Site icon Vistara News

NEET 2024: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಗೆ 30-32 ಲಕ್ಷ ರೂ. ಡೀಲ್‌; ತಪ್ಪೊಪ್ಪಿಕೊಂಡ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌

NEET-UG Row

NEET 2024

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET 2024)ನ ವಿವಾದ ದಿನ ಕಳೆದಂತೆ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ವಿರೋಧಿಸಿ ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ ನಾಲ್ವರನ್ನು ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಪ್ರಶ್ನೆ ಪ್ರತಿಕೆ ಸೋರಿಕೆಗೆ 30-32 ಲಕ್ಷ ರೂ. ಒಪ್ಪಂದ ನಡೆದಿರುವುದಾಗಿಯೂ ಪ್ರಕರಣದ ಮಾಸ್ಟರ್‌ ಅಮಿತ್‌ ಆನಂದ್‌ (Amit Anand) ಒಪ್ಪಿಕೊಂಡಿದ್ದಾನೆ.

1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಿರುವುದನ್ನು ವಿರೋಧಿಸಿ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಇತ್ತೀಚೆಗೆ ಗ್ರೇಸ್ ಅಂಕಗಳನ್ನು ರದ್ದುಗೊಳಿಸಿ ಅಂತಹ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಿಗದಿಪಡಿಸಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ಬಿಹಾರದಿಂದ ಬಂಧಿಸಲ್ಪಟ್ಟ ನಾಲ್ವರನ್ನು ಅನುರಾಗ್ ಯಾದವ್, ನಿತೀಶ್ ಕುಮಾರ್, ಅಮಿತ್ ಆನಂದ್ ಮತ್ತು ದಾನಾಪುರ ಮುನ್ಸಿಪಲ್ ಕೌನ್ಸಿಲ್‌ನ ಕಿರಿಯ ಎಂಜಿನಿಯರ್ ಸಿಕಂದರ್ ಯದವೇಂದು ಎಂದು ಗುರುತಿಸಲಾಗಿದೆ. ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆಯನ್ನು ಹಂಚಲಾಗಿದೆ ಎಂದು ಬಂಧಿತರು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಬಂಧಿತರ ಒಟ್ಟು ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಗೆ 30 ಲಕ್ಷ ರೂ. ಚಾರ್ಜ್‌

ಇದೀಗ ಬಂಧಿತರ ಪೈಕಿ ಅಮಿತ್ ಆನಂದ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಗೆ 30-32 ಲಕ್ಷ ರೂ. ಡೀಲ್‌ ನಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ʼʼನೀಟ್‌ ಪರೀಕ್ಷೆಯ ಹಿಂದಿನ ದಿನ ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಉತ್ತರವನ್ನು ಹಂಚಿಕೆ ಮಾಡಿ ಉತ್ತರವನ್ನು ಕಂಠಪಾಠ ಮಾಡಲು ಸೂಚಿಸಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಗೆ 30-32 ಲಕ್ಷ ರೂ. ಒಪ್ಪಂದ ನಡೆದಿತ್ತುʼʼ ಎಂದು ಬಾಯ್ಬಿಟ್ಟಿದ್ದಾನೆ.

ʼʼಬಿಹಾರದ ಪಾಟ್ನಾದ ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ಅಮಿತ್ ಆನಂದ್ ವಿರುದ್ಧ ಪ್ರಕರಣ ದಾಖಲಾಗಿದೆ. ವಿಚಾರಣೆಯ ಸಮಯದಲ್ಲಿ ಅವನು ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. ಅಮಿತ್ ಬಿಹಾರದ ಮುಂಗೇರ್ ಜಿಲ್ಲೆಯವನು. ಆತ ಪಾಟ್ನಾದ ಎಜಿ ಕಾಲೋನಿಯಲ್ಲಿ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ನಾನು ವೈಯಕ್ತಿಕ ಕೆಲಸಕ್ಕಾಗಿ ಒಮ್ಮೆ ದಾನಾಪುರ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಯ ಕಿರಿಯ ಎಂಜಿನಿಯರ್ ಸಿಕಂದರ್‌ನನ್ನು ಭೇಟಿಯಾಗಿದ್ದೆ. ಈ ವೇಳೆ ನಾನು ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಬಹುದು ಎಂದು ಹೇಳಿದ್ದೆ. ನಂತರ ಸಿಕಂದರ್ ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿರುವ 4-5 ಅಭ್ಯರ್ಥಿಗಳು ಇದ್ದಾರೆ ಎಂದು ಹೇಳಿ ಅವರಿಗೆ ಸಹಾಯ ಮಾಡುವಂತೆ ಸೂಚಿಸಿದ್ದ. ಆಗ 30-32 ಲಕ್ಷ ರೂ. ವ್ಯವಹಾರ ಕುದುರಿಸಲಾಯಿತು” ಎಂದು ಅಮಿತ್ ಆನಂದ್‌ ತಿಳಿಸಿದ್ದಾನೆ.

2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟವಾಗಿತ್ತು. ಇದೀಗ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಇದನ್ನೂ ಓದಿ: NEET UG Result 2024: ಏನಿದು ನೀಟ್‌ ವಿವಾದ? ಗ್ರೇಸ್‌ ಅಂಕ ಕೊಟ್ಟಿದ್ಯಾಕೆ? ಮರು ಪರೀಕ್ಷೆ ಮಾಡೋದ್ಯಾಕೆ?

Exit mobile version