Site icon Vistara News

NEET-UG Retest: ಇಂದು ನೀಟ್‌ ಮರು ಪರೀಕ್ಷೆ; ಬಿಗಿ ಭದ್ರತೆಯ ಮಧ್ಯೆ 6 ನಗರಗಳಲ್ಲಿ ನಡೆಯಲಿದೆ ಟೆಸ್ಟ್‌

NEET-UG Retest

NEET-UG Retest

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET 2024)ಯಲ್ಲಿ ನಡೆದಿರುವ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆ ಹೊಣೆಯನ್ನು ಕೇಂದ್ರ ಸರ್ಕಾರ ಸಿಬಿಐ ಒಪ್ಪಿಸಿ ಶನಿವಾರ ಆದೇಶ ಹೊರಡಿಸಿದೆ. ಈ ಮಧ್ಯೆ ನೀಟ್ ಯುಜಿ ಪರೀಕ್ಷೆಯಲ್ಲಿ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಇಂದು (ಜೂನ್ 23) ಮರುಪರೀಕ್ಷೆ ನಡೆಯಲಿದೆ (NEET-UG Retest). ಇಂದು ಅಪರಾಹ್ನ 2 ಗಂಟೆಯಿಂದ ಸಂಜೆ 5:20ರ ತನಕ ಪರೀಕ್ಷೆ ನಡೆಯಲಿದೆ.

6 ನಗರಗಳಲ್ಲಿ ಮರು ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ವೇಳೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಹಾಜರಿದ್ದು ಮೇಲ್ವಿಚಾರಣೆಯನ್ನು ನಡೆಸಲಿದ್ದಾರೆ. 2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು.

ಗ್ರೇಸ್ ಅಂಕದ ವಿವಾದ ದೇಶಾದ್ಯಂತ ಹರಡುತ್ತಿದ್ದಂತೆ ಕೇಂದ್ರ ಸರ್ಕಾರ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. 1,563 ಅಭ್ಯರ್ಥಿಗಳಲ್ಲಿ ಯಾರಾದರೂ ಮರುಪರೀಕ್ಷೆಯಿಂದ ಹೊರಗುಳಿದಿದ್ದರೆ ಗ್ರೇಸ್ ಅಂಕಗಳಿಲ್ಲದ ಅವರ ಹಿಂದಿನ ಅಂಕಗಳನ್ನು ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ ಎಂದೂ ಕೇಂದ್ರ ಕೋರ್ಟ್‌ಗೆ ತಿಳಿಸಿತ್ತು. ಅದರಂತೆ ಇಂದು ಪರೀಕ್ಷೆ ನಡೆಸಿ ಜೂನ್‌ 30ರೊಳಗೆ ಫಲಿತಾಂಶ ಪ್ರಕಟಿಸಲಿದೆ.

ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ

ಈ ಮಧ್ಯೆ ಇಂದು ನಡೆಯಬೇಕಿದ್ದ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು (NEET PG) ಏಕಾಏಕಿ ಮುಂದೂಡಲಾಗಿದೆ. ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಈ ನಿರ್ಧಾರ ಪ್ರಕಟಿಸಿದೆ. ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದೂ ಹೇಳಿದೆ. ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಪರೀಕ್ಷಾ ಪ್ರಕ್ರಿಯೆಗಳ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮೌಲ್ಯಮಾಪನ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: NEET PG : ಪರೀಕ್ಷಾ ಅಕ್ರಮ; ನಾಳೆ ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ

ಕಾಂಗ್ರೆಸ್‌ನಿಂದ ವಾಗ್ದಾಳಿ

ನೀಟ್‌ ಪರೀಕ್ಷೆಗಳಲ್ಲಿನ ಅಕ್ರಮಗಳ ವಿಚಾರವಾಗಿ ಕಾಂಗ್ರೆಸ್‌ ಇದೀಗ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ರದ್ದು ಪಡಿಸಿರುವ ಕ್ರಮವನ್ನೂ ಪ್ರಶ್ನಿಸಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ. ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಆರಂಭದಲ್ಲಿ ಮಾರ್ಚ್ 3ರಂದು ನಿಗದಿಪಡಿಸಲಾಗಿತ್ತು. ನಂತರ ಅದನ್ನು ಜುಲೈ 7ರಂದು ನಡೆಸಲಾಗುವುದು ಎಂದು ಘೋಷಿಸಲಾಯಿತು. ಮತ್ತೆ ದಿನಾಂಕವನ್ನು ಜೂನ್ 23ಕ್ಕೆ ಪರಿಷ್ಕರಿಸಲಾಯಿತು. ಆದರೆ ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು, ಕೇಂದ್ರವು ಅದನ್ನು ಮತ್ತೆ ಮುಂದೂಡಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹಾರಿಹಾಯ್ದಿದೆ.

Exit mobile version