ಪಟಿಯಾಲಾ: 1988ರ ರಸ್ತೆ ಜಗಳ ಪ್ರಕರಣದಲ್ಲಿ ಪಟಿಯಾಲಾ ಸೆಂಟ್ರಲ್ ಜೈಲು ಸೇರಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu)ಗೆ ಅಲ್ಲಿ ಕ್ಲರ್ಕ್ (ಗುಮಾಸ್ತ) ಕೆಲಸ ಸಿಕ್ಕಿದೆ. ಅವರೀಗ ಜೈಲಿನ ಬ್ಯಾರಿಕ್ ಸಂಖ್ಯೆ 7ರಲ್ಲಿದ್ದು, ಕೈದಿ ಸಂಖ್ಯೆ 241383. ಕಾರಾಗೃಹದಲ್ಲಿರುವ ಕೈದಿಗಳು ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡುತ್ತಾರೆ. ಈ ವೇಳೆ ಅವರೆಲ್ಲ ಸೆಲ್‌ನಿಂದ ಹೊರ ಹೋಗಿರುತ್ತಾರೆ. ಆದರೆ ಕಾರಾಗೃಹದ ಆವರಣದೊಳಗೇ ಇರುತ್ತಾರೆ. ಮಾಡಿದ ಕೆಲಸಕ್ಕೆ ಅನುಗುಣವಾಗಿ ಅವರಿಗೆ ವೇತನವನ್ನೂ ನೀಡಲಾಗುತ್ತದೆ. ದಿನಕ್ಕೆ 30 ರೂ.ದಿಂದ 90 ರೂ.ವರೆಗಿನ ಕೆಲಸಗಳನ್ನು ಕೈದಿಗಳು ಮಾಡಬೇಕು. ಹಾಗೇ ಸಿಧುಗೂ ಈಗ ಕ್ಲರ್ಕ್ ಕೆಲಸ ಸಿಕ್ಕಿದೆ. ಆದರೆ ಭದ್ರತೆಗೆ ಸಂಬಂಧಪಟ್ಟ ಕಾರಣದಿಂದ ಇವರು ಸೆಲ್‌ನಿಂದ ಹೊರಗೆ ಹೋಗುವುದಿಲ್ಲ. ಬದಲಾಗಿ ಅವರು ನೋಡಬೇಕಾದ ಫೈಲ್‌ಗಳೆಲ್ಲ ಅವರಿದ್ದಲ್ಲಿಯೇ ಕಳಿಸಿಕೊಡಲಾಗುತ್ತದೆ.
ಅಂದಹಾಗೇ, ಮೊದಲ 3 ತಿಂಗಳು ಎಲ್ಲರಂತೆ ಸಿಧು ಕೂಡ ತರಬೇತಿ ಅವಧಿಯಲ್ಲಿರುತ್ತಾರೆ. ಬಳಿಕ ಅವರು, ಕೌಶಲ ರಹಿತ, ಅರೆ ಕೌಶಲ ಅಥವಾ ನುರಿತ ಕೈದಿ ಎಂಬ ಮೂರು ವರ್ಗಗಳಲ್ಲಿ ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಆಯಾ ವರ್ಗಕ್ಕೆ ನಿಗದಿಪಡಿಸಲಾದ ವೇತನ ಕೊಟ್ಟು ಕೆಲಸ ಮಾಡಿಸಲಾಗುತ್ತದೆ. ನವಜೋತ್ ಸಿಂಗ್ ಸಿಧು ಕ್ಲರ್ಕ್ ಕೆಲಸ ನಿರ್ವಹಿಸಲಿದ್ದು ಮೊದಲು, ಅವರಿಗೆ ನ್ಯಾಯಾಲಯ ತೀರ್ಪು ಕೊಡುವಾಗ ನೀಡುವ ಸುದೀರ್ಘ ವಿವರಣೆಗಳನ್ನು ಸಂಕ್ಷಿಪ್ತಗೊಳಿಸುವುದು ಹೇಗೆ, ಮತ್ತಿತರ ದಾಖಲೆಗಳನ್ನು ಸೂಕ್ತವಾಗಿ ಜೋಡಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳನ್ನು ಕಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Navjot Singh Sidhu: ಪಟಿಯಾಲಾ ಸೆಂಟ್ರಲ್ ಜೈಲಲ್ಲಿ ಸಿಧು, ಕೈದಿ ನಂಬರ್ 241383
ವಿಶೇಷ ಡಯೆಟ್‌ಗೆ ಮನವಿ
ನವಜೋತ್ ಸಿಂಗ್ ಸಿಧು ತಮಗೆ ಆರೋಗ್ಯ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಅವರನ್ನು ಸೋಮವಾರ ಬೆಳಗ್ಗೆಯೂ ಒಮ್ಮೆ ಪಟಿಯಾಲಾದ ರಾಜೀಂದ್ರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಲಾಗಿದೆ. ಸಿಧು ಆರೋಗ್ಯದ ದೃಷ್ಟಿಯಿಂದ ಅವರಿಗೆ ಜೈಲಿನಲ್ಲಿಯೂ ವಿಶೇಷ ಡಯೆಟ್ ಮಾಡಲು ಅನುವು ಮಾಡಿಕೊಡಬೇಕು. ಯಾಕೆಂದರೆ ನವಜೋತ್ ಸಿಂಗ್ ಸಿಧು ಗೋಧಿ, ಸಕ್ಕರೆ, ಮೈದಾ ಆಹಾರವನ್ನು ಸೇವಿಸುವಂತಿಲ್ಲ. ಪಪ್ಪಾಯಿ, ಬೆರ್ರಿ, ಪೇರಲೆ ಹಣ್ಣುಗಳನ್ನು ತಿನ್ನುವಂತಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಸಿಧುಗೆ ಚಪಾತಿ ಕೊಡುವಂತಿಲ್ಲ ಎಂದು ಅವರ ಪರ ವಕೀಲ ಎಚ್‌ಪಿಎಸ್ ವರ್ಮಾ ಕೋರ್ಟ್‌ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ವಿಶೇಷ ವೈದ್ಯರ ತಂಡ ನವಜೋತ್ ಸಿಂಗ್ ಸಿಧುಗೆ ನೀಡಿದ ಡಯೆಟ್ ಚಾರ್ಟ್‌ನ್ನೂ ಕೋರ್ಟ್‌ಗೆ ಸಲ್ಲಿಸಿದ್ದರು. ಅದಕ್ಕೆ ನ್ಯಾಯಾಲಯ ಕೂಡ ಸಮ್ಮತಿ ನೀಡಿದೆ. ಹೀಗಾಗಿ ಸಿಧು ಆಹಾರ ಜೈಲಿನಲ್ಲಿಯೂ ವಿಶೇಷವಾಗಿ ಇರಲಿದೆ.
ಇದನ್ನೂ ಓದಿ: Road Rage Case: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್‌ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