Site icon Vistara News

Sanatana Dharma: ನಮಗೆ ಹೊಸ ಧರ್ಮವೇ ಬೇಕು; ‘ಸನಾತನ’ ವಿವಾದ ಬೆನ್ನಲ್ಲೇ ಹಿಂದು ಸಂಘಟನೆಯ ಆಗ್ರಹ

Om Flag

Need new dharma: Sanatana remark by Gujarat's Hindu outfit sparks row

ಗಾಂಧಿನಗರ: ಸನಾತನ ಧರ್ಮವು (Sanatana Dharma) ಕೊರೊನಾ, ಮಲೇರಿಯಾ ಇದ್ದಂತೆ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ನೀಡಿದ ಹೇಳಿಕೆಯು ದೇಶಾದ್ಯಂತ ಸಂಚಲನ ಮೂಡಿಸಿದೆ. ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಇಂಡಿಯಾ ಒಕ್ಕೂಟದಲ್ಲೇ ಬಿರುಕು ಮೂಡಿಸುವಷ್ಟು, ಅಭಿಪ್ರಾಯ ಭೇದ ಪ್ರದರ್ಶಿಸುವಷ್ಟು ಪರಿಣಾಮ ಬೀರಿದೆ. ಇದರ ಬೆನ್ನಲ್ಲೇ, ಗುಜರಾತ್‌ ಹಿಂದು ಸಂಘಟನೆಯೊಂದು ‘ನಮಗೆ ಹೊಸ ಧರ್ಮವೇ ಬೇಕು’ ಎಂಬುದಾಗಿ ಬೇಡಿಕೆ ಇಟ್ಟಿದೆ. ಇದು ಕೂಡ ಈಗ ವಿವಾದಕ್ಕೆ ಕಾರಣವಾಗಿದೆ.

ಹೌದು, ಗುಜರಾತ್‌ನ ಪ್ರಮುಖ ಹಿಂದು ಸಂಘಟನೆಯಾಗಿರುವ ಸ್ವಾಮಿನಾರಾಯಣ ವಡತಲ ಪಂಥದ ಆಚಾರ್ಯ ದಿನೇಶ್‌ ಪ್ರಸಾದ್‌ ಸ್ವಾಮಿ ಅವರು ಹೊಸ ಧರ್ಮದ ಬೇಡಿಕೆ ಇಟ್ಟಿದ್ದಾರೆ. “ದೇವಾಲಯಗಳಿಂದ ನಾವು ದೇವರು ಹಾಗೂ ದೇವತೆಗಳ ಮೂರ್ತಿಗಳನ್ನು ತೆರವುಗೊಳಿಸಬೇಕು. ಇದಾದ ಬಳಿಕ ಹೊಸ ಧರ್ಮವನ್ನು ಸ್ಥಾಪಿಸಬೇಕು” ಎಂದು ಹೇಳಿಕೆ ನೀಡಿದ್ದಾರೆ. ಆಗಸ್ಟ್‌ 28ರಂದು ಇವರು ಹೊಸ ಧರ್ಮದ ಕುರಿತು ಬೇಡಿಕೆ ಇಟ್ಟಿದ್ದು, ಇದೀಗ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ.

ಹೇಳಿಕೆಗೆ ಭಾರಿ ವಿರೋಧ

ಅಲ್ಲದೆ, 19ನೇ ಶತಮಾನದ ಸಂತ ಸಹಜಾನಂದ ಸ್ವಾಮಿ ಅವರ ಮೂರ್ತಿಯ ಎದುರು ಆಂಜನೇಯ ಕಾಲೂರಿ ನಮಿಸುವ ಚಿತ್ರವನ್ನು ಕೂಡ ತೆರವುಗೊಳಿಸಬೇಕು ಎಂದು ಆಚಾರ್ಯ ದಿನೇಶ್‌ ಪ್ರಸಾದ್‌ ಸ್ವಾಮಿ ಆಗ್ರಹಿಸಿದ್ದಾರೆ. ಇವರ ಹೇಳಿಕೆಗೆ ಗುಜರಾತ್‌ನಲ್ಲಿ ಸನಾತನ ಧರ್ಮದ ಅನುಯಾಯಿಗಳು, ಹಲವು ಹಿಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Sanatana Dharma: ಸನಾತನ ಧರ್ಮದ ವಿರುದ್ಧ ಹೋರಾಡಲು ಇಂಡಿಯಾ ಕೂಟ ರಚನೆ! ಡಿಎಂಕೆ ಸಚಿವ ಹೇಳಿಕೆ

ಉದಯನಿಧಿ ಸ್ಟಾಲಿನ್ ಹೇಳಿದ್ದಿಷ್ಟು…

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.

ಉದಯನಿಧಿ ಸ್ಟಾಲಿನ್‌ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಿಂದು ಸಂಘಟನೆಗಳು, ಕಾಂಗ್ರೆಸ್‌ ಮುಖಂಡರು ಸೇರಿ ಹಲವರು ಸ್ಟಾಲಿನ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ಅದರಲ್ಲೂ, ಡಿಎಂಕೆಯ ಮತ್ತೊಬ್ಬ ಸಚಿವ ಎ. ರಾಜಾ ಅವರು ನಾವು ಇಂಡಿಯಾ ಒಕ್ಕೂಟವನ್ನು ರಚಿಸಿದ್ದೇ ಸನಾತನ ಧರ್ಮದ ವಿರುದ್ಧ ಹೋರಾಡಲು ಎಂದು ಹೇಳಿರುವುದು ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

Exit mobile version