Site icon Vistara News

NEET-UG Row: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೊಸ ಕಾನೂನು; ತಪ್ಪಿತಸ್ಥರಿಗೆ ಶಿಕ್ಷೆ, ದಂಡ ಪ್ರಮಾಣ ಎಷ್ಟು ಗೊತ್ತಾ?

NEET-UG Row

NEET 2024

ಹೊಸದಿಲ್ಲಿ : ವೈದ್ಯಕೀಯ ಪ್ರವೇಶ ಪರೀಕ್ಷೆಯ (NEET-UG 2024) ನಡಾವಳಿಯ ಅಕ್ರಮಗಳ ಕುರಿತು ಎದ್ದಿರುವ ಕೋಲಾಹಲದ (NEET-UG Row) ನಡುವೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ವಿರುದ್ಧ ಜಾರಿಗೊಂಡಿರುವ ಕಠಿಣ ಕಾನೂನು ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯ್ದೆ 2024 ಫೆಬ್ರುವರಿಯಲ್ಲಿ ಸಂಸತ್‌ನಲ್ಲಿ ಜಾರಿಗೊಂಡಿತ್ತು. ಇದೀಗ ಅದರ ಅನುಷ್ಠಾನದ ಬಗ್ಗೆ ಕೇಂದ್ರ ಚಿಂತನೆ ನಡೆಸುತ್ತಿದೆ. ನಿನ್ನೆ ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌(Dharmendra Pradhan) ಕಾನೂನು ಸಚಿವಾಲಯ ಈ ಬಗ್ಗೆ ಕಾನೂನು ರೂಪಿಸಲಿದೆ ಎಂದು ಹೇಳಿದ್ದಾರೆ.

ಕಾಯ್ದೆ ಹೇಳೋದೇನು?

ಇನ್ನು ಈ ಕಾಯಿದೆ ಪ್ರಕಾರ, ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳು ಪೇಪರ್ ಸೋರಿಕೆ ಅಥವಾ ಉತ್ತರ ಪತ್ರಿಕೆಗಳನ್ನು ತಿದ್ದಿದ ಆರೋಪದಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ₹ 10 ಲಕ್ಷದವರೆಗಿನ ದಂಡದೊಂದಿಗೆ ಇದನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು. ಕಾಯಿದೆಯಡಿಯಲ್ಲಿರುವ ಎಲ್ಲಾ ಅಪರಾಧಗಳು ಜಾಮೀನು ರಹಿತವಾಗಿರುತ್ತದೆ

ಸಂಭವನೀಯ ಅಪರಾಧದ ಬಗ್ಗೆ ಮೊದಲೇ ತಿಳಿದಿದ್ದರೂ ಅದನ್ನು ವರದಿ ಮಾಡದ ಪರೀಕ್ಷಾ ಸೇವಾ ಪೂರೈಕೆದಾರರಿಗೆ ₹ 1 ಕೋಟಿ ವರೆಗೆ ದಂಡ ವಿಧಿಸಬಹುದು. ತನಿಖೆಯ ಸಮಯದಲ್ಲಿ, ಯಾವುದೇ ಹಿರಿಯ ಅಧಿಕಾರಿಗಳು ಅಪರಾಧವನ್ನು ಅನುಮತಿಸಿದ್ದಾರೆ ಅಥವಾ ತೊಡಗಿಸಿಕೊಂಡಿದ್ದಾರೆ ಎಂದು ದೃಢಪಟ್ಟರೆ, ಅವರು ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ, ಅದನ್ನು 10 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ಪರೀಕ್ಷಾ ಪ್ರಾಧಿಕಾರ ಅಥವಾ ಸೇವಾ ಪೂರೈಕೆದಾರರು ಸಂಘಟಿತ ಅಪರಾಧವನ್ನು ಎಸಗಿದರೆ, ಕನಿಷ್ಠ ಐದು ವರ್ಷದಿಂದ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವು ₹ 1 ಕೋಟಿ ದಂಡ ವಿಧಿಸಲಾಗುತ್ತದೆ. ಜುಲೈ 1 ರಿಂದ ಈ ಕಾನೂನುಗಳು ಜಾರಿಗೆ ಬರಲಿವೆ.

ಏನಿದು ಹಗರಣ?

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG Result 2024) ಅಕ್ರಮ ನಡೆದಿದೆ ಎಂದು ನೀಟ್ ಆಕಾಂಕ್ಷಿಗಳು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ (exam) ಗ್ರೇಸ್ ಅಂಕಗಳನ್ನು (grace marks) ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ (retest) ನಡೆಸಲು ಕೇಂದ್ರ ಸರ್ಕಾರ (central govt) ಗುರುವಾರ ಪ್ರಸ್ತಾವನೆ ಸಲ್ಲಿಸಿದೆ. ನೀಟ್ ಫಲಿತಾಂಶ ಘೋಷಣೆಯಾದ ಬಳಿಕ ಆಕಾಂಕ್ಷಿಗಳು ಮತ್ತು ಪೋಷಕರು ಕೆಲವು ಕೇಂದ್ರಗಳಲ್ಲಿ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ತನಿಖೆ ಮತ್ತು ಮರು ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.

ನೀಟ್- ಯುಜಿ ಅನ್ನು ಮೊದಲು ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಎಂದು ಕರೆಯಲಾಗುತ್ತಿತ್ತು. ಇದು ದೇಶದಾದ್ಯಂತ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಡೆಯುವ ಏಕೈಕ ಪ್ರವೇಶ ಪರೀಕ್ಷೆಯಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿದೆ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ (CBSE) ಇದನ್ನು ನಡೆಸುತ್ತಿತ್ತು.

ನೀಟ್ ಯುಜಿ ಫಲಿತಾಂಶಗಳ ಸುತ್ತ ವಿವಾದ

2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಸಾಧಿಸಲು ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣ ಎಂಬ ಆರೋಪಗಳೂ ಕೇಳಿ ಬಂದಿದೆ.

ನೀಟ್ ಯುಜಿ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳು ಒಟ್ಟು 720 ಅಂಕಗಳನ್ನು ಗಳಿಸಿದ್ದಾರೆ ಎಂಬುದು ಫಲಿತಾಂಶ ತೋರಿಸಿವೆ. ಇದು ಹಿಂದಿನ ವರ್ಷಗಳ ಫಲಿತಾಂಶಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಿದ್ದರೆ, 2022ರಲ್ಲಿ ಮೂವರು, 2021ರಲ್ಲಿ ಇಬ್ಬರು, 2020ರಲ್ಲಿ ಒಬ್ಬರು ಮಾತ್ರ ಪೂರ್ಣ ಅಂಕ ಗಳಿಸಿದ್ದರು. ಈ ಬಾರಿ ಹರ್ಯಾಣದ ಒಂದೇ ಕೇಂದ್ರದಲ್ಲಿ ಆರು ಮಂದಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇದು ಸಂಶಯಕ್ಕೆ ಆಸ್ಪದ ಮಾಡಿ ಕೊಟ್ಟಿದೆ.

ಇದನ್ನೂ ಓದಿ:Atal Setu: 17 ಸಾವಿರ ಕೋಟಿ ರೂ. ವೆಚ್ಚದ ಅಟಲ್‌ ಸೇತುಗೆ ಚಾಲನೆ ಸಿಕ್ಕ ಐದೇ ತಿಂಗಳಲ್ಲಿ ಬಿರುಕು; ಭಾರಿ ಭ್ರಷ್ಟಾಚಾರ?

Exit mobile version