Site icon Vistara News

NCP Crisis: ನಾನು ಸಿಎಂ ಆಗ್ಬೇಕು; ಅಜಿತ್, ಪಕ್ಷದ ಚಿಹ್ನೆ ಯಾರೂ ಕಸಿಯಲಾರರು ಎಂದ ಶರದ್! ಯಾರ ಕಡೆ ಎಷ್ಟು ಶಾಸಕರು?

Ajit Pawar

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(NCP)ದ ಬಿಕ್ಕಟ್ಟು ಮುಂದುವರಿದಿದೆ. ತಮ್ಮದೇ ನೈಜ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಅಜಿತ್ ಪವಾರ್ (Ajit Pawar) ಹಾಗೂ ಶರದ್ ಪವಾರ್ (Sharad Pawar) ನೇತೃತ್ವದ ಬಣಗಳು ಗುರುವಾರ ಪ್ರತ್ಯೇಕ ಸಾರ್ವಜನಿಕ ಸಭೆ ನಡೆಸಿದವು. ಈ ವೇಳೆ, ಎಷ್ಟು ಶಾಸಕರು ಯಾರ ಬಣದಲ್ಲಿದ್ದಾರೆಂಬುದು ಲೆಕ್ಕ ದೊರೆತಿದೆ. ಒಟ್ಟು 53 ಎನ್‌ಸಿಪಿ ಶಾಸಕರ ಪೈಕಿ 29 ಶಾಸಕರು ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡರೆ, ಶರದ್ ಪವಾರ್ ಬಣದಲ್ಲಿ 17 ಶಾಸಕರು ಕಾಣಿಸಿಕೊಂಡಿದ್ದಾರೆ. ಉಳಿದ 7 ಶಾಸಕರು ಇನ್ನೂ ಯಾವುದೇ ಬಣದಲ್ಲಿ ಗುರುತಿಸಿಕೊಂಡಿಲ್ಲ (NCP Crisis).

ಹೀಗಿದ್ದೂ ಕೆಲವು ಮೂಲಗಳ ಪ್ರಕಾರ, ಅಜಿತ್ ಪವಾರ್ ಅವರ ಶಾಸಕರ ಬೆಂಬಲ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಜಿತ್ ಬಣದ ಛಗನ್ ಬುಜಬುಲ್ ಅವರು, 40ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನಮ್ಮ ಪರವಾಗಿದ್ದಾರೆ. ನಾವು ಪ್ರಮಾಣ ವಚನ ಸ್ವೀಕರಿಸುವ ಮುನ್ನ ನಾವು ಎಲ್ಲ ಯೋಚಿಸಿಯೇ ನಿರ್ಧಾರ ಕೈಗೊಡಿದ್ದೇವೆ. ಸುಖಾ ಸುಮ್ಮನೆ ನಾವೇನೂ ಪ್ರಮಾಣ ವಚನ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

ಅಜಿತ್ ಬಣದ ಸಭೆಯನ್ನು ವೈ ಬಿ ಚವಾಣ್ ಆಡಿಟೋರಿಯಮ್‌ನಲ್ಲಿ ಆಯೋಜಿಸಲಾಗಿದ್ದು, ವೇದಿಕೆಯಲ್ಲಿ ಶರದ್ ಪವಾರ್ ಅವರ ದೊಡ್ಡ ಚಿತ್ರವಿರುವ ಬ್ಯಾನರ್ ಹಾಕಲಾಗಿದೆ. ಅಲ್ಲದೇ, ಪಕ್ಷದ ಚಿಹ್ನೆಯನ್ನು ದೊಡ್ಡದಾಗಿ ತೋರಿಸಲಾಗಿದೆ.

