Site icon Vistara News

NCP Crisis: ಎನ್‌ಸಿಪಿ ಪಕ್ಷ, ಚಿಹ್ನೆಗಾಗಿ ಅಜಿತ್-ಶರದ್ ಜಟಾಪಟಿ! ಯಾರ ಕ್ಯಾಂಪಿನಲ್ಲಿ ಎಷ್ಟು ಶಾಸಕರು?

Sharad Pawar And Ajit Pawar

Ajit Pawar's Faction Named Real NCP In Setback For Sharad Pawar

ಮುಂಬೈ, ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ (Maharashtra Politics) ಒಡೆದು ಹೋಳಾಗಿರುವ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ (NCP) ಬಿಕ್ಕಟ್ಟು ಎದುರಿಸುತ್ತಿದೆ. ಪಕ್ಷದ ಒಡೆತನ ಮತ್ತು ಚಿಹ್ನೆಗಾಗಿ (Party Symbol) ಅಜಿತ್ ಪವಾರ್ (Ajit Pawar) ಹಾಗೂ ಶರದ್ ಪವಾರ್ (Sharad Pawar) ನಡುವೆ ಈ ಜಟಾಪಟಿ ನಡೆದಿದೆ. ಶರದ್ ಪವಾರ್ ಅವರಿಗೆ ಗೊತ್ತಿಲ್ಲದಂತೆ, ಪಕ್ಷದ ಶಾಸಕರೊಂದಿಗೆ ಬಿಜೆಪಿ-ಶಿಂಧೆ ಸರ್ಕಾರಕ್ಕೆ ಬೆಂಬಲ ನೀಡಿ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾದರು. ಆ ಬಳಿಕ ಎನ್‌ಸಿಪಿ ಬಿಕ್ಕಟ್ಟು (NCP Crisis) ಶುರುವಾಯಿತು. ಈ ಹಿನ್ನೆಲೆಯಲ್ಲಿ ಉಭಯ ನಾಯಕರು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಗುರುವಾರ ಮುಂಬೈನಲ್ಲಿ ಸಭೆ ನಡೆಸಿದರು. ಈ ವೇಳೆ, 29 ಶಾಸಕರು ಅಜಿತ್ ಬಣದಲ್ಲಿ ಹಾಗೂ ಶರದ್ ಪವಾರ್ ಬಣದಲ್ಲಿ 19 ಶಾಸಕರು ಗುರುತಿಸಿಕೊಂಡರು. ಅಲ್ಲದೇ, ಉಭಯ ಬಣಗಳಿಂದ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳು ನಡೆದವು. ಪಕ್ಷದ ಒಡೆತನ ಹಾಗೂ ಚಿಹ್ನೆಗಾಗಿ ಅಜಿತ್ ಪವಾರ್ ಅವರು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶರದ್ ಪವಾರ್ ಅವರೂ ಕೇವಿಯಟ್ ಸಲ್ಲಿಸಿದ್ದಾರೆ. ಗುರುವಾರ ಎನ್‌ಸಿಪಿ ಕುರಿತು ನಡೆದ ಒಟ್ಟು ಬೆಳವಣಿಗೆ ಚಿತ್ರಣ ಇಲ್ಲಿದೆ. ಓದಿ.

