Site icon Vistara News

National Youth Day 2024: ಜಗತ್ತಿನಲ್ಲಿ ಸ್ಥಿರವಾಗಿ ಉಳಿಯುವುದೆಂದರೆ ಬದಲಾವಣೆ ಮಾತ್ರ ಎಂದಿದ್ದ ವಿವೇಕಾನಂದರು!

National Youth Day 2024

ಅಲಕಾ ಕೆ, ಮೈಸೂರು
ಜಗತ್ತಿನಲ್ಲಿ ಸ್ಥಿರವಾಗಿ (National Youth Day 2024) ಉಳಿಯುವುದೆಂದರೆ ಬದಲಾವಣೆ ಮಾತ್ರ ಎಂಬ ಮಾತಿದೆ. ಪ್ರತೀಕ್ಷಣಕ್ಕೆ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಒಂದು ಶತಮಾನದ ಹಿಂದೆ ಬಾಳಿಬದುಕಿದ್ದ ಮಹಾತ್ಮರೊಬ್ಬರ ಮಾತುಗಳು ಇಂದಿಗೂ ಪ್ರಸ್ತುತ ಎಂದರೆ ಸುಮ್ಮನೆ ಅಲ್ಲ. ಅದರಲ್ಲೂ ಯುವಕರಿಗಾಗಿ ಅವರು ಇರಿಸಿದ್ದ ಆಶೋತ್ತರಗಳು ಮತ್ತು ತತ್ವಾದರ್ಶಗಳು ಇಂದಿಗೆ ಮಾತ್ರವಲ್ಲ, ಭವಿಷ್ಯದ ಪೀಳಿಗೆಗಳಿಗೂ ಸಮಕಾಲೀನ ಆಗಬಲ್ಲವು ಎಂದರೆ ಅವರ ಚಿಂತನೆಗಳ ಪ್ರಖರತೆ ಏನೆಂಬುದನ್ನು ಅರಿಯಬೇಕು ನಾವು.

ಜನವರಿ 12ರ ವಿವೇಕ ಜಯಂತಿಯ ಸಂದರ್ಭವನ್ನು ರಾಷ್ಟ್ರೀಯ ಯುವ ದಿನವೆಂದು ಭಾರತ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ, ಯುವಕರನ್ನು ಸ್ಫೂರ್ತಗೊಳಿಸುವಂಥ ವಿವೇಕಾನಂದರ ವಿಚಾರಧಾರೆಯ ಬಗೆಗೊಂದು ಚಿಂತನೆ.
“ಏಳಿ, ಜಾಗ್ರತರಾಗಿ. ಗುರಿಯನ್ನು ಸೇರುವವರೆಗೆ ನಿಲ್ಲಬೇಡಿ”, ʻನಿನ್ನ ಬಾಳಿನ ಶಿಲ್ಪಿ ನೀನೆʼ, ʻಶಕ್ತಿಯೇ ಜೀವನ ದೌರ್ಬಲ್ಯವೇ ಮರಣʼ ಮುಂತಾದ ಮಾತುಗಳು ಇಂದಿಗೂ ಅಲ್ಲಲ್ಲಿ ಘೋಷಣೆಗಳಂತೆ ಕೇಳಿಬರುತ್ತವೆ. ಆದರೆ ಹೀಗೆ ಹೇಳಿ-ಕೇಳಿ ಮಾಡುವಾಗ ಇವುಗಳನ್ನು ಮೂಲದಲ್ಲಿ ಹೇಳಿದವರಾರು ಎಂಬ ಬಗ್ಗೆ, ಹೇಳಿದ ಸ್ವಾಮಿ ವಿವೇಕಾನಂದರ ಬಗ್ಗೆ ಯೋಚಿಸುವುದು ಅಪರೂಪ. “ಫುಟ್ಬಾಲ್‌ ಆಡಿ ಬಲಿಷ್ಠವಾದ ಸ್ನಾಯುಗಳನ್ನು ಪಡೆದಿರೆಂದರೆ ನಿಮಗೆ ಭಗವದ್ಗೀತೆ ಸ್ಪಷ್ಟವಾಗಿ ಅರ್ಥವಾಗುವುದು” ಎನ್ನುತ್ತಾ, ಧರ್ಮಪ್ರಜ್ಞೆ ಎನ್ನುವುದು ಆಡುಂಬೊಲದಷ್ಟೇ ಆಪ್ತ, ಅಗತ್ಯ ಎಂದು ಯುವಕರಿಗೆ ಶತಮಾನದ ಹಿಂದೆಯೇ ತಿಳಿಹೇಳಿದವರು. ದೇಶವೊಂದರ ಮುನ್ನಡೆಗೆ ಅಲ್ಲಿನ ಯುವ ಶಕ್ತಿಯು ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಉನ್ನತಿ ಹೊಂದಬೇಕು. ಆಗ ಮಾತ್ರವೇ ಆಧುನಿಕ ಭಾರತದ ನಿರ್ಮಾಣಕ್ಕೆ ಅಗತ್ಯವಾದಂಥ ಇಚ್ಛಾಶಕ್ತಿಯನ್ನು ಸಿದ್ಧಪಡಿಸಲು ಸಾಧ್ಯ ಎಂಬ ದೂರದರ್ಶಿತ್ವವನ್ನು ಆಗಲೇ ಹೊಂದಿದ್ದವರು.