ನಾನು ಮುಖ್ಯಮಂತ್ರಿಯಾಗಬೇಕು- ಅಜಿತ್ ಪವಾರ್

ನಾನು ಮುಖ್ಯಮಂತ್ರಿಯಾಗಬೇಕು. ಜನರ ಕಲ್ಯಾಣಕ್ಕಾಗಿ ನಾನು ಕೆಲವು ಯೋಜನೆಗಳನ್ನು ಹೊಂದಿದ್ದೇನೆ. ಅವುಗಳ ಜಾರಿಗಾಗಿ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು. 2004ರಲ್ಲಿ ಎನ್‌ಸಿಪಿಯಿಂದ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆಗ ಕಾಂಗ್ರೆಸ್‌ ಪಕ್ಷಕ್ಕಿಂತಲೂ ಎನ್‌ಸಿಪಿ ಹೆಚ್ಚು ಸೀಟು ಗೆದ್ದಿತ್ತು. ಆದರೂ ಆಗಲಿಲ್ಲ ಎಂದು ಅಜಿತ್ ಪವಾರ್ ಹೇಳಿದ್ದಾರೆ.

2019ರಲ್ಲಿ ಏಕನಾಥ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದಾಗ ಎನ್‌ಸಿಪಿಯ ಎಲ್ಲ ಶಾಸಕರು ಬಿಜೆಪಿಯ ಜತೆ ಕೈಜೋಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿದ್ದಾರೆ. ತಮ್ಮ ಅಂಕಲ್ ವಿರುದ್ದ ಬಂಡೆದ್ದು ಎನ್‌ಸಿಪಿ ಶಾಸಕರನ್ನು ಹೈಜಾಕ್ ಮಾಡಿರುವ ಅಜಿತ್ ಪವಾರ್, ಬಿಜೆಪಿಯ ಜತೆ ಮೈತ್ರಿ ಬೆಳೆಸಲು ಸಹಿ ಮಾಡಿದ ಖಚಿತ ಪತ್ರಗಳನ್ನು ಶಾಸಕರು ನೀಡಿದ್ದಾರೆಂದು ಹೇಳಿದರು.

ಶಾಸಕರ ನಿಲುವು ಸ್ವೀಕರಿಸುವಂತೆ ನಾವೆಲ್ಲರೂ ಶರದ್ ಪವಾರ್ ಅವರಿಗೆ ಕೇಳಿಕೊಂಡೆವು. ಇಲ್ಲದಿದ್ದರೆ ಕ್ಷೇತ್ರದಲ್ಲಿ ತೊಂದರೆಯಾಗುತ್ತದೆ ಎಂದು ಹೇಳಿದೆವು. ಈ ಕುರಿತು ಬಿಜೆಪಿ ಜತೆ ಮಾತುಕತೆ ನಡೆಸಲು ನಾನು, ಜಯಂತ್ ಪಾಟೀಲ್ ಸೇರಿದಂತೆ ಒಂದು ಕಮಿಟಿ ಮಾಡಲಾಯಿತು. ಆಗ ಶರದ್ ಪವಾರ್, ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರವಾಗುವುದರಿಂದ ನನಗೆ ಹೋಗಲು ಹೇಳಲಿಲ್ಲ. ಬದಲಿಗೆ ಫೋನ್ ಮೂಲಕ ಮಾತನಾಡುವಂತೆ ತಿಳಿಸಿದರು. ಆ ಹೊತ್ತಿನಲ್ಲಿ ಇನ್ನೂ ಏಕನಾಥ್ ಶಿಂಧೆ ಸರ್ಕಾರ ರಚನೆಯಾಗಿರಲಿಲ್ಲ ಎಂದು ಹೇಳಿದರು.

2019ರಲ್ಲಿ ಸರ್ಕಾರ ರಚಿಸುವ ಸಂಬಂಧ ಬಿಜೆಪಿ ಜತೆ ಒಟ್ಟು ಐದು ಸಭೆಗಳಾದವು. ಆದರೆ, ಕೂಡಲೇ ಬಿಜೆಪಿ ಜತೆಗೆ ಮೈತ್ರಿ ಸಾಧ್ಯವಿಲ್ಲ. ಶಿವಸೇನೆ ಜತೆ ಹೋಗೋಣ ಎಂದು ತಿಳಿಸಲಾಯಿತು ಎಂದು ಅಜಿತ್ ಪವಾರ್ ಹೇಳಿದರು. 2017ರಲ್ಲಿ ಶಿವಸೇನೆಯನ್ನು ಜಾತಿವಾದಿ ಪಕ್ಷ ಎಂದು ಕರೆದರು. ಅದೇ ಶಿವಸೇನೆಯ ಜತೆಗೆ 2019ರಲ್ಲಿ ಶರದ್ ಪವಾರ್ ಸರ್ಕಾರ ರಚಿಸಿದರು. ಆದರೆ, ನನ್ನನ್ನು ಏಕೆ ವಿಲನ್ ಮಾಡಲಾಯಿತು ಎಂದು ನನಗೆ ಗೊತ್ತಿಲ್ಲ ಎಂದು ಅಜಿತ್ ಪವಾರ್ ಹೇಳಿದರು.

ಉಳಿದ ರಾಜಕೀಯ ಪಕ್ಷಗಳಲ್ಲಿ ವಯಸ್ಸಾದ ನಾಯಕರು ಪಕ್ಷದಿಂದ ನಿವೃತ್ತರಾಗುತ್ತಾರೆ. ನೀವು (ಶರದ್) ಕೂಡ ಹೊಸಬರಿಗೆ ಅವಕಾಶವನ್ನು ನೀಡಬೇಕು. ನಾವೇನಾದರೂ ತಪ್ಪುಗಳನ್ನು ಮಾಡಿದರೆ ನಮ್ಮನ್ನು ತಿದ್ದಿ. ನಿಮಗೀಗ 83 ವರ್ಷ. ಈಗಲಾದರೂ ನೀವು ನಿವೃತ್ತಿಯಾಗುತ್ತಿರೋ ಅಥವಾ ಇಲ್ಲವೋ? ನೀವು ನಮಗೆ ಆಶೀರ್ವಾದ ಮಾಡಬೇಕು ಎಂದು ಅಜಿತ್ ಪವಾರ್ ಹೇಳಿದರು. ಇದೇ ವೇಳೆ, ಸುಪ್ರಿಯಾ ಸುಳೆ ವಿರುದ್ಧವೂ ಹರಿಹಾಯ್ದ ಅಜಿತ್ ಪವಾರ್, ಪವರ್‌ಫುಲ್ ಫ್ಯಾಮಿಲಿಯಲ್ಲಿ ಹುಟ್ಟದಿರುವುದು ನಮ್ಮ ತಪ್ಪೇ ಎಂದು ಪ್ರಶ್ನಿಸಿದರು.

ಪಕ್ಷ ಚಿಹ್ನೆ ಯಾರು ಕಸಿಯಲಾರರು- ಶರದ್ ಪವಾರ್

ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ಶಕ್ತಿ ಪ್ರದರ್ಶನ ಮಾಡಿದ್ದು, ಪಕ್ಷದ ಚಿಹ್ನೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪಕ್ಷದ ವಿರುದ್ಧ ಬಂಡಾಯ ಎದ್ದಿರುವವರು ನನ್ನ ಭಾವಚಿತ್ರವನ್ನು ಬಳಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ: NCP Crisis: ‘ಪವರ್​‘ಯಾರದ್ದು?; ಶರದ್ ಪವಾರ್ ಫೋಟೋ ಇಟ್ಕೊಂಡೇ ಸಭೆ ಮಾಡಿದ ಅಜಿತ್​ ಪವಾರ್​!

ಯಾವುದೇ ಪಕ್ಷವನ್ನು ಪೂರ್ತಿಯಾಗಿ ಆಪೋಶನ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಬಿಜೆಪಿ ವಿರುದ್ಧ ಶರದ್ ಪವಾರ್ ಗುಡುಗಿದರು. ಈಗ ಅಜಿತ್ ಪವಾರ್ ಬಣ ಕೈಗೊಂಡಿರುವ ನಿರ್ಧಾರದ ವೇಳೆ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಜಿತ್ ಬಣವು ಜನರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ. ಇಂದೆ ನಾನು ಏನಾಗಿದ್ದೇನೋ ಅದೆಲ್ಲವು ಕಾರ್ಯಕರ್ತರಿಂದಾಗಿ. ನನ್ನ ಯಶಸ್ಸು ನನ್ನ ಪಕ್ಷದ ಕಾರ್ಯಕರ್ತರು ಎಂದು ಅಜಿತ್ ವಿರುದ್ದ ಶರದ್ ಪವಾರ್ ಗುಡುಗಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version