ಪಕ್ಷದ ಸಿಂಬಲ್‌ಗಾಗಿ ಶುರುವಾಯಿತು ಕಾನೂನು ಸಂಘರ್ಷ

ಅಜಿತ್ ಪವಾರ್ ನೇತೃತ್ವದ ಗುಂಪು ತಮ್ಮ ಬಣಕ್ಕೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಹೆಸರು ಮತ್ತು ಸಿಂಬಲ್ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ತಮ್ಮ ಮನವಿ ಜತೆಗೆ 40 ಶಾಸಕರ ಬೆಂಬಲ ಅಫಿಡವಿಟ್ ಕೂಡ ಸಲ್ಲಿಸಿದೆ. ಶರದ್ ಪವಾರ್ ಅವರು 40 ವರ್ಷಗಳ ಹಿಂದೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ, ಸಹೋದರ ಪುತ್ರರಾದ ಅಜಿತ್ ಪವಾರ್ ಅವರು ಶರದ್ ಪವಾರ್ ವಿರುದ್ಧ ಬಂಡೆದ್ದು, ಸುಮಾರು 30 ಶಾಸಕರೊಂದಿಗೆ ಶಿಂಧೆ-ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೇ, ಸರ್ಕಾರದಲ್ಲಿ ಭಾಗಿಯಾಗಿದ್ದು, ಉಪಮುಖ್ಯಮಂತ್ರಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಶರದ್ ಪವಾರ್ ನೇತೃತ್ವದ ಬಣವು ಚುನಾವಣಾ ಆಯೋಗಕ್ಕೆ ಕೇವಿಯಟ್ ಸಲ್ಲಿಸಿದೆ. ಪಕ್ಷದ ಒಳ ಜಗಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುಂಚೆ ತಮ್ಮ ವಾದವನ್ನು ಆಲಿಸಬೇಕು ಎಂದು ಶರದ್ ಪವಾರ್ ನೇತೃತ್ವದ ಬಣ ಆಯೋಗಕ್ಕೆ ಮನವಿ ಮಾಡಿದೆ. ಚುನಾವಣಾ ಆಯೋಗವು ತನ್ನ ಮುಂದೆ ಸಲ್ಲಿಸಿದ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎರಡೂ ಬಣಗಳಿಗೆ ಹೇಳಿದೆ. ಮುಂದಿನ ಕೆಲವು ದಿನಗಳಲ್ಲಿ ಪಕ್ಷದ ಹೆಸರು ಮತ್ತು ಸಿಂಬಲ್ ಯಾವ ಬಣಕ್ಕೆ ಸೇರಲಿದೆ ಎಂಬ ನಿರ್ಧಾರವನ್ನು ಆಯೋಗ ಕೈಗೊಳ್ಳುವ ಸಾಧ್ಯತೆಗಳಿವೆ.

ಅಜಿತ್ ಬಣದಲ್ಲಿ 29, ಶರದ್ ಪವಾರ್ ಕಡೆ 17 ಶಾಸಕರು

ತಮ್ಮದೇ ನೈಜ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಅಜಿತ್ ಪವಾರ್ (Ajit Pawar) ಹಾಗೂ ಶರದ್ ಪವಾರ್ (Sharad Pawar) ನೇತೃತ್ವದ ಬಣಗಳು ಗುರುವಾರ ಪ್ರತ್ಯೇಕ ಸಾರ್ವಜನಿಕ ಸಭೆ ನಡೆಸಿದವು. ಈ ವೇಳೆ, ಎಷ್ಟು ಶಾಸಕರು ಯಾರ ಬಣದಲ್ಲಿದ್ದಾರೆಂಬುದು ಲೆಕ್ಕ ದೊರೆತಿದೆ. ಒಟ್ಟು 53 ಎನ್‌ಸಿಪಿ ಶಾಸಕರ ಪೈಕಿ 29 ಶಾಸಕರು ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡರೆ, ಶರದ್ ಪವಾರ್ ಬಣದಲ್ಲಿ 17 ಶಾಸಕರು ಕಾಣಿಸಿಕೊಂಡಿದ್ದಾರೆ. ಉಳಿದ 7 ಶಾಸಕರು ಇನ್ನೂ ಯಾವುದೇ ಬಣದಲ್ಲಿಗುರುತಿಸಿಕೊಂಡಿಲ್ಲ.