ನರೇಂದ್ರನೆಂಬ ಬಾಲಕ

ನರೇಂದ್ರನೆಂಬ ಕುತೂಹಲಿ ಎಳೆಯ ಬಾಲನೊಬ್ಬ ಮುಂದೊಂದು ದಿನ ಆಧ್ಯಾತ್ಮದ ಪ್ರಭೆಯಾಗಿ ವಿಶ್ವವನ್ನೇ ಬೆಳಗಿದ್ದೀಗ ಇತಿಹಾಸ. ಆದರೆ ಅವರ ಬಗ್ಗೆ ಅದಷ್ಟನ್ನೇ ಗ್ರಹಿಸಿದರೆ, ಅರಿವು ಅಪೂರ್ಣವಾಗುತ್ತದೆ. ಎಳವೆಯ ಕುತೂಹಲ, ಯೌವನದ ಉತ್ಸಾಹ, ವಾರ್ಧಕ್ಯದ ಅನುಭವ, ಯೋಧನ ಕೆಚ್ಚು, ಮಾತೆಯ ಮಮತೆ, ಪ್ರಕಾಂಡ ಪಾಂಡಿತ್ಯ, ಪ್ರಚಂಡ ವಾಕ್ಚಾತುರ್ಯ, ಸಾಮಾಜಿಕ ಕಾಳಜಿ, ಆಧ್ಯಾತ್ಮಿಕ ಹಸಿವು, ಅಪಾರ ಕರುಣೆ, ವಿಶಾಲ ಮನಸ್ಸು… ಹೀಗೆ ಹತ್ತಾರು ಸಾಧ್ಯತೆಗಳು ವಿವೇಕಾನಂದರಲ್ಲಿ ಮೇಳೈಸಿದ್ದವು. ಧರ್ಮದ ಬಗ್ಗೆ ಇದ್ದಷ್ಟೇ ಪ್ರೀತಿ ಅವರಿಗೆ ವಿಜ್ಞಾನದ ಬಗ್ಗೆಯೂ ಇತ್ತು; ಪ್ರಾಚೀನ ಸಂಗತಿಗಳ ಬಗ್ಗೆ ಇದ್ದಷ್ಟೇ ಆಸಕ್ತಿ ಆಧುನಿಕ ವಿಷಯಗಳ ಮೇಲೂ ಇತ್ತು. ಇಂಥ ಬಹುಮುಖಿ ವ್ಯಕ್ತಿತ್ವವು ಅಂದಿನಿಂದ ಇಂದಿನವರೆಗೂ ಅಸಂಖ್ಯಾತ ಯುವಕರನ್ನು ಪ್ರಭಾವಿಸಿದ್ದು ಹೌದು.
ʻಆತ್ಮವಿ‍ಶ್ವಾಸವಿರುವ ಕೆಲವು ಯುವಕರನ್ನು ಕೊಡಿ, ಪ್ರಪಂಚವನ್ನೇ ಗೆಲ್ಲುತ್ತೇನೆʼ ಎಂಬ ದೃಢನುಡಿ ಅವರದ್ದಾಗಿತ್ತು. ಅಂದಿನ ದಿನಗಳಲ್ಲಿ ದೇಶವನ್ನು ಶಿಥಿಲಗೊಳಿಸಿದ್ದ ಬಡತನ, ಅನಕ್ಷರತೆ, ಮೂಢನಂಬಿಕೆಯಂಥ ಸಮಸ್ಯೆಗಳ ಮೂಲೋತ್ಪಾಟನೆ ಯುವಕರಿಂದ ಸಾಧ್ಯ ಎಂದು ಬಲವಾಗಿ ಅವರು ನಂಬಿದ್ದರು. “ಬಡವರ, ಅಮಾಯಕರ, ದೀನದಲಿತರ ಪರವಾದ ಈ ಸಹಾನುಭೂತಿಯನ್ನು, ಈ ಹೋರಾಟವನ್ನು ನಿಮಗೆ ಬಿಟ್ಟುಕೊಡುತ್ತಿದ್ದೇನೆ. ಪ್ರತಿದಿನ ಕೆಳಗೆ ಕುಸಿಯುತ್ತಲೇ ಇರುವ ಜನರ ಉದ್ಧಾರಕ್ಕೆ ನಿಮ್ಮ ಇಡೀ ಜೀವನವನ್ನು ಮುಡಿಪಾಗಿಡುವ ಪ್ರತಿಜ್ಞೆಯನ್ನು ಕೈಗೊಳ್ಳಿ…ಇತರರಿಗೆ ಮೋಕ್ಷ ಸಂಪಾದಿಸಲು ನೀವೇ ನರಕಕ್ಕೆ ಹೋಗಿ” ಎನ್ನುವ ಮೂಲಕ ಯುವಕರ ಮೇಲೆ ಬಹುದೊಡ್ಡ ಹೊಣೆಯನ್ನು ಅವರು ಹೊರಿಸಿದ್ದರು. ಆದರೆ ಅವೆಲ್ಲ ಅಂದಿನ ದಿನಗಳಿಗಾಯಿತು, ಇಂದಿಗೇನು ಎನ್ನುವ ಪ್ರಶ್ನೆ ಬರಬಹುದು!

