Site icon Vistara News

NCERT Textbooks: ಪಠ್ಯದಿಂದ ಗಾಂಧೀಜಿ, ಗೋಡ್ಸೆ, ಆರೆಸ್ಸೆಸ್‌ ವಿಷಯ ಕೈಬಿಟ್ಟ ಎನ್‌ಸಿಇಆರ್‌ಟಿ, ಭಾರಿ ವಿರೋಧ

mahatma gandhi

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು (NCERT Textbooks) ಮೊಘಲ್‌ ಕೋರ್ಟ್‌ಗಳ ಕುರಿತ ಅಧ್ಯಾಯಗಳನ್ನು ಪಠ್ಯದಿಂದ ಕೈಬಿಟ್ಟಿರುವ ಕುರಿತು ಪರ-ವಿರೋಧಗಳು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಎನ್‌ಸಿಇಆರ್‌ಟಿಯ ಮತ್ತೊಂದು ಕ್ರಮವು ವಿವಾದಕ್ಕೆ ಕಾರಣವಾಗಿದೆ. 12ನೇ ತರಗತಿ ವಿದ್ಯಾರ್ಥಿಗಳ ಪಠ್ಯಪುಸ್ತಕದಿಂದ ಮಹಾತ್ಮ ಗಾಂಧೀಜಿ, ಆರ್‌ಎಸ್‌ಎಸ್‌ ಹಾಗೂ ನಾಥುರಾಮ್‌ ಗೋಡ್ಸೆ ಸೇರಿ ಹಲವು ವಿಷಯಗಳನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ, ಗಾಂಧೀಜಿ ಅವರ ಕುರಿತ ಅಂಶವನ್ನು ತೆಗೆದುಹಾಕಲಾಗಿರುವುದು ವಿವಾದಕ್ಕೆ ಗುರಿಯಾಗಿದೆ.

‘ಹಿಂದುಗಳು ಹಾಗೂ ಮುಸ್ಲಿಮರ ನಡುವಿನ ಒಗ್ಗಟ್ಟು ಮೂಡಿಸುವ ದಿಸೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಯತ್ನಕ್ಕೆ ಹಿಂದು ಮೂಲಭೂತವಾದಿಗಳ ವಿರೋಧ’, ‘ಗಾಂಧೀಜಿಯವರ ಹತ್ಯೆ ಬಳಿಕ ಆರ್‌ಎಸ್‌ಎಸ್‌ ನಿಷೇಧ’, ಹಾಗೂ ನಾಥುರಾಮ್‌ ಗೋಡ್ಸೆಗೆ ಸಂಬಂಧಿಸಿದ ಅಧ್ಯಾಯಗಳನ್ನು 12ನೇ ತರಗತಿಯ ರಾಜಕೀಯ ಹಾಗೂ ಇತಿಹಾಸದ ಪುಸ್ತಕಗಳಿಂದ ತೆಗೆದುಹಾಕಲಾಗಿದೆ. 2023-24ನೇ ಸಾಲಿನಿಂದ ಹೊಸ ಪುಸ್ತಕಗಳಲ್ಲಿ ಈ ಅಧ್ಯಾಯಗಳು ಇರುವುದಿಲ್ಲ ಎಂದು ತಿಳಿದುಬಂದಿದೆ.

ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌

12ನೇ ತರಗತಿ ಪಠ್ಯಪುಸ್ತಕಗಳಿಂದ ಮಹಾತ್ಮ ಗಾಂಧೀಜಿಯವರ ಕುರಿತ ಅಧ್ಯಾಯಗಳು, ಪ್ಯಾರಾಗಳನ್ನು ತೆಗೆದುಹಾಕಿದ ಕಾರಣ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. “ಎನ್‌ಸಿಇಆರ್‌ಟಿಯು ಇತ್ತೇಚೆಗೆ ಮೊಘಲರ ಇತಿಹಾಸವನ್ನು ಪಠ್ಯದಿಂದ ತೆಗೆದುಹಾಕಿತ್ತು. ಈಗ ಮಹಾತ್ಮ ಗಾಂಧೀಜಿಯವರ ವಿಚಾರವನ್ನು ಪಠ್ಯದಿಂದ ತೆಗೆದುಹಾಕುವ ಮೂಲಕ ಬಿಜೆಪಿಯು ಸೇಡಿನ ಕ್ರಮ ಅನುಸರಿಸುತ್ತಿದೆ. ಇತಿಹಾಸದಲ್ಲಿ ಗಾಂಧೀಜಿಯವರ ವಿಚಾರಗಳನ್ನು ಅಳಿಸಿಹಾಕುವ ಮನಸ್ಥಿತಿ ಪ್ರದರ್ಶಿಸುತ್ತಿದೆ” ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಸ್ಪಷ್ಟಪಡಿಸಿರುವ ಎನ್‌ಸಿಇಆರ್‌ಟಿ, “ತಜ್ಞರ ಸಮಿತಿಯ ವರದಿ ಆಧಾರದ ಮೇಲೆ ಪಠ್ಯಪುಸ್ತಕದಿಂದ ಕೆಲ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ” ಎಂದು ಹೇಳಿದೆ.

ಕೆಲ ದಿನಗಳ ಹಿಂದಷ್ಟೇ 12ನೇ ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿರುವ “ಥೀಮ್ಸ್‌ ಆಫ್‌ ಇಂಡಿಯನ್‌ ಹಿಸ್ಟರಿ-ಪಾರ್ಟ್‌ 2” ಪುಸ್ತಕದಿಂದ ಕಿಂಗ್ಸ್‌ ಆ್ಯಂಡ್‌; ದಿ ಮೊಘಲ್‌ ಕೋರ್ಟ್ಸ್‌ (ಸಿ 16 ಹಾಗೂ 17ನೇ ಶತಮಾನಗಳು) ಎಂಬ ವಿಷಯಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ನೂತನ ಪಠ್ಯಕ್ರಮದಂತೆ ವಿದ್ಯಾರ್ಥಿಗಳು ಮೊಘಲರ ನ್ಯಾಯಾಲಯಗಳ ಕುರಿತು 2023-24ನೇ ಸಾಲಿನಿಂದ ಅಧ್ಯಯನ ಮಾಡುವುದಿಲ್ಲ ತಿಳಿದುಬಂದಿದೆ.

12ನೇ ತರಗತಿ ವಿದ್ಯಾರ್ಥಿಗಳ ಪಠ್ಯಪುಸ್ತಕದಿಂದ ಮೊಘಲ್‌ ನ್ಯಾಯಾಲಯಗಳ ಅಧ್ಯಾಯದ ಜತೆಗೆ ಅಕ್ಬರ್‌ನಾಮಾ (ಅಕ್ಬರ್‌ ಕುರಿತ ಕಾಲಾನುಕ್ರಮದ ವರದಿ), ಬಾದ್‌ಶಾ ನಾಮಾ (ಮೊಘಲ್‌ ಅರಸ ಷಹಜಹಾನ್‌ ಕಾಲಾನುಕ್ರಮಣಿಕೆ), ಮೊಘಲ್‌ ಅರಸರು, ಅವರ ಸಾಮ್ರಾಜ್ಯ, ಹಸ್ತಪ್ರತಿಗಳು, ಪ್ರಮುಖ ಪ್ರದೇಶಗಳು, ರಾಜಧಾನಿಗಳು, ರಾಯಲ್‌ ಕುಟುಂಬ, ಮೊಘಲ್‌ ಇತಿಹಾಸ, ಮೊಘಲ್‌ ಅರಸರ ಗಡಿಗಳು ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಪಠ್ಯದಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mughal History: ಉತ್ತರ ಪ್ರದೇಶದಲ್ಲಿ ಪಿಯು ವಿದ್ಯಾರ್ಥಿಗಳಿಗೆ ಇನ್ನು ಮೊಘಲರ ಇತಿಹಾಸ ಇರಲ್ಲ

Exit mobile version