ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಪಿಜಿ) ಫಲಿತಾಂಶ (NEET PG Results 2023) ಪ್ರಕಟವಾಗಿದ್ದು, ದೆಹಲಿಯ ಡಾ.ಆರುಷಿ ನರವಾನಿ ದೇಶಕ್ಕೇ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಒಟ್ಟು 800 ಅಂಕಗಳಿಗೆ ಆರುಷಿ ನರವಾನಿ 725 ಅಂಕಗಳನ್ನು ಪಡೆಯುವ ಮೂಲಕ ಅಖಿಲ ಭಾರತ ರ‍್ಯಾಂಕ್ (AIR 1) ಪಡೆದಿದ್ದಾರೆ. ಹಾಗೆಯೇ, ಡಾ.ಪ್ರೇಮ್ ತಿಲಕ್ 721 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಟಾಪ್ 10 ರ‍್ಯಾಂಕ್ ಪಟ್ಟಿ
2023-24 ಸಾಲಿನ ಎಂಡಿ, ಎಂಎಸ್, ಡಿಪ್ಲೊಮಾ ಸೇರಿ ಹಲವು ಕೋರ್ಸ್‌ಗಳ ಪ್ರವೇಶಾತಿಗಾಗಿ ಮಾರ್ಚ್ 5ರಂದು ನೀಟ್ ಪಿಜಿ ಪರೀಕ್ಷೆ ನಡೆದಿತ್ತು. ಸುಮಾರು 2.9 ಲಕ್ಷಕ್ಕೂ ಅಧಿಕ ಜನ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆಗೆ 2.08 ಲಕ್ಷ ಜನ ಹಾಜರಾಗಿದ್ದರು. ಜುಲೈ 15ರ ನಂತರ ಪಿಜಿ ಕೌನ್ಸೆಲಿಂಗ್ ನಡೆಯಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Medical education: ನೀಟ್ ಕೇಸ್‌ಗಳ ಸಂಖ್ಯೆ ಹೆಚ್ಚಳವು ವೈದ್ಯಕೀಯ ಶಿಕ್ಷಣ ಸುಧಾರಣೆ ಅಗತ್ಯ ಬಿಂಬಿಸಿದೆ: ಸಿಜೆಐ ಚಂದ್ರಚೂಡ್
ದೇಶಕ್ಕೇ ಮೊದಲ ರ‍್ಯಾಂಕ್ ಪಡೆದಿರುವ ಕುರಿತು ಆರುಷಿ ನರವಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಅಧ್ಯಯನದ ಹಿಂದಿನ ಶ್ರಮದ ಕುರಿತೂ ಮಾತನಾಡಿದ್ದಾರೆ. “ದೇಶಕ್ಕೇ ಮೊದಲ ರ‍್ಯಾಂಕ್ ಪಡೆದಿರುವುದು ಸಂತಸ ತಂದಿದೆ. ನಾನು ಮೂಲತಃ ಜೈಪುರದವಳು. ನೀಟ್-ಯುಜಿಯಲ್ಲಿ ದೇಶಕ್ಕೇ 9ನೇ ರ‍್ಯಾಂಕ್ ಪಡೆದಿದ್ದೆ. ಈ ಬಾರಿ ಹೆಚ್ಚಿನ ಶ್ರದ್ಧೆಯಿಂದ ಓದಿದೆ. ಒಂದೇ ಅಧ್ಯಯನದ ಮೂಲದ ಮೇಲೆ ಅವಲಂಬನೆಯಾಗಿದ್ದೆ. ವಾರದಲ್ಲಿ ಒಂದು ದಿನ ಬಿಡುವು ಮಾಡಿಕೊಳ್ಳುತ್ತಿದ್ದೆ. ಇದರಿಂದ ಒತ್ತಡವಿಲ್ಲದೆ ಓದಲು ಸಾಧ್ಯವಾಯಿತು” ಎಂದಿದ್ದಾರೆ.