Site icon Vistara News

NCERT: 6-12ನೇ ತರಗತಿ ಸಮಾಜ ವಿಜ್ಞಾನ ಪಠ್ಯಕ್ರಮ ಪರಿಷ್ಕರಣೆಗೆ 35 ಸದಸ್ಯರ ಸಮಿತಿ

book

book

ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಮಿತಿ (National Council of Educational Research and Training-NCERT) 6ರಿಂದ 12ನೇ ತರಗತಿಗಳ ಇತಿಹಾಸ, ಭೂಗೋಳ ಶಾಸ್ತ್ರ, ರಾಜ್ಯ ಶಾಸ್ತ್ರ, ಸಮಾಜ ಶಾಸ್ತ್ರ ಮತ್ತು ಮನಃಶಾಸ್ತ್ರದ ಪಠ್ಯಕ್ರಮ ಮತ್ತು ಬೋಧನೆ-ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು 35 ಸದಸ್ಯರ ಸಮಿತಿಯನ್ನು ನೇಮಿಸಿ ಅಧಿಸೂಚನೆ ಹೊರಡಿಸಿದೆ.

ದಿ ಕರಿಕ್ಯುಲರ್‌ ಏರಿಯಾ ಗ್ರೂಪ್‌(The Curricular Area Group-CAG)

ಗಾಂಧಿನಗರದ ಐಐಟಿ ಸಂದರ್ಶಕ ಪ್ರಾಧ್ಯಾಪಕ ಮೈಕೆಲ್ ಡ್ಯಾನಿನೊ ಅವರ ಅಧ್ಯಕ್ಷತೆಯಲ್ಲಿ ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ ಶಾಸ್ತ್ರ, ರಾಜ್ಯ ಶಾಸ್ತ್ರ, ಸಮಾಜ ಶಾಸ್ತ್ರ ಮತ್ತು ಮನೋ ವಿಜ್ಞಾನ) ಸಮಿತಿಯನ್ನು ರಚಿಸಲಾಗಿದೆ. ಈ ತರಗತಿಗಳಿಗೆ ಪಠ್ಯಕ್ರಮ, ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಅಂತಿಮಗೊಳಿಸಲು ಜುಲೈನಲ್ಲಿ ಅಧಿಸೂಚನೆ ಹೊರಡಿಸಲಾದ 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಯ (NSTC) ಮುಂದುವರಿಕೆಯಾಗಿ ಇದು ಕಾರ್ಯ ನಿರ್ವಹಿಸಲಿದೆ.

ಎನ್‌ಎಸ್‌ಟಿಸಿ ವಿವಿಧ ವಿಷಯಗಳಿಗೆ ಕನಿಷ್ಠ 11 ಸಿಎಜಿ (CAG)ಗಳನ್ನು ರಚಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಇದು ನವೀನ ಬೋಧನೆ ಮತ್ತು ಬೋಧನಾ ಕಲಿಕಾ ಸಾಮಗ್ರಿಗಳು, ಐಕೆಎಸ್ (IKS) ಮತ್ತು ಸಾಮಾಜ ವಿಜ್ಞಾನಗಳಿಗಾಗಿ ಸಿಎಜಿಗಳನ್ನು ರಚಿಸಿದೆ.

ಸಮಾಜ ವಿಜ್ಞಾನಗಳ ಸಮಿತಿಯು ಪೂರ್ವಸಿದ್ಧತಾ ಹಂತದ ಪಠ್ಯಕ್ರಮ ಗುಂಪು ಮತ್ತು ಇತರ ಸಂಬಂಧಿತ ಸಮಿತಿಗಳೊಂದಿಗೆ ಸಹಕರಿಸಿ 3-5ನೇ ತರಗತಿಗಳ ವಿಷಯಗಳ ನಡುವೆ ಅಂತರ-ಶಿಸ್ತನ್ನು ಬೆಳೆಸಲು ಮತ್ತು ಸಮಾಜ ವಿಜ್ಞಾನದ ಕ್ರಾಸ್-ಕಟಿಂಗ್ ವಿಷಯಗಳ ಏಕೀಕರಣವನ್ನು ಖಚಿತಪಡಿಸಲಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.

“ಸಮಾಜ ವಿಜ್ಞಾನದ ವಿಭಾಗಗಳಲ್ಲಿ ಲಂಬ ಮತ್ತು ಸಮತಲ ಸಂಪರ್ಕಗಳು ಮತ್ತು ಏಕೀಕರಣದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಸಮಾಜ ವಿಜ್ಞಾನ ಮತ್ತು ಅರ್ಥಶಾಸ್ತ್ರ ಎರಡೂ ಸಿಎಜಿಗಳು ಸಿದ್ಧಪಡಿಸಿದ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುವ ಮತ್ತು ಚರ್ಚಿಸುವ ಮೂಲಕ ಅಂತಿಮಗೊಳಿಸಲಾಗುತ್ತದೆ” ಎಂದು ಎನ್‌ಸಿಇಆರ್‌ಟಿ ಮೂಲಗಳು ಹೇಳಿವೆ.