ಚಿಂತನೆಗಳು ಇಂದೇಕೆ ಪ್ರಸ್ತುತ?

ಯುವಕರು ತಮ್ಮನ್ನು ತಾವು ಅರಿತುಕೊಳ್ಳುವ ಬಗ್ಗೆ ಅವರ ನಿಲುವು ಸ್ಪಷ್ಟವಾಗಿತ್ತು. “ಯಾವನು ಅಹೋರಾತ್ರಿ ತಾನು ಯಾವ ಕೆಲಸಕ್ಕೂ ಬಾರದವನು ಎಂದು ಭಾವಿಸುವನೋ, ಅವನಿಂದ ಜಗತ್ತಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಒಬ್ಬಾತ ತಾನು ನೀಚ, ದುಃಖಿ, ಶೂನ್ಯನೆಂದು ಎಣಿಸಿದರೆ, ಅವನು ಹಾಗೆಯೇ ಆಗುವುದಲ್ಲಿ ಸಂದೇಹವಿಲ್ಲ. ಮೊದಲು ನಿಮ್ಮಲ್ಲಿ ನಿಮಗೆ ಶ್ರದ್ಧೆ ಇರಲಿ. ಆತ್ಮವಿಶ್ವಾಸದಲ್ಲಿ ನಂಬಿಕೆ ಇರಲಿ. ನಿಮ್ಮ ಬಗ್ಗೆ ಮನಃಪೂರ್ವಕವಾಗಿ ಒಳಿತನ್ನೇ ಭಾವಿಸಿದರೆ ಅಂತೆಯೇ ಆಗುತ್ತೀರಿ” ಎಂಬ ಅವರ ಮಾತುಗಳು ಇಂದಿನ ದಿನಕ್ಕೆ ಹೇಗೆ ಸಲ್ಲುತ್ತವೆ? ಹೆತ್ತವರ ಒತ್ತಾಸೆ, ಮಿತ್ರರ ಒತ್ತಡ, ಸಾಮಾಜಿಕ ಗೋಜಲುಗಳು, ಸಂತೆಯಲ್ಲೂ ಒಂಟಿಯಾಗುತ್ತಿರುವ ಇಂದಿನ ಯುವ ಜನತೆಗೆ ಇದು ಏನನ್ನು ಹೇಳಬಲ್ಲದು? ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವುದೇ ಸತ್ಯವಲ್ಲ, ಅಲ್ಲಿ ಬರುವ ಅಭಿಪ್ರಾಯಗಳೇ ಅಂತಿಮವೂ ಅಲ್ಲ, ಅದರ ಹೊರತಾಗಿ ತಮಗೊಂದು ಅಸ್ತಿತ್ವವಿದೆ ಎಂಬುದರತ್ತ ಬೆರಳು ತೋರುತ್ತಿದೆಯಲ್ಲ.

