Site icon Vistara News

NCP Crisis: ಎನ್‌ಸಿಪಿ ಮುಖ್ಯಸ್ಥ ಹುದ್ದೆಯಿಂದ ಶರದ್ ಪವಾರ್‌ರನ್ನೇ ಕಿತ್ತು ಹಾಕಿದ ಬಂಡಾಯ ನಾಯಕ ಅಜಿತ್!

Sharad Pawar and Ajit Pawar

ನವದೆಹಲಿ: ಎನ್‌ಸಿಪಿ ಬಂಡಾಯ ಬಣದ ಮುಖ್ಯಸ್ಥರಾಗಿರುವ ಅಜಿತ್ ಪವಾರ್ (Ajit Pawar) ಅವರು, ಶರದ್ ಪವಾರ್ (Sharad Pawar) ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ (NCP National President Post) ಸ್ಥಾನದಿಂದ ಕಿತ್ತು ಹಾಕಿದ್ದಾರೆ. ಅಂದ ಹಾಗೆ, ಅಜಿತ್ ಪವಾರ್ ಅವರು ಬಂಡಾಯ ಸಾರುವ ಎರಡು ದಿನಗಳ ಮುಂಚೆಯೇ ಈ ಕ್ರಮ ಕೈಗೊಂಡಿದ್ದಾರೆ. ಪಕ್ಷದ ಸುಮಾರು 40 ಶಾಸಕರು ಸಭೆ ಸೇರಿ ಅಜಿತ್ ಪವಾರ್ ಅವರನ್ನು ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇದಾದ ಬಳಿಕ, ಶರದ್ ಪವಾರ್ ಅವರನ್ನು ವಜಾ ಮಾಡಲಾಗಿದೆ. ಅಂದ ಹಾಗೆ, ಶರದ್ ಪವಾರ್ ಅವರು 1991ರಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಅಂದಿನಿಂದಲೂ ಪಕ್ಷದ ನಾಯಕತ್ವವನ್ನು ವಹಿಸಿಕೊಂಡಿದ್ದರು(NCP Crisis).

ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಪತ್ರದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಸುಮಾರು 40 ಶಾಸಕರು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ನಿಜವಾದ ಎನ್‌ಸಿಪಿ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಶಿವಸೇನೆ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಶಾಸಕಾಂಗ ಪಕ್ಷವು ರಾಜಕೀಯ ಪಕ್ಷದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದರರ್ಥ ಬಹುಮತ ಸಾಬೀತುಪಡಿಸುವ ಮೂಲಕ ಶಾಸಕರ ಗುಂಪು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುವುದು ಮತ್ತು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಆಶ್ರಯ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಅಜಿತ್ ಪವಾರ್ ನೇತೃತ್ವದ ಗುಂಪು ತಮ್ಮ ಬಣಕ್ಕೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಹೆಸರು ಮತ್ತು ಸಿಂಬಲ್ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ತಮ್ಮ ಮನವಿ ಜತೆಗೆ 40 ಶಾಸಕರ ಬೆಂಬಲ ಅಫಿಡವಿಟ್ ಕೂಡ ಸಲ್ಲಿಸಿದೆ. ಶರದ್ ಪವಾರ್ ಅವರು 40 ವರ್ಷಗಳ ಹಿಂದೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ, ಸಹೋದರ ಪುತ್ರರಾದ ಅಜಿತ್ ಪವಾರ್ ಅವರು ಶರದ್ ಪವಾರ್ ವಿರುದ್ಧ ಬಂಡೆದ್ದು, ಸುಮಾರು 30 ಶಾಸಕರೊಂದಿಗೆ ಶಿಂಧೆ-ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೇ, ಸರ್ಕಾರದಲ್ಲಿ ಭಾಗಿಯಾಗಿದ್ದು, ಉಪಮುಖ್ಯಮಂತ್ರಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಶರದ್ ಪವಾರ್ ನೇತೃತ್ವದ ಬಣವು ಚುನಾವಣಾ ಆಯೋಗಕ್ಕೆ ಕೇವಿಯಟ್ ಸಲ್ಲಿಸಿದೆ. ಪಕ್ಷದ ಒಳ ಜಗಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುಂಚೆ ತಮ್ಮ ವಾದವನ್ನು ಆಲಿಸಬೇಕು ಎಂದು ಶರದ್ ಪವಾರ್ ನೇತೃತ್ವದ ಬಣ ಆಯೋಗಕ್ಕೆ ಮನವಿ ಮಾಡಿದೆ. ಚುನಾವಣಾ ಆಯೋಗವು ತನ್ನ ಮುಂದೆ ಸಲ್ಲಿಸಿದ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎರಡೂ ಬಣಗಳಿಗೆ ಹೇಳಿದೆ. ಮುಂದಿನ ಕೆಲವು ದಿನಗಳಲ್ಲಿ ಪಕ್ಷದ ಹೆಸರು ಮತ್ತು ಸಿಂಬಲ್ ಯಾವ ಬಣಕ್ಕೆ ಸೇರಲಿದೆ ಎಂಬ ನಿರ್ಧಾರವನ್ನು ಆಯೋಗ ಕೈಗೊಳ್ಳುವ ಸಾಧ್ಯತೆಗಳಿವೆ.

ಈ ಸುದ್ದಿಯನ್ನೂ ಓದಿ: NCP Crisis: ಎನ್‌ಸಿಪಿ ಪಕ್ಷ, ಚಿಹ್ನೆಗಾಗಿ ಅಜಿತ್-ಶರದ್ ಜಟಾಪಟಿ! ಯಾರ ಕ್ಯಾಂಪಿನಲ್ಲಿ ಎಷ್ಟು ಶಾಸಕರು?

ತಮ್ಮದೇ ನೈಜ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಅಜಿತ್ ಪವಾರ್ ಹಾಗೂ ಶರದ್ ಪವಾರ್ ನೇತೃತ್ವದ ಬಣಗಳು ಗುರುವಾರ ಪ್ರತ್ಯೇಕ ಸಾರ್ವಜನಿಕ ಸಭೆ ನಡೆಸಿದವು. ಈ ವೇಳೆ, ಎಷ್ಟು ಶಾಸಕರು ಯಾರ ಬಣದಲ್ಲಿದ್ದಾರೆಂಬುದು ಲೆಕ್ಕ ದೊರೆತಿದೆ. ಒಟ್ಟು 53 ಎನ್‌ಸಿಪಿ ಶಾಸಕರ ಪೈಕಿ 29 ಶಾಸಕರು ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡರೆ, ಶರದ್ ಪವಾರ್ ಬಣದಲ್ಲಿ 17 ಶಾಸಕರು ಕಾಣಿಸಿಕೊಂಡಿದ್ದಾರೆ. ಉಳಿದ 7 ಶಾಸಕರು ಇನ್ನೂ ಯಾವುದೇ ಬಣದಲ್ಲಿಗುರುತಿಸಿಕೊಂಡಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version