ಪಟಿಯಾಲಾ: ಮಾಜಿ ಕ್ರಿಕೆಟರ್, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu) ನಿನ್ನೆ ರಾತ್ರಿ ಪಟಿಯಾಲಾ ಸೆಂಟ್ರಲ್ ಜೈಲು ಸೇರಿದ್ದಾರೆ. 1988ರ ರಸ್ತೆ ಜಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅವರಿಗೆ ಮೇ 19ರಂದು, 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಅದರಂತೆ ನಿನ್ನೆ ಅವರು ಪಟಿಯಾಲಾ ಕೋರ್ಟ್‌ಗೆ ಶರಣಾದರು. ಅಲ್ಲಿಂದ ಅವರನ್ನು ಮಾತಾ ಕೌಶಲ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗಳನ್ನು ಮಾಡಿ ನಂತರ ಜೈಲಿಗೆ ಕರೆದುಕೊಂಡು ಹೋಗಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ನವಜೋತ್ ಸಿಂಗ್ ಸಿಧು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಸಣ್ಣ ಪ್ರಮಾಣದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ವೈದ್ಯಕೀಯ ತಪಾಸಣೆ ಆಗಬೇಕಿದೆ. ಹಾಗಾಗಿ ಶರಣಾಗಲು ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದರು. ಆದರೆ ಕಾಲಾವಕಾಶ ಸಿಗದ ಕಾರಣ ನಿನ್ನೆಯೇ ಅವರನ್ನು ಜೈಲಿಗೆ ಕಳಿಸಲಾಗಿದೆ.
ಜೈಲಲ್ಲಿ ಸಿಧುಗೆ ಕೊಟ್ಟಿದ್ದೇನು?
ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲಾ ಸೆಂಟ್ರಲ್ ಜೈಲಿನ ಬ್ಯಾರಕ್ ಸಂಖ್ಯೆ 7ರಲ್ಲಿ ಇಡಲಾಗಿದ್ದು, ಅವರ ಕೈದಿ ಸಂಖ್ಯೆ 241383. ಸಿಧುಗೆ ಜೈಲಿನಲ್ಲಿ ಎರಡು ಟರ್ಬನ್ (ರುಮಾಲು), ಒಂದು ಬೀರು, ಒಂದು ಕಂಬಳಿ, ಮೂರು ಜೊತೆ ಒಳಉಡುಪು, ಎರಡು ಟವೆಲ್, ಒಂದು ಸೊಳ್ಳೆ ಪರದೆ, ಒಂದು ಪೆನ್, ಒಂದು ನೋಟ್‌ಬುಕ್, ಒಂದು ಜೊತೆ ಶೂ, ಎರಡು ಬೆಡ್‌ಶೀಟ್, ನಾಲ್ಕು ಜತೆ ಕುರ್ತಾ ಪೈಜಾಮಾಗಳು, ಎರಡು ತಲೆದಿಂಬಿನ ಕವರ್‌ಗಳನ್ನು ಜೈಲು ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದುಬಂದಿದೆ.
34 ವರ್ಷಗಳ ಹಿಂದೆ ನವಜೋತ್ ಸಿಂಗ್ ಸಿಧು ಮತ್ತವರ ಸಹಚರನೊಬ್ಬ ಸೇರಿ ಪಟಿಯಾಲಾದ ಪಾರ್ಕಿಂಗ್ ಸ್ಥಳದಲ್ಲಿ ಹಿರಿಯ ನಾಗರಿಕ ಗುರ್ನಾಮ್ ಸಿಂಗ್ ಎಂಬುವರಿಗೆ ಹೊಡೆದಿದ್ದರು. ಕೆಲವೇ ದಿನಗಳಲ್ಲಿ ಅವರು ಮೃತಪಟ್ಟಿದ್ದರು. ಗುರ್ನಾಮ್ ಕುಟುಂಬದವರು ಕೋರ್ಟ್ ಮೆಟ್ಟಿಲೇರಿದ್ದರು. ಸಿಧು ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ತೀರ್ಪನ್ನು 2018ರಲ್ಲಿ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. 1000 ರೂಪಾಯಿ ದಂಡ ವಿಧಿಸಿತ್ತು. ಮತ್ತೆ ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಗುರ್ನಾಮ್ ಕುಟುಂಬದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಮೇ 19ರಂದು ಅಂತಿಮ ತೀರ್ಪು ನೀಡಿದ ಸುಪ್ರೀಂಕೋರ್ಟ್ ಸಿಧುಗೆ ಒಂದು ವರ್ಷದ ಜೈಲು ಶಿಕ್ಷೆ ನೀಡಿದೆ.
