Site icon Vistara News

NEET PG 2024: ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ; ಹೊಸ ದಿನಾಂಕ ಘೋಷಣೆ

NEET PG Exam

NEET PG 2024: NBEMS Releases Revised Schedule, Exam to Be Held on July 7

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (NEET PG 2024) ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿಯು (NBEMS) ಮುಂದೂಡಿಕೆ ಮಾಡಿದೆ. ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಮಾರ್ಚ್‌ 3ರಂದು ನಡೆಯಬೇಕಿದ್ದ ಪರೀಕ್ಷೆಯನ್ನು (NEET PG Exam) ಜುಲೈ 7ರಂದು ನಡೆಸಲು ಎನ್‌ಬಿಇಎಂಎಸ್‌ ತೀರ್ಮಾನಿಸಿದೆ. ಈ ಕುರಿತು ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, nbe.edu.in ಹಾಗೂ natboard.edu.in ವೆಬ್‌ಸೈಟ್‌ಗೆ ಭೇಟಿ ನೀಡಿ ವೇಳಾಪಟ್ಟಿಯನ್ನು ನೋಡಬಹುದಾಗಿದೆ.

“2024ರ ಮಾರ್ಚ್‌ 3ರಂದು ನಡೆಯಬೇಕಿದ್ದ ನೀಟ್‌ಅನ್ನು ಜುಲೈ 7ಕ್ಕೆ ಮುಂದೂಡಲಾಗಿದೆ” ಎಂದು ಎನ್‌ಬಿಇಎಂಎಸ್‌ ಪ್ರಕಟಣೆ ಹೊರಡಿಸಿದೆ. ಇನ್ನು, 2024ರ ನೀಟ್‌ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕಿದ್ದು, ಶೀಘ್ರದಲ್ಲಿಯೇ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತದೆ. ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಂದು ಪರೀಕ್ಷಾ ಮಂಡಳಿ ತಿಳಿಸಿದೆ. ಅಭ್ಯರ್ಥಿಗಳು natboard.edu.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೇ ನೀಟ್‌ ಮಾಹಿತಿ, ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ನೀಟ್‌ ಪಿಜಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವವರು ಇ-ಮೇಲ್‌ ಐಡಿ ಹಾಗೂ ಮೊಬೈಲ್‌ ನಂಬರ್‌ ನೀಡಬೇಕಾಗುತ್ತದೆ. ಅದರಲ್ಲೂ, ಯಾವುದೇ ಮಾಹಿತಿ, ಪ್ರಕಟಣೆಯನ್ನು ಮೇಲ್‌ ಮೂಲಕವೇ ಕಳುಹಿಸುವುದರಿಂದ ಇ-ಮೇಲ್‌ ಐಡಿ ನೀಡುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಮೊದಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ನಂತರ ಅಪ್ಲಿಕೇಶನ್‌ ಫಾರ್ಮ್‌ಅನ್ನು ಭರ್ತಿ ಮಾಡಬೇಕು. ಅಗತ್ಯ ಮಾಹಿತಿ ಒದಗಿಸುವ ಮೂಲಕ ಅಪ್ಲಿಕೇಶನ್‌ ಭರ್ತಿ ಮಾಡಬೇಕು. ಇದೆಲ್ಲ ಪ್ರಕ್ರಿಯೆ ಮುಗಿದ ನಂತರವೇ ಹಾಲ್‌ ಟಿಕೆಟ್‌ ಲಭ್ಯವಾಗಲಿದೆ.

ಇದನ್ನೂ ಓದಿ: ಕಾಶ್ಮೀರಿ ಕೂಲಿ ಕಾರ್ಮಿಕ ಉಮರ್‌ ಅಹ್ಮದ್ ನೀಟ್‌ ಪಾಸಾದ, ಕಣಿವೆ ಈಗ ಪ್ರತಿಭೆಗಳ ಬಣವೆ‌

ನೀಟ್‌ ಅಷ್ಟೇ ಅಲ್ಲ, ನ್ಯಾಷನಲ್‌ ಎಕ್ಸಿಟ್‌ ಟೆಸ್ಟ್‌ಅನ್ನು (National Exit Test) ಕೂಡ ಎನ್‌ಬಿಇಎಂಎಸ್‌ ಮುಂದೂಡಿಕೆ ಮಾಡಿದೆ. ಇದಕ್ಕೂ ಮೊದಲು 2023ರಲ್ಲಿ ನೆಕ್ಸ್ಟ್‌ ನಡೆಯಬೇಕಿತ್ತು. ಅದನ್ನು 2024ಕ್ಕೆ ಮುಂದೂಡಲಾಗಿತ್ತು. ಈಗ ಪರೀಕ್ಷೆಯನ್ನು 2025ಕ್ಕೆ ಮುಂದೂಡಲಾಗಿದೆ ಎಂದು ಎನ್‌ಬಿಇಎಂಎಸ್‌ ತಿಳಿಸಿದೆ. ಭಾರತದಲ್ಲಿ ಮೆಡಿಕಲ್‌ ಸ್ನಾತಕೋತ್ತರ ಪದವಿಗೆ 70 ಸಾವಿರಕ್ಕೂ ಅಧಿಕ ಸೀಟ್‌ಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version