Site icon Vistara News

Ajit Pawar: ಪಕ್ಷದ ಹುದ್ದೆಗೆ ಅಜಿತ್ ಪವಾರ್ ಪಟ್ಟು, ಇಲ್ಲದಿದ್ದರೆ ಎನ್‌ಸಿಪಿಗೆ ಪೆಟ್ಟು?

Ajit Pawar

ಮುಂಬೈ, ಮಹಾರಾಷ್ಟ್ರ: ಶರದ್ ಪವಾರ್ (Sharad Pawar) ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ(NCP)ಯಲ್ಲಿ ಭಿನ್ನಮತವು ಬೂದಿ ಮುಚ್ಚಿದ ಕೆಂಡದಂತಿದೆ. ಇತ್ತೀಚೆಗಷ್ಟೇ ಶರದ್ ಪವಾರ್ ಅವರು, ತಮ್ಮ ಪುತ್ರಿ ಸುಪ್ರಿಯಾ ಸುಳೆ (Supriya Sule) ಮತ್ತು ಪ್ರಫುಲ್ ಪಟೇಲ್ (Praful Patel) ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆದರೆ, ಪಕ್ಷದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಸಹೋದರನ ಪುತ್ರ ಅಜಿತ್ ಪವಾರ್ (Ajit Pawar) ಅವರಿಗೆ ಯಾವುದೇ ಜವಾಬ್ದಾರಿ ನೀಡಿರಲಿಲ್ಲ. ಮಹಾರಾಷ್ಟ್ರ ವಿಧಾನಸಭೆಯಲ್ಲಿ (Maharashtra Assmebly) ಪ್ರತಿಪಕ್ಷದ ನಾಯಕರಾಗಿರುವ ಅಜಿತ್ ಪವಾರ್ ಅವರು, ತಮಗೆ ಈ ಹುದ್ದೆ ಇಷ್ಟವಿಲ್ಲ. ಪಕ್ಷದ ಜವಾಬ್ದಾರಿ ನೀಡಿ ಎಂದು ಈಗ ನೇರವಾಗಿ ಪಕ್ಷಕ್ಕೆ ಕೇಳಿಕೊಂಡಿದ್ದಾರೆ. ಇದರೊಂದಿಗೆ ಎನ್‌ಸಿಪಿಯಲ್ಲಿನ ಭಿನ್ನಮತ ಬಟಾಬಯಲಾಗಿದೆ.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ 24ನೇ ಸಂಸ್ಥಾಪದನಾ ದಿನಾಚರಣೆಯನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಅಜಿತ್ ಪವಾರ್ ತಮ್ಮ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕನ ಹುದ್ದೆ ಬೇಡ, ಪಕ್ಷದಲ್ಲಿ ಜವಾಬ್ದಾರಿ ನೀಡಿ ಎಂದು ಹೇಳಿಕೊಂಡಿದ್ದಾರೆ. ”ನಾನು ವಿರೋಧ ಪಕ್ಷದ ನಾಯಕನಾಗಿ ಕಠಿಣವಾಗಿ ವರ್ತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕನಾಗಲು ನನಗೆ ಎಂದಿಗೂ ಇಷ್ಟವಿರಲಿಲ್ಲ. ಪಕ್ಷದ ಶಾಸಕರ ಒತ್ತಾಯಕ್ಕೆ ಮಣಿದು ನಾನು ಈ ಹುದ್ದೆಯನ್ನು ಅಲಂಕರಿಸಿದ್ದೆ” ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಪಕ್ಷದ ಯಾವುದೇ ಸಂಘಟನಾತ್ಮಕ ಹುದ್ದೆಯ ಜವಾಬ್ದಾರಿ ನೀಡಿ. ನನಗೆ ನೀಡುವ ಯಾವುದೇ ಹುದ್ದೆಗೆ ಸಂಪೂರ್ಣ ನ್ಯಾಯ ಒದಗಿಸುತ್ತೇನೆ ಎಂದು ಅಜಿತ್ ಪವಾರ್ ಅವರು ಪಕ್ಷಕ್ಕೆ ತಿಳಿಸಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಮಹಾ ಆಘಾಡಿ ಸರ್ಕಾರವು ಪತನಗೊಂಡ ಬಳಿಕ ಅಜಿತ್ ಪವಾರ್ ಪ್ರತಿಪಕ್ಷದ ನಾಯಕರಾಗಿದ್ದರು. ಇದಕ್ಕೂ ಮೊದಲು ಅವರು ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಈ ಮಧ್ಯೆ, ಅಜಿತ್ ನೇತೃತ್ವದಲ್ಲಿ ಕೆಲವು ಶಾಸಕರು ಶಿವಸೇನೆ(ಶಿಂಧೆ) ಮತ್ತು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆಂದು ಸುದ್ದಿಯಾಗಿತ್ತು. ಬಳಿಕ ಈ ಸುದ್ದಿಯನ್ನು ಅವರು ನಿರಾಕರಿಸಿದ್ದರು.

ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ಎನ್‌ಸಿಪಿ ಕಾರ್ಯಾಧ್ಯಕ್ಷರು

ತಮ್ಮ ಪುತ್ರಿ ಸುಪ್ರಿಯಾ ಸುಳೆ (Supriya Sule) ಮತ್ತು ಹಿರಿಯ ನಾಯಕ ಪ್ರಫುಲ್ ಪಟೇಲ್ (Praful Patel) ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (NCP)ಯ ಕಾರ್ಯಾಧ್ಯಕ್ಷರನ್ನಾಗಿ (Working President) ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ನೇಮಕ ಮಾಡಿದ್ದಾರೆ. ಪಕ್ಷದ ಸಂಸ್ಥಾಪನೆಯ 25 ವರ್ಷ ಆಚರಣೆ ವೇಳೆ ಈ ಘೋಷಣೆಯನ್ನು ಪವಾರ್ ಅವರ ಮಾಡಿದರು. 1999ರಲ್ಲಿ ಶರದ್ ಪವಾರ್ (Sharad Pawar) ಅವರು ಪಿಎ ಸಂಗ್ಮಾ ಜತೆಗೂಡಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದರು. ಆದರೆ, ಪಕ್ಷದ ಮತ್ತೊಬ್ಬ ಪ್ರಮುಖ ನಾಯಕನಾಗಿರುವ ಅಜಿತ್ ಪವಾರ್ (Ajit Pawar) ಅವರಿಗೆ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ವಿಶೇಷ ಎಂದರೆ, ಕಾರ್ಯಾಧ್ಯಕ್ಷರ ಘೋಷಣೆಯನ್ನು ಪವಾರ್ ಅವರು, ಅಜಿತ್ ಅವರ ಸಮ್ಮುಖದಲ್ಲಿ ಮಾಡಿದರು.

ಕಳೆದ ತಿಂಗಳವಷ್ಟೇ ಶರದ್ ಪವಾರ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡವುದಾಗಿ ಘೋಷಿಸಿದ್ದರು. ಆದರೆ, ಪವಾರ್ ಅವರ ರಾಜೀನಾಮೆಯನ್ನು ಪಕ್ಷವು ಅಂಗೀಕರಿಸಿರಲಿಲ್ಲ. ಹಾಗಾಗಿ, ಅವರು ಮತ್ತೆ ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಇದಕ್ಕೂ ಮೊದಲು, ಪವಾರ್ ಅವರ ಸಹೋದರ ಪುತ್ರ ಅಜಿತ್ ಪವಾರ್ ಅವರು ರಾಷ್ಟ್ರೀಯವಾದಿ ಪಕ್ಷವನ್ನು ಒಡೆದು ಬಿಜೆಪಿ-ಶಿಂಧೆ ಶಿವಸೇನೆ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆಂಬ ಸುದ್ದಿ ಹರಿದಾಡಿತ್ತು. ಬಳಿಕ ಆ ಸುದ್ದಿಯನ್ನು ಅಜಿತ್ ಪವಾರ್ ತಳ್ಳಿ ಹಾಕಿದ್ದರು.

ಈ ಸುದ್ದಿಯನ್ನೂ ಓದಿ: Sharad Pawar: ಶರದ್‌ ಪವಾರ್‌ ಯುಟರ್ನ್‌, ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ತೀರ್ಮಾನ

ಪಕ್ಷದೊಳಗೆ ಸಾಕಷ್ಟು ಪ್ರಭಾವವನ್ನು ಬೆಳೆಸಿಕೊಂಡಿರುವ ಅಜಿತ್ ಪವಾರ್ ಅವರಿಗೆ ಯಾವುದೇ ಜವಾಬ್ದಾರಿಯನ್ನು ವಹಿಸಿದರುವ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿಯೊಳೆಗ ಎಲ್ಲವೂ ಸರಿ ಇಲ್ಲ ಸುದ್ದಿಗಳು ಆಗಾಗ ಹೊರ ಬರುತ್ತಲೇ ಇರುತ್ತವೆ. ಇದೀಗ, ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರಿಗೆ ಜವಾಬ್ದಾರಿ ಮಾಡಿರುವುದು, ಪಕ್ಷದೊಳಗೆ ಕಲಹಕ್ಕೆ ಕಾರಣವಾಗಲಿದೆಯೇ ಕಾದು ನೋಡಬೇಕಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version