ಶಿಕ್ಷಣದಲ್ಲಿ ಪ್ರತಿಯೊಂದಕ್ಕೂ ಸ್ಪೆಶಲೈಸ್‌ ಆಗುವಂಥ ಕಾಲವಿದು. ಎಡಗಿವಿಯ ವೈದ್ಯರು ಬಲಗಿವಿ ನೋಡುವುದಿಲ್ಲ ಎಂಬುದು ಕುಹಕದ ಮಾತಾದರೂ, ವ್ಯಾಸಂಗವನ್ನು ಒಟ್ಟಂದದಲ್ಲಿ ನೋಡುವ ಸಮಗ್ರ ದೃಷ್ಟಿಕೋನ ಕಡಿಮೆಯಾಗುತ್ತಿದೆ. ಆದರೆ ಶಿಕ್ಷಣವೆಂದರೆ ಕೇವಲ ಪುಸ್ತಕದ ಚರಟವಲ್ಲ ಎಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು. ವಿಜ್ಞಾನ, ತತ್ವಜ್ಞಾನ, ಸಮಾಜಶಾಸ್ತ್ರ, ಕಲೆ, ಸಂಸ್ಕೃತಿ, ದೇಶಪ್ರೇಮ, ಆತ್ಮಾಭಿಮಾನ ಮುಂತಾದ ಎಲ್ಲದರ ಅರಿವೂ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು ಎಂಬುದು ಅವರ ಇಂಗಿತ. “ಕೇವಲ ಪರೀಕ್ಷೆ ಪಾಸು ಮಾಡಿ ಚೆನ್ನಾಗಿ ಮಾತಾಡಿಬಿಟ್ಟರೆ ನಿಮ್ಮ ಪಾಲಿಗೆ ಶಿಕ್ಷಿತರಾದಂತಾಯಿತು! ಯಾವ ವಿದ್ಯೆಯ ಅಭಿವೃದ್ಧಿಯಿಂದ ಇತರ ಸಾಧಾರಣರನ್ನು ಜೀವನ ಸಂಗ್ರಾಮದಲ್ಲಿ ಸಮರ್ಥರನ್ನಾಗಿ ಮಾಡುವುದಕ್ಕಾಗುವುದಿಲ್ಲವೋ, ಯಾವುದು ಮನುಷ್ಯನಿಗೆ ಚಾರಿತ್ರ್ಯಬಲ, ಪರಸೇವಾತತ್ಪರತೆ, ಸಿಂಹ ಸಾಹಸಿಕತೆಯನ್ನು ಒದಗಿಸುವುದಿಲ್ಲವೋ, ಅದು ವಿದ್ಯೆಯೇನು?” ಎಂದು ಪ್ರಶ್ನಿಸಿದ್ದ ಅವರು, ಎಲ್ಲಾ ವಿದ್ಯಾಭ್ಯಾಸ, ತರಬೇತಿಗಳ ಗುರಿ ಪುರುಷಸಿಂಹರನ್ನು ನಿರ್ಮಾಣ ಮಾಡುವುದು ಎಂದು ಸಾರಿದ್ದರು.

