Site icon Vistara News

NDA Meeting: ಎನ್‌ಡಿಎ ಸಭೆಯಲ್ಲಿ ಮೋದಿಯ ಪಾದ ಮುಟ್ಟಿ ನಮಸ್ಕರಿಸಲು ಹೋದ ನಿತೀಶ್ ಕುಮಾರ್! ವಿಡಿಯೊ ನೋಡಿ

NDA Meeting

NDA Meeting: Nitish Kumar tries to touch Narendra Modi's feet; watch how Prime Minister responded

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಎನ್‌ಡಿಎ ಮೈತ್ರಿಕೂಟವು 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಎನ್‌ಡಿಎ ಸಭೆಯಲ್ಲಿ (NDA Meeting) ನರೇಂದ್ರ ಮೋದಿ (Narendra Modi) ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜೂನ್‌ 9ರಂದು ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು, ಶುಕ್ರವಾರ ನಡೆದ ಎನ್‌ಡಿಎ ಸಭೆಯಲ್ಲಿ ನಿತೀಶ್‌ ಕುಮಾರ್‌ (Nitish Kumar) ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾದರು. ಆಗ ನರೇಂದ್ರ ಮೋದಿ ಅವರು ಅವರನ್ನು ತಡೆದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಸಂಸದೀಯ ಪಕ್ಷದ ಸಭೆಯಲ್ಲಿ ರಾಜನಾಥ್‌ ಸಿಂಗ್‌ ಅವರು ನರೇಂದ್ರ ಮೋದಿ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕ ಎಂಬುದಾಗಿ ಪ್ರಸ್ತಾಪಿಸಿದರು. ಇದಕ್ಕೆ, ಎನ್‌ಡಿಎ ಮೈತ್ರಿಕೂಟದ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಇದಾದ ಬಳಿಕ ನಿತೀಶ್‌ ಕುಮಾರ್‌ ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾದರು. ಆಗ ಮೋದಿ ಅವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ನರೇಂದ್ರ ಮೋದಿ ಅವರಿಗೆ 73 ವರ್ಷ ವಯಸ್ಸಾಗಿದ್ದರೆ, ನಿತೀಶ್‌ ಕುಮಾರ್‌ ಅವರು ವಯಸ್ಸು ಕೂಡ 73 ವರ್ಷವಾಗಿದೆ. ಇಬ್ಬರೂ ಸಮಕಾಲೀನ ನಾಯಕರಾಗಿದ್ದಾರೆ.

ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ನಿತೀಶ್‌ ಕುಮಾರ್‌, ಪವನ್‌ ಕಲ್ಯಾಣ್‌ ಸೇರಿ ಹಲವರನ್ನು ಹೊಗಳಿದರು. ಯೋಗಿ ಆದಿತ್ಯನಾಥ್‌ ಅವರ ಬೆನ್ನನ್ನೂ ತಟ್ಟಿದರು. ಇದೇ ವೇಳೆ, ದಕ್ಷಿಣ ಭಾರತದ ಫಲಿತಾಂಶದ ಕುರಿತು ಕೂಡ ಮೋದಿ ಪ್ರಸ್ತಾಪಿಸಿದರು.

“ದಕ್ಷಿಣ ಭಾರತದಲ್ಲಿ ಎನ್‌ಡಿಎ ಬುನಾದಿ ಭದ್ರವಾಗಿದ್ದು, ಹೊಸ ರಾಜಕೀಯಕ್ಕೆ ಇದು ನಾಂದಿಯಾಗಿದೆ. ಕರ್ನಾಟಕ ಹಾಗೂ ತೆಲಂಗಾಣವನ್ನೇ ತೆಗೆದುಕೊಳ್ಳಿ, ಇತ್ತೀಚೆಗೆ ಬೇರೆ ಪಕ್ಷಗಳ ಸರ್ಕಾರಗಳು ಅಲ್ಲಿ ಆಡಳಿತಕ್ಕೆ ಬಂದಿವೆ. ಆದರೆ, ಜನರು ಭ್ರಮೆಯಿಂದ ಹೊರಬಂದು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಜನ ಎನ್‌ಡಿಎ ಮೈತ್ರಿಕೂಟವನ್ನು ಸ್ವೀಕರಿಸಿದ್ದಾರೆ. ಇದು ಎನ್‌ಡಿಎ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.

“ಕರ್ನಾಟಕ, ತೆಲಂಗಾಣದ ಜತೆಗೆ ತಮಿಳುನಾಡಿನ ತಂಡಕ್ಕೂ ನಾನು ಅಭಿನಂದನೆ ತಿಳಿಸುತ್ತೇನೆ. ನಾವು ಒಗ್ಗೂಡಿ ಹೋರಾಡಿದರೂ ಒಂದು ಸೀಟು ಕೂಡ ಗೆಲ್ಲಲು ಆಗಲಿಲ್ಲ. ಆದರೆ, ಎನ್‌ಡಿಎ ಮತಗಳಿಕೆಯ ಪ್ರಮಾಣವು ಜಾಸ್ತಿಯಾಗಿದೆ. ಇದರಿಂದ ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಎನ್‌ಡಿಎಗೆ ಜನಬೆಂಬಲ ಸಿಗುತ್ತದೆ ಎಂಬುದಕ್ಕೆ ಇದು ಸಂಕೇತವಾಗಿದೆ. ಕೇರಳದಲ್ಲಿ ನಮ್ಮ ನೂರಾರು ಕಾರ್ಯಕರ್ತರು ತ್ಯಾಗ, ಬಲಿದಾನ ಮಾಡಿದರು. ಇದೇ ಮೊದಲ ಬಾರಿಗೆ ಕೇರಳದಲ್ಲಿ ಎನ್‌ಡಿಎ ಖಾತೆ ತೆರೆದಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Narendra Modi: ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?

Exit mobile version