Site icon Vistara News

Naveen Patnaik: ಮೋದಿ ಆಡಳಿತಕ್ಕೆ ನವೀನ್‌ ಪಟ್ನಾಯಕ್ ಫಿದಾ;‌ 10ಕ್ಕೆ ನೀಡಿದ ಅಂಕ ಎಷ್ಟು?

Narendra Modi And Naveen Patnaik

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ (Naveen Patnaik) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಡಳಿತದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹಕ್ಕೆ ಕ್ರಮ, ವಿದೇಶಾಂಗ ನೀತಿಗಳು ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗೆಯೇ, ನರೇಂದ್ರ ಮೋದಿ ಅವರ ಆಡಳಿತಕ್ಕೆ ಸಂಬಂಧಿಸಿದಂತೆ 10 ಅಂಕಗಳಿಗೆ ಅವರು 8 ಅಂಕ ನೀಡುವುದಾಗಿ ತಿಳಿಸಿದ್ದಾರೆ.

ಒಡಿಶಾ ಸಾಹಿತ್ಯ ಉತ್ಸವದಲ್ಲಿ ಸಂವಾದ ನಡೆಸುವ ವೇಳೆ ನವೀನ್‌ ಪಟ್ನಾಯಕ್‌ ಅವರು ಮೋದಿ ಆಡಳಿತದ ಬಗ್ಗೆ ಮಾತನಾಡಿದರು. “ನಾನು ಮೋದಿ ಸರ್ಕಾರಕ್ಕೆ 10ರಲ್ಲಿ 8 ಅಂಕಗಳನ್ನು ನೀಡುತ್ತೇನೆ. ವಿದೇಶಾಂಗ ನೀತಿ, ಭ್ರಷ್ಟಾಚಾರ ನಿಗ್ರಹ ಸೇರಿ ಹಲವು ವಿಷಯಗಳಲ್ಲಿ ಮೋದಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಹಾಗೆಯೇ, ಬಿಜೆಪಿಯಲ್ಲೂ ಭ್ರಷ್ಟಾಚಾರ ಕಡಿಮೆ ಇರಲು ಮೋದಿ ಕಾರಣ” ಎಂದು ಹೇಳಿದ್ದಾರೆ.

ಮಹಿಳಾ ಮೀಸಲಾತಿ ವಿಧೇಯಕ ಬಗ್ಗೆಯೂ ಪ್ರತಿಕ್ರಿಯೆ

ಸಂಸತ್‌ನಲ್ಲಿ ಕೆಲ ದಿನಗಳ ಹಿಂದಷ್ಟೇ ಅಂಗೀಕಾರ ದೊರೆತ ಮಹಿಳಾ ಮೀಸಲಾತಿ ವಿಧೇಯಕದ ಕುರಿತು ಕೂಡ ನವೀನ್‌ ಪಟ್ನಾಯಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಮಹಿಳಾ ಮೀಸಲಾತಿ ವಿಧೇಯಕವು ಪ್ರಮುಖ ನಡೆಯಾಗಿದೆ. ನಮ್ಮ ಪಕ್ಷವು ಯಾವಾಗಲೂ ಮಹಿಳಾ ಸಬಲೀಕರಣವನ್ನು ಬೆಂಬಲಿಸಿದೆ. ನನ್ನ ತಂದೆ ಬಿಜು ಪಟ್ನಾಯಕ್‌ ಅವರು ಕೂಡ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಿದ್ದರು. ನಾನು ಶೇ.50ಕ್ಕೆ ಏರಿಕೆ ಮಾಡಿದ್ದೇನೆ” ಎಂದರು.

ಇದನ್ನೂ ಓದಿ: Narendra Modi: ಮೋದಿಯನ್ನು ಬಾಸ್‌ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್‌ ಜನಪ್ರಿಯತೆಗೆ ಹೋಲಿಕೆ

ಒಂದು ದೇಶ, ಒಂದು ಚುನಾವಣೆ ಪರ

ಒಂದು ದೇಶ, ಒಂದು ಚುನಾವಣೆ ವಿಷಯದಲ್ಲೂ ನವೀನ್‌ ಪಟ್ನಾಯಕ್‌ ಅವರು ಕೇಂದ್ರ ಸರ್ಕಾರದ ಪರವಾಗಿದ್ದಾರೆ. “ನಾವು ಯಾವಾಗಲೂ ಒಂದು ದೇಶ, ಒಂದು ಚುನಾವಣೆಯ ಪರ ಇದ್ದೇವೆ. ನಾವು ಕೂಡ ಇದಕ್ಕೆ ಸಿದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ. “ನಾವು ಕೇಂದ್ರದ ಜತೆ ಉತ್ತಮ ಸಂಬಂಧ ಹೊಂದಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸಹಕಾರವೂ ಮುಖ್ಯ” ಎಂದು ಕೂಡ ತಿಳಿಸಿದ್ದಾರೆ. ದೇಶದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸಬೇಕು ಎಂಬುದು ಕೇಂದ್ರ ಸರ್ಕಾರದ ಬಹುದಿನಗಳ ಉದ್ದೇಶವಾಗಿದೆ. ಆದರೆ, ಇದರ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

Exit mobile version