ತತ್ವಜ್ಞಾನ, ಅಧ್ಯಾತ್ಮ ಹಾಗೂ ವಿಜ್ಞಾನ ಪೂರಕ

ಎಲ್ಲಕ್ಕಿಂತ ಮಹತ್ವದ್ದೆಂಬದರೆ ತತ್ವಜ್ಞಾನ, ಅಧ್ಯಾತ್ಮ ಹಾಗೂ ವಿಜ್ಞಾನ ಒಂದಕ್ಕೊಂದು ಭಿನ್ನ ಶಾಸ್ತ್ರಗಳಲ್ಲ; ಪೂರಕವಾದವು ಎಂಬ ಅವರ ನಿಲುವು. ವಿಜ್ಞಾನದ ವಿದ್ಯಾರ್ಥಿಗಳು ತತ್ವಜ್ಞಾನ, ಧರ್ಮ ಮತ್ತು ಅಧ್ಯಾತ್ಮವನ್ನೂ ಅಧ್ಯಯನ ಮಾಡಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಜ್ಞಾನಾರ್ಜನೆ ಮತ್ತು ಧನಾರ್ಜನೆ ಎರಡೂ ಬದುಕಿನ ಅಗತ್ಯಗಳು. ಜೀವನದ ಅಗತ್ಯಗಳನ್ನು ದಾಟಿದ ಮೇಲಷ್ಟೇ ಆಧ್ಯಾತ್ಮದೆಡೆಗೆ ಮನಸ್ಸು ತಿರುಗಿಸುವುದಕ್ಕೆ ಸಾಧ್ಯ ಎಂದೇ ಅವರು ಪ್ರತಿಪಾದಿಸಿದ್ದು ಇಂದಿಗೂ ವಿಶೇಷವೆನಿಸುತ್ತದೆ. ಹಣ ಮಾಡುವತ್ತಲೇ ಚಿತ್ತ ನೆಟ್ಟು, ಬದುಕಿನ ಉಳಿದೆಲ್ಲ ಸತ್ವಗಳನ್ನು ಗೌಣವಾಗಿಸಿಕೊಳ್ಳುತ್ತಿರುವ ಇಂದಿನ ಯುವಜನಕ್ಕೆ ಇದರಲ್ಲಿರುವ ಸಾರ ಅರ್ಥಪೂರ್ಣ. ಐಹಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳ ಬೆಸುಗೆಯನ್ನು ತಿಳಿಸಿ, ಬದುಕಿಗೆ ಪರಿಪೂರ್ಣತೆಯನ್ನು ಒದಗಿಸುವ ಬಗ್ಗೆ ಅವರ ಈ ಚಿಂತನೆಗಳು ಯುವಕರಿಗೆ ಮಾತ್ರವಲ್ಲ, ಎಲ್ಲರಿಗೂ ಮನನೀಯ.
ಧೈರ್ಯ, ಸಾಹಸ ಮತ್ತು ನಿರ್ಭಯರಾಗಿ ಬದುಕುವ ಬಗ್ಗೆ ಅವರು ಯುವಜನತೆಗೆ ನೀಡಿದ ಸಂದೇಶಗಳಂತೂ ಇಂದಿಗೂ ರೋಮಾಂಚನ ಹುಟ್ಟಿಸುತ್ತವೆ. “ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂಥ ಮಾಂಸಖಂಡಗಳು, ಉಕ್ಕಿನಂಥ ನರಗಳು, ಯಾವುದನ್ನೂ ಲೆಕ್ಕಿಸದೆ ವಿಶ್ವದ ರಹಸ್ಯತಮ ಸತ್ಯಗಳನ್ನು ಭೇದಿಸಿ, ಸಾಧ್ಯವಾದರೆ ಕಡಲಿನ ಆಳಕ್ಕಾದರೂ ಹೋಗಿ ಮೃತ್ಯುವಿನೊಂದಿಗೆ ಹೋರಾಡಿ ಗುರಿಯನ್ನು ಸಾಧಿಸಬಲ್ಲ ಅದಮ್ಯ ಪ್ರಚಂಡ ಇಚ್ಛಾಶಕ್ತಿ. ಏಳಿ, ಜಾಗೃತರಾಗಿ… ನಿರ್ಭೀತರಾಗಿ, ಅಂಜಬೇಡಿ. ನಮ್ಮ ದೇಶಕ್ಕೆ ಅದ್ಭುತ ತ್ಯಾಗ ಬೇಕಾಗಿದೆ. ಯುವಕರು ಮಾತ್ರ ಇದನ್ನು ಮಾಡಬಲ್ಲರು” ಎಂದು ಅವರು ನೀಡಿದ್ದ ಕರೆ ಇಂದಿಗೂ, ಎಂದೆಂದಿಗೂ ಹೃದಯಸ್ಪರ್ಶಿಯಾದದ್ದು. ಪ್ರತೀ ಹೆಜ್ಜೆಯಲ್ಲಿ ಗೊಂದಲ, ಅಂಜಿಕೆ, ಅನಿಶ್ಚಿತತೆ, ಅಪನಂಬಿಕೆಯಿಂದ ಬಳಲುತ್ತಿರುವ ಇಂದಿನ ಯುವಜನಾಂಗಕ್ಕೆ ಈ ಸಂದೇಶಗಳು ಮೇಲ್ಪಂಕ್ತಿ ಹಾಕಬಲ್ಲವು.