ಉದ್ದೇಶ ಏನು?

ಶಿಕ್ಷಣ ತಜ್ಞರು, ವಿಷಯ ತಜ್ಞರು ಮತ್ತು ವಿವಿಧ ಹಿನ್ನೆಲೆಯ ಶೈಕ್ಷಣಿಕ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಯು ಅಸ್ತಿತ್ವದಲ್ಲಿರುವ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಪರಿಶೀಲಿಸುವ ಮತ್ತು ನವೀಕರಿಸುವ ಗುರಿಯನ್ನು ಹೊಂದಿದೆ. ಇದು ಸಮಕಾಲೀನ ಶೈಕ್ಷಣಿಕ ಮಾನದಂಡಗಳು ಮತ್ತು ಬೋಧನಾ ವಿಧಾನಗಳೊಂದಿಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲಿದೆ. ಇತಿಹಾಸ, ನಾಗರಿಕತೆ, ಭೂಗೋಳ ಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಒಳಗೊಂಡ ಸಾಮಾಜಿಕ ವಿಜ್ಞಾನದ ಕ್ರಿಯಾತ್ಮಕ ಸ್ವರೂಪವನ್ನು ಪರಿಗಣಿಸಿ ಸಮಿತಿಗೆ ಸಮಗ್ರ ಪರಿಶೀಲನೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಕಲಿಕೆಯನ್ನು ಹೆಚ್ಚು ಆಕರ್ಷಕ, ಪ್ರಸ್ತುತ, ಸಂವಾದಾತ್ಮಕ ಮತ್ತು ಇಂದಿನ ವಾಸ್ತವಗಳೊಂದಿಗೆ ಸಮನ್ವಯಗೊಳಿಸುವುದೂ ಕೂಡ ಮುಖ್ಯ ಉದ್ದೇಶಗಳಲ್ಲಿ ಒಂದು. ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಮತ್ತು ಅನ್ವೇಷಣಾ ಮನಸ್ಥಿತಿಯನ್ನು ಮೂಡಿಸಲು ಪ್ರಯತ್ನಸಿಸಲಾಗುವುದು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: NCERT text: ಶಾಲಾ ಪಠ್ಯಪುಸ್ತಕ ಸಮಿತಿಗೆ ಸುಧಾ ಮೂರ್ತಿ, ಶಂಕರ್ ಮಹಾದೇವನ್ ನೇಮಕ

ಸಮಿತಿಯಲ್ಲಿನ ಸದಸ್ಯರು

ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್, ಅಸ್ಸಾಂನ ಕೊಕ್ರಜಾರ್ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬನಬೀನಾ ಬ್ರಹ್ಮ, ಚೆನ್ನೈಯ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಅಧ್ಯಕ್ಷ ಎಂ.ಡಿ.ಶ್ರೀನಿವಾಸ್, ಜೆಎನ್‌ಯು ಪರ್ಷಿಯನ್ ಮತ್ತು ಮಧ್ಯ ಏಷ್ಯಾ ಅಧ್ಯಯನ ಕೇಂದ್ರದ ಮಜರ್ ಆಸಿಫ್, ಜೆಎನ್‌ಯು ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್‌ನ ಐತಿಹಾಸಿಕ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಮತ್ತು ಅಧ್ಯಕ್ಷ ಹೀರಾಮನ್ ತಿವಾರಿ, ಕಾಶ್ಮೀರ ವಿಶ್ವವಿದ್ಯಾಲಯದ ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಾವೇದ್ ಇಕ್ಬಾಲ್ ಭಟ್, ಮೆರಿಟೈಮ್ ಹಿಸ್ಟರಿ ಸೊಸೈಟಿಯ ಮಾಜಿ ನಿರ್ದೇಶಕ ಕಮಾಂಡರ್ ಡಾ. ಓಡಕ್ಕಲ್ ಜಾನ್ಸನ್.

“ಎನ್‌ಟಿಸಿ ಮತ್ತು ಎನ್‌ಸಿಇಆರ್‌ಟಿಗೆ ಶಿಕ್ಷಕರ ಕೈಪಿಡಿಗಳನ್ನು ಸಲ್ಲಿಸಲು 2024ರ ಫೆಬ್ರವರಿ 25ರ ವರೆಗೆ ಕಾಲವಕಾಶ ಇದೆ” ಎಂದು ಅಧಿಸೂಚನೆ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version