ಹೊಸದಿಲ್ಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ನೀಟ್ ಪರೀಕ್ಷೆಯಲ್ಲಿ (NEET UG) ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ(Central Government) ತನ್ನ ನಿಲುವನ್ನು ಸುಪ್ರೀಂಕೋರ್ಟ್(Supreme Court)ಗೆ ತಿಳಿಸಿದ್ದು, ಈಗಾಗಲೇ ನಡೆದಿರುವ ಪರೀಕ್ಷೆಯನ್ನು ಅಮಾನ್ಯಗೊಳಿಸುವುದಾಗಲಿ ಅಥವಾ ಮರು ಪರೀಕ್ಷೆ ನಡೆಸುವ ಉದ್ದೇಶವಾಗಲೀ ಸರ್ಕಾರಕ್ಕಿಲ್ಲ ಎಂದು ಹೇಳಿದೆ. ಅದೂ ಅಲ್ಲದೇ ಬರೋಬ್ಬರಿ 24ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದ ಈ ಪರೀಕ್ಷೆಯಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಈ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ನೀಟ್ ಅಕ್ರಮದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆದಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ತನ್ನ ಅಫಿಡವಿಟ್ ಸಲ್ಲಿಸಿದೆ. 2024 ರ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಗಂಭೀರವಾಗಿ ಅಪಾಯಕ್ಕೆ ಕಾರಣವಾಗುತ್ತದೆ. ಈ ಪರೀಕ್ಷೆಗೆ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅವರಿಗೆ ಇದರಿಂದ ಅನ್ಯಾಯ ಆಗುತ್ತದೆ. ದೇಶವ್ಯಾಪಿ ಈ ಅಕ್ರಮ ನಡೆಯದೇ ಇರುವಾಗ ಪರೀಕ್ಷೆ ರದ್ದುಗೊಳಿಸುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET PG 2024) ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (National Board of Examinations) ಪ್ರಕಟಿಸಿದೆ. ಆಗಸ್ಟ್ 11ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಜೂನ್ 23ರಂದು ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಯುಜಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ ಸೇರಿದಂತೆ ವಿವಿಧ ವಿವಾದ ಭುಗಿಲೆದ್ದ ಹಿನ್ನಲೆಯಲ್ಲಿ ಜೂನ್ 22ರಂದು ಪರೀಕ್ಷೆ ಮುಂದೂಡಿ ಪ್ರಕಟಣೆ ಹೊರಡಿಸಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಹಲವು ದೂರುಗಳು ದಾಖಲಾಗಿದ್ದವು. ಸಾಮಾಜಿಕ ಮಾಧ್ಯಮಗಳ ಮೂಲಕ ಆಕಾಂಕ್ಷಿಗಳಿಗೆ ಹಣಕ್ಕಾಗಿ ಪ್ರಶ್ನೆ ಪತ್ರಿಕೆಯನ್ನು ನೀಡುವ ಆಮಿಷ ಒಡ್ಡಲಾಗಿದೆ ಎಂದು ದೂರಲಾಗಿತ್ತು. ಹೀಗಾಗಿ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು.
ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು. ಪರೀಕ್ಷಾ ಪ್ರಕ್ರಿಯೆಗಳ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮೌಲ್ಯಮಾಪನ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಸಮರ್ಥನೆ ನೀಡಿತ್ತು.
ಕೊನೇ ಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಉಂಟಾದ ಅನಾನುಕೂಲತೆಗೆ ಆರೋಗ್ಯ ಸಚಿವಾಲಯವು ವಿಷಾದಿಸುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷಾ ಪ್ರಕ್ರಿಯೆ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲ ಪ್ರಕಟಣೆ ಹೊರಡಿಸಿ ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುವುದಾಗಿ ಹೇಳಿತ್ತು.
ಡಾರ್ಕ್ನೆಟ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಯುಜಿಸಿ-ನೆಟ್ ರದ್ದುಗೊಳಿಸಿದ ನಂತರ ಮುಂದೂಡಲ್ಪಟ್ಟ ಎರಡನೇ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (UG) ಅಕ್ರಮಗಳು ನಡೆದಿವೆ ಎಂಬ ಆರೋಪದ ಬಗ್ಗೆಯೂ ವಿವಾದವಿದೆ. ಜೂನ್ 21ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 25ರಿಂದ ನಡೆಯಬೇಕಿದ್ದ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿತ್ತು.
ಇದನ್ನೂ ಓದಿ:Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