ಸಮರ್ಥರು ದೇಶಕ್ಕೆ ಬೇಕು

ದೇಶವೊಂದನ್ನು ರೂಪಿಸಬಲ್ಲಂಥ ಯುವಶಕ್ತಿ ಹೇಗಿರಬೇಕು ಎನ್ನುವ ಬಗ್ಗೆ ಅತ್ಯಂತ ನಿಶ್ಚಿತವಾದ ಮತ್ತು ಪ್ರಖರವಾದ ಚಿಂತನೆಗಳು ವಿವೇಕಾನಂದರದ್ದಾಗಿದ್ದವು. ಸವಾಲುಗಳಿಗೆ ಕುಗ್ಗದೆ, ಹೊಸತನದತ್ತ ತುಡಿಯುವ ಸಮರ್ಥರು ಈ ದೇಶಕ್ಕೆ ಬೇಕು ಎಂದು ಹೇಳಿದ್ದರು. ಮಾತ್ರವಲ್ಲ, “ನಿಮ್ಮಂಥ ಯುವಕರಿಗಾಗಿ ನಾನು ಸಾವಿರ ಸಲ ಬೇಕಾದರೂ ಹುಟ್ಟಿ ಬಂದೇನು. ಈ ಕಾಯ ಅಳಿದರೇನು, ನಿಮ್ಮೆಲ್ಲರಲ್ಲಿ ಸೂಕ್ಷ್ಮ ರೂಪದಲ್ಲಿದ್ದು ಸಾಧಿಸಬೇಕಾದ್ದನ್ನು ಸಾಧಿಸುವವರೆಗೆ ನಿಲ್ಲುವುದಿಲ್ಲ” ಎಂದಿದ್ದ ಅವರು ವಿಶಾಲ ಚಿಂತನೆ ಮತ್ತು ಸಂಕಲ್ಪ ಶಕ್ತಿಗಳ ಎರಕದಂತಿದ್ದರು. ಯುವಕರಿಗೆ ಹೆಚ್ಚು ಆದರ್ಶಗಳಿಲ್ಲದ ಇಂದಿನ ಯುಗದಲ್ಲಿ, ಬದುಕಿನ ಯಾವುದೇ ವಿಷಯದಲ್ಲಿ ಸ್ಫೂರ್ತರಾಗಬಲ್ಲಂಥ ಮೇರು ವ್ಯಕ್ತಿ ವಿವೇಕಾನಂದರು.

ಇದನ್ನೂ ಓದಿ: National Youth Day: ಜ.12ರಂದು ರಾಷ್ಟ್ರೀಯ ಯುವ ದಿನ ಆಚರಿಸುವುದೇಕೆ? ಇದರ ಉದ್ದೇಶ ಏನು?

Exit mobile version