Site icon Vistara News

NEET UG: ನೀಟ್‌ ಅಕ್ರಮ; ಎಫ್‌ಐಆರ್‌ ದಾಖಲಿಸಿದ ಸಿಬಿಐ, ತನಿಖೆ ಮತ್ತಷ್ಟು ಚುರುಕು

NEET UG

NEET UG: CBI files FIR over alleged irregularities; probe teams to go Bihar, Gujarat

ನವದೆಹಲಿ: ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ನೀಟ್ ಪರೀಕ್ಷೆಯಲ್ಲಿ (NEET UG) ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆಯ ಹೊಣೆಯನ್ನು ಕೇಂದ್ರ ಸರ್ಕಾರ (Central Government) ಸಿಬಿಐಗೆ (CBI Probe) ವಹಿಸಿದೆ. ಅದರಂತೆ ತನಿಖೆ ಆರಂಭಿಸಿರುವ ಸಿಬಿಐ, ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಂಡಿದೆ. ಹಾಗೆಯೇ, ಇನ್ನೂ ಹಲವು ರಾಜ್ಯಗಳಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ, ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತಂಡಗಳು ಬಿಹಾರ ಹಾಗೂ ಗುಜರಾತ್‌ಗೆ ತೆರಳಲಿವೆ ಎಂದು ಹೇಳಲಾಗುತ್ತಿದೆ.

ನೀಟ್‌ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹಾ ನಿರ್ದೇಶಕ ಸುಬೋಧ್‌ ಕುಮಾರ್‌ ಸಿಂಗ್‌ ಅವರನ್ನು ಕೇಂದ್ರ ಸರ್ಕಾರವು ಹುದ್ದೆಯಿಂದ ಕೆಳಗಿಳಿಸಿದೆ. ಅವರ ಜಾಗಕ್ಕೆ ಪ್ರದೀಪ್‌ ಸಿಂಗ್‌ ಖರೋಲಾ ಅವರನ್ನು ನೇಮಿಸಿದೆ. ಶನಿವಾರ (ಜೂನ್‌ 22) ಸಿಬಿಐ ತನಿಖೆಗೆ ವಹಿಸಿದ ಕೇಂದ್ರ ಸರ್ಕಾರವು, “ಕೆಲವು ಅಕ್ರಮಗಳು, ವಂಚನೆ ಮತ್ತು ದುಷ್ಕೃತ್ಯಗಳ ಪ್ರಕರಣಗಳು ವರದಿಯಾಗಿವೆ ಮತ್ತು ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ, ಶಿಕ್ಷಣ ಸಚಿವಾಲಯದ ಪರಿಶೀಲನೆಯ ನಂತರ ಈ ಬಗ್ಗೆ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿತ್ತು.

ಮೇ 5 ರಂದು ದೇಶದ 4,750 ಕೇಂದ್ರಗಳಲ್ಲಿ ನೀಟ್-ಯುಜಿ ನಡೆದಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ನಿರೀಕ್ಷಿತ ದಿನಾಂಕಕ್ಕಿಂತ ಹತ್ತು ದಿನ ಮುಂಚಿತವಾಗಿ ಜೂನ್ 4 ರಂದು ಫಲಿತಾಂಶಗಳನ್ನು ಘೋಷಿಸಲಾಗಿತ್ತು. ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ದುಷ್ಕೃತ್ಯಗಳ ಆರೋಪಗಳು ಕೇಳಿಬಂದವು, ಏಕೆಂದರೆ 67 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು (720ಕ್ಕೆ 720) ಗಳಿಸಿದ್ದರು. ಅವರಲ್ಲಿ ಕೆಲವರು ಒಂದೇ ಪರೀಕ್ಷಾ ಕೇಂದ್ರಗಳಿಂದ ಬಂದವರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಿಹಾರದಲ್ಲಿ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಕಂಡುಬಂದಿದೆ. ಕೆಲವು ಅಭ್ಯರ್ಥಿಗಳು ಪರೀಕ್ಷೆಯ ಮುನ್ನಾದಿನದಂದು ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿದ್ದರು.

ಈ ಆರೋಪಗಳು ಹಲವಾರು ನಗರಗಳಲ್ಲಿ ಪ್ರತಿಭಟನೆಗೆ ಕಾರಣವಾಗಿವೆ. ಕೋರ್ಟ್​ಗಳಲ್ಲಿ ಅರ್ಜಿಗಳನ್ನು ಸಲ್ಲಿಕೆಯಾಗಿವೆ. ಈ ವರ್ಷದ ಜೂನ್ 18 ರಂದು ನಡೆದ ಯುಜಿಸಿ ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆಯೂ ಸಿಬಿಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಸಿಬಿಐ ಜೂನ್ 20ರಂದು ಎಫ್ಐಆರ್ ದಾಖಲಾಗಿದೆ. ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯ ಬಗ್ಗೆ ಇತ್ತೀಚಿನ ಆರೋಪಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 23 ರಂದು ನಡೆಯಬೇಕಿದ್ದ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಮುಂದೂಡಿದೆ.

ಇದನ್ನೂ ಓದಿ: NEET-UG Retest: ಇಂದು ನೀಟ್‌ ಮರು ಪರೀಕ್ಷೆ; ಬಿಗಿ ಭದ್ರತೆಯ ಮಧ್ಯೆ 6 ನಗರಗಳಲ್ಲಿ ನಡೆಯಲಿದೆ ಟೆಸ್ಟ್‌

Exit mobile version