ಹೀಗಿದ್ದೂ ಕೆಲವು ಮೂಲಗಳ ಪ್ರಕಾರ, ಅಜಿತ್ ಪವಾರ್ ಅವರ ಶಾಸಕರ ಬೆಂಬಲ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಜಿತ್ ಬಣದ ಛಗನ್ ಬುಜಬುಲ್ ಅವರು, 40ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನಮ್ಮ ಪರವಾಗಿದ್ದಾರೆ. ನಾವು ಪ್ರಮಾಣ ವಚನ ಸ್ವೀಕರಿಸುವ ಮುನ್ನ ನಾವು ಎಲ್ಲ ಯೋಚಿಸಿಯೇ ನಿರ್ಧಾರ ಕೈಗೊಡಿದ್ದೇವೆ. ಸುಖಾ ಸುಮ್ಮನೆ ನಾವೇನೂ ಪ್ರಮಾಣ ವಚನ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಅಜಿತ್ ಬಣದ ಸಭೆಯನ್ನು ವೈ ಬಿ ಚವಾಣ್ ಆಡಿಟೋರಿಯಮ್‌ನಲ್ಲಿ ಆಯೋಜಿಸಲಾಗಿದ್ದು, ವೇದಿಕೆಯಲ್ಲಿ ಶರದ್ ಪವಾರ್ ಅವರ ದೊಡ್ಡ ಚಿತ್ರವಿರುವ ಬ್ಯಾನರ್ ಹಾಕಲಾಗಿದೆ. ಅಲ್ಲದೇ, ಪಕ್ಷದ ಚಿಹ್ನೆಯನ್ನು ದೊಡ್ಡದಾಗಿ ತೋರಿಸಲಾಗಿದೆ.

ನಾನು ಮುಖ್ಯಮಂತ್ರಿಯಾಗಬೇಕು- ಅಜಿತ್ ಪವಾರ್

ನಾನು ಮುಖ್ಯಮಂತ್ರಿಯಾಗಬೇಕು. ಜನರ ಕಲ್ಯಾಣಕ್ಕಾಗಿ ನಾನು ಕೆಲವು ಯೋಜನೆಗಳನ್ನು ಹೊಂದಿದ್ದೇನೆ. ಅವುಗಳ ಜಾರಿಗಾಗಿ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು. 2004ರಲ್ಲಿ ಎನ್‌ಸಿಪಿಯಿಂದ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆಗ ಕಾಂಗ್ರೆಸ್‌ ಪಕ್ಷಕ್ಕಿಂತಲೂ ಎನ್‌ಸಿಪಿ ಹೆಚ್ಚು ಸೀಟು ಗೆದ್ದಿತ್ತು. ಆದರೂ ಆಗಲಿಲ್ಲ ಎಂದು ಅಜಿತ್ ಪವಾರ್ ಹೇಳಿದ್ದಾರೆ.

2019ರಲ್ಲಿ ಏಕನಾಥ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದಾಗ ಎನ್‌ಸಿಪಿಯ ಎಲ್ಲ ಶಾಸಕರು ಬಿಜೆಪಿಯ ಜತೆ ಕೈಜೋಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿದ್ದಾರೆ. ತಮ್ಮ ಅಂಕಲ್ ವಿರುದ್ದ ಬಂಡೆದ್ದು ಎನ್‌ಸಿಪಿ ಶಾಸಕರನ್ನು ಹೈಜಾಕ್ ಮಾಡಿರುವ ಅಜಿತ್ ಪವಾರ್, ಬಿಜೆಪಿಯ ಜತೆ ಮೈತ್ರಿ ಬೆಳೆಸಲು ಸಹಿ ಮಾಡಿದ ಖಚಿತ ಪತ್ರಗಳನ್ನು ನೀಡಿದ್ದಾರೆಂದು ಹೇಳಿದರು.

2019ರಲ್ಲಿ ಸರ್ಕಾರ ರಚಿಸುವ ಸಂಬಂಧ ಬಿಜೆಪಿ ಜತೆ ಒಟ್ಟು ಐದು ಸಭೆಗಳಾದವು. ಆದರೆ, ಕೂಡಲೇ ಬಿಜೆಪಿ ಜತೆಗೆ ಮೈತ್ರಿ ಸಾಧ್ಯವಿಲ್ಲ. ಶಿವಸೇನೆ ಜತೆ ಹೋಗೋ ಎಂದು ತಿಳಿಸಲಾಯಿತು ಎಂದು ಅಜಿತ್ ಪವಾರ್ ಹೇಳಿದರು. 2017ರಲ್ಲಿ ಶಿವಸೇನೆಯನ್ನು ಜಾತಿವಾದಿ ಪಕ್ಷ ಎಂದು ಕರೆದರು. ಅದೇ ಶಿವಸೇನೆಯ ಜತೆಗೆ 2019ರಲ್ಲಿ ಶರದ್ ಪವಾರ್ ಸರ್ಕಾರ ರಚಿಸಿದರು. ಆದರೆ, ನನ್ನನ್ನು ಏಕೆ ವಿಲನ್ ಮಾಡಲಾಯಿತು ಎಂದು ನನಗೆ ಗೊತ್ತಿಲ್ಲ ಎಂದು ಅಜಿತ್ ಪವಾರ್ ಹೇಳಿದರು.