ಜೈಲಿನಲ್ಲಿ ಹೇಗಿರಲಿದೆ ದಿನಚರಿ?
ಸಾಮಾನ್ಯವಾಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ಮುಂಜಾನೆ 5.30ಕ್ಕೆಲ್ಲ ಎದ್ದುಬಿಡುತ್ತಾರೆ. ಹಾಗೇ ಬೆಳಗ್ಗೆ 7ಗಂಟೆಗೆ ಅವರಿಗೆಲ್ಲ ಚಹಾ ಮತ್ತು ಜತೆಗೆ ಬಿಸ್ಕತ್ ಅಥವಾ ಕಡಲೆಯನ್ನು ನೀಡಲಾಗುತ್ತದೆ. ಬೆಳಗ್ಗೆ 8.30ರ ಹೊತ್ತಿಗೆ ಒಬ್ಬರಿಗೆ ಆರು ಚಪಾತಿಗಳು, ದಾಲ್ ಮತ್ತು ತರಕಾರಿಗಳನ್ನು ಕೊಡಲಾಗುತ್ತದೆ. ಅದನ್ನು ತಿಂದು ಕೈದಿಗಳು ಕೆಲಸಕ್ಕೆ ಹೋಗುತ್ತಾರೆ. ಸಂಜೆ 5.30 ಕ್ಕೆ ಕೆಲಸ ಮುಗಿಸಿ ಕಾರಾಗೃಹಕ್ಕೆ ವಾಪಸ್ ಬರುವ ಅವರು ತಮ್ಮ ವಿಭಾಗಕ್ಕೆ ತೆರಳುತ್ತಾರೆ. ಸಂಜೆ 6ಗಂಟೆಗೆಲ್ಲ ಊಟ ಮಾಡಿ, 7 ಗಂಟೆ ಹೊತ್ತಿಗೆ ಎಲ್ಲರೂ ತಮ್ಮ ಬ್ಯಾರಕ್ ಸೇರುತ್ತಾರೆ. ಕೈದಿಗಳು ಎಂಟು ತಾಸು ಕೆಲಸ ಮಾಡಿ ಗಳಿಸಿದ ಹಣವನ್ನು ಸರ್ಕಾರವೇ ನೀಡುತ್ತದೆ. ಅದರಲ್ಲಿ ಶೇ.25ರಷ್ಟನ್ನು ಮಾತ್ರ ಅವರ ಕೈಯಿಗೆ ಕೊಟ್ಟು, ಉಳಿದ ಹಣವನ್ನು ಕೈದಿಗಳ ಉಳಿತಾಯ ಖಾತೆಗೆ ಹಾಕಲಾಗುತ್ತದೆ.
ಉಳಿದವರಂತೆ ನವಜೋತ್ ಸಿಂಗ್ ಸಿಧು ಕೂಡ ಜೈಲಿನಲ್ಲಿ ಕೆಲಸ ಮಾಡಬೇಕಾಗಿದೆ. ಆದರೆ ಸದ್ಯ ಮೂರು ತಿಂಗಳು ತರಬೇತಿ ಅವಧಿ ಇದ್ದು, ಈ ವೇಳೆ ಅವರಿಗೆ ವೇತನ ಇರುವುದಿಲ್ಲ. ನಂತರ ಅವರನ್ನು ಯಾವ ಸೆಕ್ಷನ್‌ಗೆ ಹೊಂದಾಣಿಕೆಯಾಗುತ್ತಾರೆ ಎಂದು ನೋಡಿ ಅಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ ಮತ್ತು ದಿನಕ್ಕಿಷ್ಟು ಎಂದು ಸಂಬಳ ನಿಗದಿ ಮಾಡುತ್ತಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಸ್ತೆ ಜಗಳ ಪ್ರಕರಣ: ಕೊನೆಗೂ ಕೋರ್ಟ್‌ಗೆ ಶರಣಾದ ಕಾಂಗ್ರೆಸ್ ನಾಯಕ ಸಿಧು