ನವದೆಹಲಿ: ಚುನಾವಣೆ ಆಯೋಗವು (Election Commission:) ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC), ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷಗಳಿಗೆ (CPI) ನೀಡಲಾಗಿದ್ದ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆಯನ್ನು ಹಿಂಪಡೆದಿದೆ. ಹಾಗೆಯೇ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ (AAP) ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಿದೆ.
“ಪ್ರಕ್ರಿಯೆಯನ್ನು ಪಾಲಿಸಿ ಹಾಗೂ ಕಳೆದ ಎರಡು ಸಂಸತ್ ಚುನಾವಣೆ ಮತ್ತು 21 ವಿಧಾನಸಭೆ ಚುನಾವಣೆಗಳನ್ನು ಆಧರಿಸಿ ಮೂರು ರಾಷ್ಟ್ರೀಯ ಪಕ್ಷಗಳ ಮಾನ್ಯತೆಯನ್ನು ಹಿಂಪಡೆಯಲಾಗಿದೆ” ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ. ಇದರಿಂದಾಗಿ ಲೋಕಸಭೆ ಚುನಾವಣೆಗೂ ಮುನ್ನವೇ ಮಮತಾ ಬ್ಯಾನರ್ಜಿ, ಶರದ್ ಪವಾರ್ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.
ಆಮ್ ಆದ್ಮಿ ಪಕ್ಷಕ್ಕೆ ಭಾರಿ ಮುನ್ನಡೆ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆ ದೊರೆತಿರುವುದು ಅವರಿಗೆ ಭಾರಿ ಮುನ್ನಡೆ ಸಿಕ್ಕಂತಾಗಿದೆ. ದೆಹಲಿ ಹಾಗೂ ಪಂಜಾಬ್‌ಗಳಲ್ಲಿ ಈಗಾಗಲೇ ಸರ್ಕಾರಗಳನ್ನು ಆಪ್ ಸ್ಥಾಪಿಸಿದೆ. ಗೋವಾ ಸೇರಿದಂತೆ, ಮೂರು ರಾಜ್ಯಗಳಲ್ಲಿ ʼರಾಜ್ಯ ಪಕ್ಷʼ ಎಂದು ಗುರುತಿಸಿಕೊಂಡಿದೆ. ರಾಜ್ಯ ಪಕ್ಷ ಎನಿಸಿಕೊಳ್ಳಬೇಕಿದ್ದರೆ ಆಯಾ ರಾಜ್ಯದಲ್ಲಿ ಎರಡು ಕ್ಷೇತ್ರಗಳನ್ನು ಹಾಗೂ 6% ಮತಗಳನ್ನು ಪಡೆದಿರಬೇಕು. ಹೀಗೆ ನಾಲ್ಕು ರಾಜ್ಯಗಳಲ್ಲಿ ಗುರುತಿಸಿಕೊಂಡಿದ್ದರೆ ಅದನ್ನು ರಾಷ್ಟ್ರೀಯ ಪಕ್ಷ ಎನ್ನಲಾಗುತ್ತದೆ. ದೆಹಲಿ, ಪಂಜಾಬ್, ಗೋವಾ ಮತ್ತೀಗ ಗುಜರಾತ್ ಸೇರಿ ಆಪ್ ಅನ್ನು ರಾಷ್ಟ್ರೀಯ ಪಕ್ಷವಾಗಿದೆ. ಗುಜರಾತ್ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕವೇ ಆಪ್ ರಾಷ್ಟ್ರೀಯ ಪಕ್ಷವಾಗುವುದು ಖಚಿತವಾಗಿತ್ತು. ಈಗ ಚುನಾವಣೆ ಆಯೋಗವು ಅಧಿಕೃತವಾಗಿ ಘೋಷಿಸಿದೆ.
ಇದನ್ನೂ ಓದಿ: Shiv Sena Symbol Row: ಚುನಾವಣೆ ಆಯೋಗದ ತೀರ್ಮಾನಕ್ಕೆ ತಡೆ ನೀಡಲು ಸುಪ್ರೀಂ ನಕಾರ, ಉದ್ಧವ್‌ಗೆ ಮತ್ತೆ ಹಿನ್ನಡೆ
ಚುನಾವಣೆ ಆಯೋಗದ ಪ್ರಮುಖ ಘೋಷಣೆ
- ನಾಗಾಲ್ಯಾಂಡ್ನಲ್ಲಿ ಎನ್‌ಸಿಪಿ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಮೇಘಾಲಯದಲ್ಲಿ ಟಿಎಂಸಿ, ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ, ತ್ರಿಪುರದಲ್ಲಿ ಟಿಪ್ರಾ ಮೋಥಾ ಪಕ್ಷಗಳಿಗೆ ರಾಜ್ಯ ಪಕ್ಷ ಮಾನ್ಯತೆ ನೀಡಿದ ಚುನಾವಣೆ ಆಯೋಗ.
- ಆಮ್ ಆದ್ಮಿ ಪಕ್ಷವನ್ನು ಪ್ಯಾರಾ 6 ಬಿ (iii) ಅಡಿಯಲ್ಲಿ ರಾಷ್ಟ್ರೀಯ ಪಕ್ಷ ಎಂದು ಘೋಷಣೆ. ದೆಹಲಿ, ಗೋವಾ, ಪಂಜಾಬ್ ಹಾಗೂ ಗುಜರಾತ್ನಲ್ಲಿ ರಾಜ್ಯ ಪಕ್ಷ ಎಂಬ ಮಾನ್ಯತೆ.
- ಮಣಿಪುರದ ಪಿಡಿಎ, ಪುದುಚೇರಿಯ ಪಿಎಂಕೆ, ಉತ್ತರ ಪ್ರದೇಶದ ಆರ್ಎಲ್ಡಿ, ಆಂಧ್ರಪ್ರದೇಶದ ಬಿಆರ್ಎಸ್, ಪಶ್ಚಿಮ ಬಂಗಾಳದ ಆರ್ಎಸ್ಪಿ ಹಾಗೂ ಮಿಜೋರಾಂನ ಎಂಪಿಸಿ ಪಕ್ಷಗಳ ರಾಜ್ಯ ಪಕ್ಷ ಮಾನ್ಯತೆ ಹಿಂಪಡೆಯಲಾಗಿದೆ. ಇವು ಇನ್ನು ರಿಜಿಸ್ಟರ್ಡ್ ಅನ್ರೆಕಗ್ನೈಸ್ಡ್ ಪೊಲಿಟಿಕಲ್ ಪಾರ್ಟೀಸ್ ಎನಿಸಲಿವೆ.