಾರೆ ಆರು ಗಂಟೆಗಳ ಕಾಲ ಅವರ ವಿಚಾರಣೆ ನಡೆದಿದೆ. ಬುಧವಾರ ಮತ್ತೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದಾರೆ.

ಎರಡು ದಿನಗಳ ವಿಚಾರಣೆಯ ಸಂದರ್ಭದಲ್ಲಿ ಒಟ್ಟು ೫೫ ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಸೋನಿಯಾ ಗಾಂಧಿ ಮುಂದಿಟ್ಟಿದ್ದಾರೆಂದು ಇಡಿಯ ಮೂಲಗಳು ತಿಳಿಸಿವೆ. ರಾಹುಲ್‌ ಗಾಂಧಿಯವರಿಗೆ ಕೇಳಲಾಗಿದ್ದ ಬಹುತೇಕ ಪ್ರಶ್ನೆಗಳನ್ನೇ ಸೋನಿಯಾ ಗಾಂಧಿಯವರಿಗೂ ಕೇಳಿ ಹೇಳಿಕೆ ಪಡೆದುಕೊಳ್ಳಲಾಗಿದೆ.

ಜುಲೈ 21ಕ್ಕೆ ವಿಚಾರಣೆ ಎದುರಿಸಿದ್ದ ಸೋನಿಯಾ ಗಾಂಧಿಗೆ ಜುಲೈ 25ಕ್ಕೆ ಮತ್ತೆ ಬರುವಂತೆ ಇ ಡಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ನಂತರ ಜುಲೈ 26ಕ್ಕೆ ವಿಚಾರಣೆ ಮುಂದೂಡಲಾಗಿತ್ತು. ಅದರಂತೆ ಮಂಗಳವಾರ ಬೆಳಗ್ಗೆ ಸೋನಿಯಾ ಗಾಂಧಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಜತೆಗೆ ಇಡಿ ಕಚೇರಿಗೆ ಹಾಜರಾಗಿದ್ದರು. ರಾಹುಲ್‌ ಗಾಂಧಿ ಅಲ್ಲಿಂದ ವಾಪಸ್‌ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆ, ಪ್ರಿಯಾಂಕಾ ಗಾಂಧಿ ತಾಯಿಯ ವಿಚಾರಣೆ ಮುಗಿಯುವವರೆಗೂ ಇನ್ನೊಂದು ಕೋಣೆಯಲ್ಲಿಯೇ ಕುಳಿತಿದ್ದರು.

ಸೋನಿಯಾಗಾಂಧಿ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬುಧವಾರ ವಿಚಾರಣೆ ಮುಂದುವರಿಯಲಿರುವುದರಿಂದ ಸತ್ಯಾಗ್ರಹವನ್ನು ಮುಂದುವರಿಸಲಾಗುವುದು ಎಂದು ಕಾಂಗ್ರೆಸ್‌ ನಾಯಕ ಮಕೇನ್‌ ತಿಳಿಸಿದ್ದಾರೆ.

ಇದನ್ನೂ ಓದಿ | Viral Video: ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಜುಟ್ಟು ಹಿಡಿದು ಎಳೆದಾಡಿದ ದೆಹಲಿ ಪೊಲೀಸ್‌

Exit mobile version