| ಬಿ. ಸೋಮಶೇಖರ್, ಬೆಂಗಳೂರು
ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ (Nagaland Election Result) ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (NDPP) ಹಾಗೂ ಬಿಜೆಪಿ ಮೈತ್ರಿಯು ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಆಡಳಿತ ವಿರೋಧಿ ಅಲೆ, ಸ್ಥಳೀಯ ಪಕ್ಷಗಳ ಪ್ರಾಬಲ್ಯದಿಂದಾಗಿ ಈ ಬಾರಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರ ಉಳಿಸಿಕೊಳ್ಳುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ, ರಾಜಕೀಯ ಲೆಕ್ಕಾಚಾರಗಳನ್ನೂ ಮೀರಿ ಎನ್‌ಡಿಎ ಮೈತ್ರಿಯು ಅಧಿಕಾರ ಉಳಿಸಿಕೊಂಡಿದೆ.
ಮೂರು ಬಾರಿಯ ಮುಖ್ಯಮಂತ್ರಿ ನೈಫಿಯು ರಿಯೋ ಉತ್ತಮ ಆಡಳಿತ, ಬಿಜೆಪಿಯ ಸಂಘಟನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ಅಲೆಯಿಂದಾಗಿ ಎನ್‌ಡಿಎ ಮೈತ್ರಿಕೂಟವು ಮತ್ತೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಈಗಾಗಲೇ ಮ್ಯಾಜಿಕ್ ನಂಬರ್ (31) ಸಂಖ್ಯೆಯನ್ನು ಮೈತ್ರಿಕೂಟವು ದಾಟಿದೆ. ಇದರಿಂದಾಗಿ ನೈಫಿಯು ರಿಯೋ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ಚುನಾವಣೆ ಗೆಲುವಿನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯ ಆತ್ಮವಿಶ್ವಾಸ ಇಮ್ಮಡಿಯಾದಂತಾಗಿದೆ. ಉಪ ಮುಖ್ಯಮಂತ್ರಿ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಂಥುಂಗೋ ಪಟ್ಟೋನ್ ಕೂಡ ಗೆಲುವು ಸಾಧಿಸಿದ ಪ್ರಮುಖರಾಗಿದ್ದಾರೆ. ಚುನಾವಣೆಯಲ್ಲಿ ಎನ್‌ಡಿಪಿಪಿ 40 ಹಾಗೂ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ಮಂಕಾದ ಕಾಂಗ್ರೆಸ್, ಎಪಿಎಫ್
ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ಹಾಗೂ ನಾಗಾ ಪೀಪಲ್ಸ್ ಫ್ರಂಟ್ ಪೂರ್ತಿ ಮಂಕಾಗಿವೆ. ಕಳೆದ ಬಾರಿ 26 ಕ್ಷೇತ್ರಗಳಲ್ಲಿ ಗೆದ್ದಿದ್ದ ಎನ್‌ಪಿಎಫ್ ಈ ಬಾರಿ ಕೇವಲ 5 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಮತ್ತೊಂದೆಡೆ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. 2003ರವರೆಗೆ ನಾಗಾಲ್ಯಾಂಡ್‌ಅನ್ನು ಆಳಿದ್ದ ಕಾಂಗ್ರೆಸ್ ಈಗ ನಗಣ್ಯ ಎಂಬಂತಾಗಿದೆ. ಇನ್ನು ಎನ್‌ಪಿಪಿ, ಎನ್‌ಸಿಪಿಯು ತಲಾ ಐದು, ಆರ್‌ಪಿಐ 2 ಹಾಗೂ ಪಕ್ಷೇತರ ಅಭ್ಯರ್ಥಿಗಳು 4 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.
ಇತಿಹಾಸ ಸೃಷ್ಟಿಸಿದ ಮಹಿಳೆಯರು
ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ನಲ್ಲಿ ಮಹಿಳೆಯರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಗಾಲ್ಯಾಂಡ್ ರಚನೆಯಾಗಿ 60 ವರ್ಷದ ಬಳಿಕ ಚುನಾವಣೆಯಲ್ಲಿ ಹೆಣ್ಣುಮಕ್ಕಳು ಗೆಲುವು ಸಾಧಿಸಿದ್ದಾರೆ. ಸಾಲ್ಹೋತೌನೋ ಖ್ರುಸೆ ಹಾಗೂ ಹೆಕಾನಿ ಖಜಾಲು ಅವರು ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇವರಿಬ್ಬರೂ ಎನ್‌ಡಿಪಿಪಿ ಸದಸ್ಯೆಯರೇ ಆಗಿದ್ದು, ರಾಜ್ಯದಲ್ಲಿ ರಾಜಕೀಯ ಕ್ಷೇತ್ರದಲ್ಲೂ ಮಹಿಳಾ ಸಬಲೀಕರಣಕ್ಕೆ ಇಬ್ಬರೂ ನಾಂದಿ ಹಾಡಿದ್ದಾರೆ.
2018ರ ಚುನಾವಣೆ ಫಲಿತಾಂಶ
ಪಕ್ಷ ಗೆದ್ದ ಸ್ಥಾನ
ಎನ್‌ಪಿಎಫ್ 26
ಬಿಜೆಪಿ 12
ಇತರೆ 22
ಇದನ್ನೂ ಓದಿ: Nagaland Election: ನಾಗಾಲ್ಯಾಂಡ್‌ನಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದ ಇಬ್ಬರು ಮಹಿಳೆಯರು; ಇತಿಹಾಸ ಸೃಷ್ಟಿ