ಉಳಿದ ರಾಜಕೀಯ ಪಕ್ಷಗಳಲ್ಲಿ ವಯಸ್ಸಾದ ನಾಯಕರು ಪಕ್ಷದಿಂದ ನಿವೃತ್ತರಾಗುತ್ತಾರೆ. ನೀವು (ಶರದ್) ಕೂಡ ಹೊಸಬರಿಗೆ ಅವಕಾಶವನ್ನು ನೀಡಬೇಕು. ನಾವೇನಾದರೂ ತಪ್ಪುಗಳನ್ನು ಮಾಡಿದರೆ ನಮ್ಮನ್ನು ತಿದ್ದಿ. ನಿಮಗೀಗ 83 ವರ್ಷ. ಈಗಲಾದರೂ ನೀವು ನಿವೃತ್ತಿಯಾಗುತ್ತಿರೋ ಅಥವಾ ಇಲ್ಲವೋ? ನೀವು ನಮಗೆ ಆಶೀರ್ವಾದ ಮಾಡಬೇಕು ಎಂದು ಅಜಿತ್ ಪವಾರ್ ಹೇಳಿದರು. ಇದೇ ವೇಳೆ, ಸುಪ್ರಿಯಾ ಸುಳೆ ವಿರುದ್ಧವೂ ಹರಿಹಾಯ್ದ ಅಜಿತ್ ಪವಾರ್, ಪವರ್‌ಫುಲ್ ಫ್ಯಾಮಿಲಿಯಲ್ಲಿ ಹುಟ್ಟದಿರುವುದು ನಮ್ಮ ತಪ್ಪೇ ಎಂದು ಪ್ರಶ್ನಿಸಿದರು.

ಪಕ್ಷ ಚಿಹ್ನೆ ಯಾರೂ ಕಸಿಯಲಾರರು- ಶರದ್ ಪವಾರ್

ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ಶಕ್ತಿ ಪ್ರದರ್ಶನ ಮಾಡಿದ್ದು, ಪಕ್ಷದ ಚಿಹ್ನೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪಕ್ಷದ ವಿರುದ್ಧ ಬಂಡಾಯ ಎದ್ದಿರುವವರು ನನ್ನ ಭಾವಚಿತ್ರವನ್ನು ಬಳಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಯಾವುದೇ ಪಕ್ಷವನ್ನು ಪೂರ್ತಿಯಾಗಿ ಆಪೋಶನ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಬಿಜೆಪಿ ವಿರುದ್ಧ ಶರದ್ ಪವಾರ್ ಗುಡುಗಿದರು. ಈಗ ಅಜಿತ್ ಪವಾರ್ ಬಣ ಕೈಗೊಂಡಿರುವ ನಿರ್ಧಾರದ ವೇಳೆ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಜಿತ್ ಬಣವು ಜನರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ. ಇಂದೆ ನಾನು ಏನಾಗಿದ್ದೇನೋ ಅದೆಲ್ಲವು ಕಾರ್ಯಕರ್ತರಿಂದಾಗಿ. ನನ್ನ ಯಶಸ್ಸು ನನ್ನ ಪಕ್ಷದ ಕಾರ್ಯಕರ್ತರು ಎಂದು ಅಜಿತ್ ವಿರುದ್ದ ಶರದ್ ಪವಾರ್ ಗುಡುಗಿದರು.

ಈ ಸುದ್ದಿಯನ್ನೂ ಓದಿ: NCP Crisis: ನಾನು ಸಿಎಂ ಆಗ್ಬೇಕು; ಅಜಿತ್, ಪಕ್ಷದ ಚಿಹ್ನೆ ಯಾರೂ ಕಸಿಯಲಾರರು ಎಂದ ಶರದ್! ಯಾರ ಕಡೆ ಎಷ್ಟು ಶಾಸಕರು?

