ಬೆಂಗಳೂರು: ವೈದ್ಯ ಹಾಗೂ ದಂತ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (Neet Exam 2022) ಇಂದು ಮಧ್ಯಾಹ್ನ ನಡೆಯಲಿದೆ. ಇದಕ್ಕಾಗಿ ರಾಜ್ಯದ ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ಈ ಪರೀಕ್ಷೆಯನ್ನು ರಾಜ್ಯದ ೧,೧೯,೬೨೬ ವಿದ್ಯಾರ್ಥಿಗಳು ಬರೆಯಲಿದ್ದಾರೆ.
ದೇಶಾದ್ಯಂತ ಒಟ್ಟು ೧೮,೭೨,೩೭೧ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಎನ್‌ಟಿಎ ತಿಳಿಸಿದೆ. ಇದರಲ್ಲಿ ೧೦.೬೪ ಲಕ್ಷ ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ಈಗಾಗಲೇ ಪ್ರವೇಶ ಪತ್ರವನ್ನು ಆನ್‌ಲೈನ್‌ನಲ್ಲಿಯೇ ವಿತರಿಸಲಾಗಿದ್ದು, ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫.೨೦ರವರೆಗೆ ಈ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ದೇಶಾದ್ಯಂತ ಒಟ್ಟು 543 ನಗರಗಳಲ್ಲಿ ಮಾತ್ರವಲ್ಲದೆ, ವಿದೇಶದ 13 ನಗರಗಳಲ್ಲಿಯೂ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ 63 ವೈದ್ಯಕೀಯ ಕಾಲೇಜುಗಳ 7,411 ವೈದ್ಯಕೀಯ ಮತ್ತು 2,849 ದಂತ ವೈದ್ಯಕೀಯ ಸೇರಿ ಒಟ್ಟು 10,260 ಸೀಟುಗಳ ಪ್ರವೇಶಕ್ಕೆ ಈ ಪರೀಕ್ಷೆ ನಡೆಯುತ್ತಿದೆ.
ಪರೀಕ್ಷೆಗೆ ಸಂಬಂಧಿಸಿದಂತೆ ಎನ್‌ಟಿಎ ನೀಡಿದ ಸೂಚನೆಗಳು ಇಂತಿವೆ;
ಈ ಹಿಂದೆ ಪ್ರಕಟಿಸಿದಂತೆ ಪರೀಕ್ಷೆಯ ಅವಧಿಯನ್ನು ೨೦ ನಿಮಿಷ ಹೆಚ್ಚಿಸಲಾಗಿದ್ದು, ಪರೀಕ್ಷೆಯು ೫ ಗಂಟೆಗೆ ಬದಲಾಗಿ ೫.೨೦ಕ್ಕೆ ಮುಕ್ತಾಯವಾಗಲಿದೆ. ಮಧ್ಯಾಹ್ನ ಒಂದೂವರೆ ಗಂಟೆಯ ಒಳಗೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದ್ದು, ತಡವಾಗಿ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.
ಕನ್ನಡ ಮತ್ತು ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಅಥವಾ ಯಾವುದಾದರೂ ಗುರುತಿನ ಚೀಟಿ ಕೊಂಡೊಯ್ಯಬೇಕಿರುತ್ತದೆ. ಕೋವಿಡ್ -೧೯ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ|ICSE Result 2022 | ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಸಂಜೆ ಪ್ರಕಟ