ನವದೆಹಲಿ: ಈ ಬಾರಿಯ ಪದವಿಪೂರ್ವ ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ(NEET UG 2024)ಯಲ್ಲಿನ ಅಕ್ರಮ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಪರೀಕ್ಷೆ ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಮಂಗಳವಾರ ಮತ್ತೆ ಸುಪ್ರೀಂ ಕೋರ್ಟ್ (Supreme Court) ಎನ್‌ಟಿಎಯನ್ನು ತರಾಟೆಗೆ ತೆಗೆದುಕೊಂಡಿದೆ.
“ಯಾರ ಕಡೆಯಿಂದಾದರೂ ಶೇ. 0.001ರಷ್ಟು ನಿರ್ಲಕ್ಷ್ಯವಿದ್ದರೂ ಅದನ್ನು ಕೂಲಂಕಷವಾಗಿ ಪರಿಶೀಲಿಸಬೇಕು” ಎಂದು ಚಾಟಿ ಬೀಸಿರುವ ಸುಪ್ರೀಂ ಕೋರ್ಟ್ ಎನ್‌ಟಿಎಗೆ ನೋಟಿಸ್ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 8ರಂದು ನಡೆಯಲಿದೆ. ಈ ಹಿಂದೆಯೂ ಕೋರ್ಟ್ ಪರೀಕ್ಷೆಯಲ್ಲಿನ ಅಕ್ರಮದ ವಿಚಾರವಾಗಿ ಎನ್‌ಟಿಎ ಮತ್ತು ಕೇಂದ್ರಕ್ಕೆ ಛೀಮಾರಿ ಹಾಕಿತ್ತು.
Supreme Court issues notice and seeks response from National Testing Agency (NTA) and Centre on pleas relating to alleged paper leaks and malpractices in NEET-UG, 2024.
— ANI (@ANI) June 18, 2024
“If there is 0.001% negligence on the part of anyone it should be thoroughly dealt with,” observes Supreme… pic.twitter.com/k10xSVIVKM
ನೀಟ್ ಯುಜಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ (ಕೃಪಾಂಕ) ಪಡೆದಿರುವ 1,563 ಅಭ್ಯರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸುವುದಾಗಿ ಎನ್‌ಟಿಎ ಜೂನ್ 13ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ನೀಟ್-ಯುಜಿ ಪರೀಕ್ಷೆಗೆ ಹಾಜರಾಗುವಾಗ ಅನುಭವಿಸಿದ ಸಮಯ ನಷ್ಟವನ್ನು ಸರಿದೂಗಿಸಲು ‘ಗ್ರೇಸ್ ಅಂಕ’ ಪಡೆದ 1,563ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದೂ ಹೇಳಿದೆ. ಮರು ಪರೀಕ್ಷೆಗಳನ್ನು ಜೂನ್ 23ರಂದು ನಡೆಸಲಾಗುವುದು ಮತ್ತು ಜೂನ್ 30ರೊಳಗೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದಿರುವ ಎನ್‌ಟಿಎ ಮರುಪರೀಕ್ಷೆ ಬರೆಯಲು ಬಯಸದವರಿಗೆ ಗ್ರೇಸ್ ಮಾರ್ಕ್ ರಹಿತ ಅಂಕ ಹೊಂದುವ ಅವಕಾಶ ನೀಡಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದೆ.
2024ರ ಮೇ 5ರಂದು 14 ಅಂತಾರಾಷ್ಟ್ರೀಯ ಕೇಂದ್ರ ಸೇರಿದಂತೆ 571 ನಗರಗಳ 4,750 ಕಡೆಗಳಲ್ಲಿ ನಡೆದ ನೀಟ್ ಪರೀಕ್ಷೆಗೆ 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರೀ ಸುದ್ದಿಯಾಗಿ ವಿವಾದ ಭುಗಿಲೆದ್ದಿತ್ತು. ಅಲ್ಲದೆ 67 ಅಭ್ಯರ್ಥಿಗಳು 720ಕ್ಕೆ 720 ಅಂಕ ಪಡೆದಿರುವುದು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು. ಈ ಎಲ್ಲ ಕಾರಣಗಳಿಂದ ಹಲವು ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿ ಮರು ಪರೀಕ್ಷೆ ನಡೆಸಬೇಕೆಂದು ಮನವಿ ಸಲ್ಲಿಸಿದ್ದರು.
‘ಗ್ರೇಸ್ ಅಂಕ’ ಯಾಕೆ?
ಸಮಯ ನಷ್ಟವನ್ನು ಸರಿದೂಗಿಸಲು 1,563 ಅಭ್ಯರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗಿತ್ತು. ತಪ್ಪಾದ ಪ್ರಶ್ನೆ ಪತ್ರಿಕೆ, ಹರಿದ ಒಎಂಆರ್ ಶೀಟ್ ವಿತರಣೆ, ಒಎಂಆರ್ ಶೀಟ್ ವಿತರಣೆಯಲ್ಲಿ ವಿಳಂಬದಿಂದಾಗಿ ಪರೀಕ್ಷೆ ಬರೆಯಲಿರುವ ಸಮಯ ವ್ಯರ್ಥವಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಅವರಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ ಎಂದು ಎನ್‌ಟಿಎ ಕಾರಣ ನೀಡಿತ್ತು. ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ನೀಟ್ ಪರೀಕ್ಷೆಯನ್ನು ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಎನ್‌ಟಿಎ ನಡೆಸುತ್ತದೆ. ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 6ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ.