Site icon Vistara News

NEET UG 2024: ಕೊನೆಗೂ ನೀಟ್‌ ಫೈನಲ್ ಫಲಿತಾಂಶ ಪ್ರಕಟ; ಟಾಪರ್‌ಗಳ ಸಂಖ್ಯೆ 17ಕ್ಕೆ ಇಳಿಕೆ, ಇಲ್ಲಿದೆ ಪಟ್ಟಿ

NEET UG 2024

NEET UG 2024 Result: NTA announces final and re-revised scorecards for medical entrance exam; direct link here

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ಆದೇಶದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಶುಕ್ರವಾರ (ಜುಲೈ 26) ನೀಟ್‌ ಯುಜಿ 2024 (NEET UG 2024) ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಕೊನೆಗೂ ಪ್ರಕಟಿಸಿದೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ಮೇ 5ರಂದು ನಡೆದಿದ್ದ ನೀಟ್‌ ಯುಜಿ ಪರೀಕ್ಷೆಯ ಫಲಿತಾಂಶವು ಜೂನ್‌ 4ರಂದು ಪ್ರಕಟವಾಗಿತ್ತು. ಆದರೆ, ಇದಾದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಹಲವು ಆರೋಪ ಕೇಳಿಬಂದ ಕಾರಣ ಸುಪ್ರೀಂ ಕೋರ್ಟ್‌ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿತ್ತು. ಕೊನೆಗೆ ಮರು ಪರೀಕ್ಷೆ ಬೇಡ ಎಂದಿದ್ದ ನ್ಯಾಯಾಲಯವು, ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು. ಅದರಂತೆ, ಈಗ ಪರಿಷ್ಕೃತ ಫಲಿತಾಂಶ ಪ್ರಕಟವಾಗಿದೆ. ನೀಟ್‌ ಕೌನ್ಸೆಲಿಂಗ್‌ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ಪರಿಷ್ಕೃತ ಫಲಿತಾಂಶದ ಬಳಿಕ ದೇಶದ ಟಾಪರ್‌ಗಳ ಸಂಖ್ಯೆ 17ಕ್ಕೆ ಇಳಿಕೆಯಾಗಿದೆ. ಜೂನ್‌ 4ರಂದು ಪ್ರಕಟವಾದ ಫಲಿತಾಂಶದಲ್ಲಿ 67 ಮಂದಿ ಟಾಪ್‌ ಎನಿಸಿದ್ದರು. ಮೃದುಲ್‌ ಮಾನ್ಯ ಆನಂದ್‌, ಆಯುಷ್‌ ನೌಗ್ರೈಯಾ, ಮಜೀನ್‌ ಮಂಜೂರ್‌, ಪ್ರಚಿತಾ, ಸೌರವ್‌, ದಿವ್ಯಾಂಶ್‌, ಗನ್ಮಯ್‌ ಗಾರ್ಗ್‌, ಅರ್ಘ್ಯದೀಪ್‌ ದತ್ತ, ಶುಭಂ ಸೇನ್‌ಗುಪ್ತಾ, ಆರ್ಯನ್‌ ಯಾದವ್‌, ಪಾಲಾಂಶ ಅಗರ್ವಾಲ್‌, ರಜನೀಶ್‌ ಪಿ., ಶ್ರೀನಂದ್‌ ಶಮೀಲ್, ಮಾನೆ ನೇಹಾ ಕುಲದೀಪ್‌, ತೈಜಸ್‌ ಸಿಂಗ್‌ ಹಾಗೂ ದೇವೇಶ್‌ ಜೋಶಿ ಅವರು ಈ ಬಾರಿ ಟಾಪ್‌ ಬಂದಿದ್ದಾರೆ.

ನೀಟ್‌ ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Assembly session: ನೀಟ್ ಪರೀಕ್ಷೆ ರದ್ದು, ಒನ್ ನೇಷನ್-ಒನ್ ಎಲೆಕ್ಷನ್ ವಿರುದ್ಧ ನಿರ್ಣಯ; ಉಭಯ ಸದನಗಳಲ್ಲೂ ಅಂಗೀಕಾರ

Exit mobile version