ಹೊಸದಿಲ್ಲಿ: ಶರದ್ ಪವಾರ್ (Sharad Pawar) ಮತ್ತು ಅಜಿತ್ ಪವಾರ್ (Ajit Pawar) ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (Nationalist congress party – NCP) ಎರಡೂ ಬಣಗಳ ಹಿರಿಯ ನಾಯಕರು ಪಕ್ಷದಲ್ಲಿ ಯಾವುದೇ ಒಡಕು ಇಲ್ಲ (NCP crisis) ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಅಜಿತ್ ಗುಂಪು ಸಲ್ಲಿಸಿದ ಅರ್ಜಿಯ ನಂತರ ಚುನಾವಣಾ ಆಯೋಗವು ಅಕ್ಟೋಬರ್ 6ರಂದು ಎನ್‌ಸಿಪಿಯ ಪ್ರತಿಸ್ಪರ್ಧಿ ಬಣಗಳನ್ನು ವೈಯಕ್ತಿಕ ವಿಚಾರಣೆಗೆ ಕರೆದಿದೆ.
“ಯಾವುದೇ ವಿಭಜನೆ ಇಲ್ಲ ಎಂದು ನಾವು ನಿರಂತರವಾಗಿ ಸಮರ್ಥಿಸಿಕೊಂಡಿದ್ದರೂ ನಮ್ಮ ಪ್ರಕರಣವನ್ನು ರಾಜಕೀಯ ಪಕ್ಷದೊಳಗಿನ ವಿವಾದ ಎಂದು ಪರಿಗಣಿಸುವುದು ಭಾರತದ ಚುನಾವಣಾ ಆಯೋಗ ಮಾಡುತ್ತಿರುವ ಅನ್ಯಾಯ” ಎಂದು ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಹೇಳಿದ್ದಾರೆ.
“ಶರದ್ ಪವಾರ್ ಅವರು ಇಸಿಐಗೆ ಬರೆದ ಪತ್ರದಲ್ಲಿ ಪಕ್ಷದೊಳಗೆ ಯಾವುದೇ ವಿರೋಧವನ್ನು ಎದುರಿಸಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ವಿವಾದವಿಲ್ಲ. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ನನ್ನ ನೀತಿಗಳಿಗೆ ಪಕ್ಷದಿಂದ ಯಾವುದೇ ವಿರೋಧವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. ಪವಾರ್ ಅವರು ತಮ್ಮ ಆವೃತ್ತಿಯನ್ನು ವಿವರಿಸಲು ಚುನಾವಣೆ ಅಯೋಗದ ಬಳಿ ಸಮಯ ಕೋರಿದ್ದಾರೆ. ಏಕೆಂದರೆ ಶರದ್ ಹಾಗೂ ಅಜಿತ್ ನಡುವೆ ಕೆಲವು ಇಮೇಲ್‌ಗಳ ವಿನಿಮಯವಾಗಿದೆ ಅಷ್ಟೆ. ಆಯೋಗ ಶರದ್ ಪವಾರ್‌ಗೆ ಸಮಯ ನೀಡದೆ, ವಿವಾದವಿದೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಿದೆ” ಎಂದಿದ್ದಾರೆ ಪಾಟೀಲ್.
“ಪಕ್ಷದಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಹೇಳಬಹುದು. ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯಂತಹ ಕೆಲವು ಬದಲಾವಣೆಗಳು ನಡೆದಿವೆ. ಅಜಿತ್ ಪವಾರ್ ಅವರು ಈಗ ಪಕ್ಷದ ಅಧ್ಯಕ್ಷರಾಗಿದ್ದಾರೆ ಮತ್ತು ನಾವು ಇದನ್ನು ಈಗಾಗಲೇ ಇಸಿಐಗೆ ತಿಳಿಸಿದ್ದೇವೆʼʼ ಎಂದು ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ಅಜಿತ್ ಪವಾರ್ ಗುಂಪಿನ ಹಿರಿಯ ನಾಯಕ ಛಗನ್ ಭುಜಬಲ್ ಹೇಳಿದ್ದಾರೆ.
ಅಜಿತ್ ಪವಾರ್ ಈ ವರ್ಷ ಜುಲೈನಲ್ಲಿ ತಮ್ಮ ಚಿಕ್ಕಪ್ಪ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿಯಾಗಿ ಶಿವಸೇನೆ- ಬಿಜೆಪಿ ಸರ್ಕಾರವನ್ನು ಸೇರಿಕೊಂಡಿದ್ದರು. ತಮ್ಮದೇ ನಿಜವಾದ ಎನ್‌ಸಿಪಿ ಎಂದು (NCP crisis) ಎರಡೂ ಬಣಗಳೂ ಸಾಧಿಸಲು ಯತ್ನಿಸುತ್ತಿವೆ.
ಇದನ್ನೂ ಓದಿ: NCP Crisis: ದಿಢೀರ್ ಶರದ್ ಪವಾರ್ ಭೇಟಿ ಮಾಡಿದ ಅಜಿತ್ ಬಣ! ವಿಷಾದ ವ್ಯಕ್ತಪಡಿಸಿದ್ರಾ?