ಅಜಿತ್ ಪವಾರ್ ಸಭೆ ಪೋಸ್ಟರ್​ನಲ್ಲಿ ಶರದ್​ ಪವಾರ್ ಫೋಟೋ!

ಮಹಾರಾಷ್ಟ್ರದಲ್ಲಿ ಎನ್​ಸಿಪಿ ಪಕ್ಷ ಒಡೆದು ಇಬ್ಭಾಗವಾಗಿ, ಎರಡು ಸಭೆಗಳು ನಡೆದಿವೆ. ಅಚ್ಚರಿಯೆಂದರೆ ಅಜಿತ್ ಪವಾರ್ ನಡೆಸಿದ ಸಭೆಯ ವೇದಿಕೆ ಮೇಲೆ ಹಾಕಲಾಗಿದ್ದ ಪೋಸ್ಟರ್​ನಲ್ಲಿ ಶರದ್ ಪವಾರ್ ಫೋಟೋ ಕೂಡ ಇತ್ತು. ಶರದ್ ಪವಾರ್​ ಅವರ ಹಳೇ ಕಾಲದ ಫೋಟೋ ಇದಾಗಿತ್ತು. ವೇದಿಕೆ ಮೇಲೆ ಹಾಕಲಾಗಿದ್ದ ಪೋಸ್ಟರ್​​ನಲ್ಲಿ ಅಜಿತ್​ ಪವಾರ್, ಪ್ರಫುಲ್ ಪಟೇಲ್​ ಮತ್ತು ಇನ್ನಿತರ ನಾಯಕರ ಫೋಟೋವಿದೆ. ಈ ಸಭೆಯಲ್ಲಿ ತಮ್ಮ ಫೋಟೋ ಬಳಸಿಕೊಳ್ಳುವುದು ಶರದ್ ಪವಾರ್​ಗೆ ಇಷ್ಟವಿರಲಿಲ್ಲ. ಅವರು ಅನುಮತಿ ಕೂಡ ಕೊಟ್ಟಿರಲಿಲ್ಲ. ಆದರೂ ಅಜಿತ್ ಪವಾರ್ ಕೇರ್ ಮಾಡಲಿಲ್ಲ. ಅವರ ಸಭೆಯ ಪೋಸ್ಟರ್​ ಮೇಲೆ ಶರದ್ ಪವಾರ್ ಫೋಟೋ ದೊಡ್ಡದಾಗಿ ರಾರಾಜಿಸುತ್ತಿತ್ತು. ಶರದ್ ಪವಾರ್​ ಬಣದ ಸಭೆ ದಕ್ಷಿಣ ಮುಂಬಯಿಯ ವೈ.ಬಿ.ಚವ್ಹಾಣ್​ ಸೆಂಟರ್​​ನಲ್ಲಿ ಮಧ್ಯಾಹ್ನ 1ಗಂಟೆಗೆ ನಡೆದಿದೆ. ಹಾಗೇ, ಅಜಿತ್ ಪವಾರ್ ನೇತೃತ್ವದ ಸಭೆ ಬಾಂದ್ರಾ ಸಬ್​ಅರ್ಬನ್​​ನಲ್ಲಿರುವ ಮುಂಬಯಿ ಶೈಕ್ಷಣಿಕ ಸಂಸ್ಥೆ (MET)ಆವರಣದಲ್ಲಿ ಮಧ್ಯಾಹ್ನ 11ಗಂಟೆಗೆ ನಡೆದಿತ್ತು. ಇಂದಿನ ಸಭೆಯಲ್ಲಿ ಯಾವುದೂ ಅಂತ್ಯವಾಗಿಲ್ಲ. ಎರಡೂ ಬಣಕ್ಕೆ ಸ್ಪಷ್ಟವಾಗಿ ಎಷ್ಟೆಷ್ಟು ಶಾಸಕರ ಬೆಂಬಲವಿದೆ ಎಂಬುದು ಅಂತಿಮವಾಗಿಲ್ಲ.

Exit mobile version