Site icon Vistara News

Ram Mandir: ಮಂದಿರ ಉದ್ಘಾಟನೆ ದಿನ ‘ರಾಷ್ಟ್ರೀಯ ರಜೆ’ ಘೋಷಿಸಲು ರಾಷ್ಟ್ರಪತಿಗೆ ಮನವಿ

Ram Mandir

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ಕೇವಲ 4 ದಿನ ಉಳಿದಿವೆ. ದೇಶ-ವಿದೇಶಗಳ ಕೋಟ್ಯಂತರ ರಾಮ ಭಕ್ತರು ಉದ್ಘಾಟನೆಗೆ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸಾವಿರಾರು ಗಣ್ಯರು ಶ್ರೀರಾಮನ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾಗುವ ಕಾರಣ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದರ ಬೆನ್ನಲ್ಲೇ, ರಾಮಮಂದಿರ ಉದ್ಘಾಟನೆಯಾಗುವ ಜನವರಿ 22ರಂದು ‘ರಾಷ್ಟ್ರೀಯ ರಜಾ ದಿನ’ (National Holiday) ಎಂಬುದಾಗಿ ಘೋಷಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ (Droupadi Murmu) ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ.

ಹೌದು, ಘನಶ್ಯಾಮ ಉಪಾಧ್ಯಾಯ ಎಂಬ ವಕೀಲರೊಬ್ಬರು ಜನವರಿ 22ಅನ್ನು ರಾಷ್ಟ್ರೀಯ ರಜಾ ದಿನ ಎಂಬುದಾಗಿ ಘೋಷಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ. “ಭಗವಾನ್‌ ಶ್ರೀರಾಮನು ಕೋಟ್ಯಂತರ ಜನರ ಆರಾಧ್ಯ ದೈವವಾಗಿದ್ದಾನೆ. ಆತ ಭಾರತೀಯರ ಹೆಮ್ಮೆ ಹಾಗೂ ಆದರ್ಶ ಪುರುಷನಾಗಿದ್ದಾನೆ. ಎಲ್ಲ ಹಿಂದುಗಳ ಉಸಿರಿನಲ್ಲಿ ರಾಮ ಬೆರೆತಿದ್ದಾನೆ. ಹಾಗಾಗಿ, ಜನವರಿ 22ಅನ್ನು ರಾಷ್ಟ್ರೀಯ ರಜಾ ದಿನ ಎಂಬುದಾಗಿ ಘೋಷಿಸಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೋರ್ಟ್‌ಗಳಿಗೂ ರಜೆ ನೀಡಿ ಎಂದು ಸಿಜೆಐಗೆ ಪತ್ರ

ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವ ದಿನವಾದ ಜನವರಿ 22ರಂದು ದೇಶದ ಎಲ್ಲ ಕೋರ್ಟ್‌ ಕಲಾಪಗಳಿಗೆ ರಜೆ ಘೋಷಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರಿಗೆ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಕೂಡ ಮನವಿ ಮಾಡಿದೆ. “ರಾಮಮಂದಿರ ಉದ್ಘಾಟನೆ ದಿನವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೋಟ್ಯಂತರ ಜನರ ಕನಸು ನನಸಾಗುವ ದಿನವಾಗಿದೆ. ಹಾಗಾಗಿ, ಜನವರಿ 22ರಂದು ಕೋರ್ಟ್‌ ಕಲಾಪಗಳಿಗೆ ರಜೆ ನೀಡಬೇಕು” ಎಂದು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರು ಸಿಜೆಐ ಅವರಿಗೆ ಮನವಿ ಮಾಡಿದ್ದಾರೆ.

ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನವೇ ಸರ್ವಧರ್ಮ ಸಮ್ಮೇಳನ ನಡೆಸಲಿರುವ ಮಮತಾ ಬ್ಯಾನರ್ಜಿ!

55 ದೇಶಗಳ ಗಣ್ಯರಿಗೆ ಆಹ್ವಾನ

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ. ವಿದೇಶಗಳಿಂದ ಆಗಮಿಸುವ ಎಲ್ಲ ಗಣ್ಯರು ಜನವರಿ 21ರಂದೇ ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version