ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನ ಆರ್ಟಿಕಲ್ 370 (Article 370) ಪ್ರತ್ಯೇಕತವಾದಕ್ಕೆ ನಾಂದಿ ಹಾಡಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರು ಸೋಮವಾರ ರಾಜ್ಯಸಭೆಯಲ್ಲಿ (Rajya Sabha) ಹೇಳಿದರು. ಆರ್ಟಿಕಲ್ 370 ರದ್ದು ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ಅವರಿಂದ ಈ ಪ್ರತಿಕ್ರಿಯೆ ಬಂದಿದೆ. ಹಾಗೆಯೇ, ಕಾಶ್ಮೀರದ ಎಲ್ಲ ಸಮಸ್ಯೆಗಳಿಗೆ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು (Jawaharlal Nehru) ಅವರೇ ಕಾರಣ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.
ಕಾಶ್ಮೀರಕ್ಕಿಂತ ಹೆಚ್ಚಿನ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇತರ ರಾಜ್ಯಗಳಿವೆ. ಹಾಗಾದರೆ ಜಮ್ಮು ಮತ್ತಾ ಕಾಶ್ಮೀರ ಮಾತ್ರವೇ ಏಕೆ ಭಯೋತ್ಪಾದನೆಯಿಂದ ಬಳಲುತ್ತಿದೆ? 370 ನೇ ವಿಧಿಯು ಪ್ರತ್ಯೇಕತಾವಾದಕ್ಕೆ ಕಾರಣವಾಯಿತು ಎಂದು ಅಮಿತ್ ಶಾ ಅವರು ಹೇಳಿದರು.
ಇಂದು ಕೂಡ ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ಆರ್ಟಿಕಲ್ 370 ಅನ್ನು ಸರಿಯಾದ ರೀತಿಯಲ್ಲಿ ರದ್ದು ಮಾಡಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಅವರು, ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಕಾಂಗ್ರೆಸ್ ವಿರುದ್ದ ಅಮಿತ್ ಶಾ ಅವರು ಹರಿಹಾಯ್ದರು.
ಪಾಕಿಸ್ತಾನ ಜತೆಗಿನ ಮೊದಲ ಯುದ್ಧದ ವೇಳೆ ಎರಡು ದಿನ ಕದನ ವಿರಾಮವನ್ನು ಮುಂದೂಡಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರವೇ ಇರುತ್ತಿರಲಿಲ್ಲ. ನಮ್ಮ ದೇಶ ಗೆಲ್ಲುತ್ತಿತ್ತು, ನೆಹರು ಅವರು ಎರಡು ದಿನ ಕಾಯ್ದಿದ್ದರೆ ಸಾಕಿತ್ತು ಪೂರ್ತಿ ಕಾಶ್ಮೀರ ನಮ್ಮದಾಗಿರುತ್ತಿತ್ತು ಎಂದು ಅಮಿತ್ ಶಾ ಹೇಳಿದರು.
ಕೆಲವರು ನೆಹರು ಇರದಿದ್ದರೆ ಕಾಶ್ಮೀರ ಇರುತ್ತಿರಲಿಲ್ಲ ಎಂದು ಹೇಳುತ್ತಾರೆ. ಇತಿಹಾಸವನ್ನು ಗೊತ್ತಿರುವವರಿಗೆ ನಾನು ಕೇಳಲು ಬಯಸುತ್ತೇನೆ, ಹೈದ್ರಾಬಾದ್ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿತ್ತು, ಅಲ್ಲಿಗೆ ನೆಹರು ಹೋದರೇ? ನೆಹರು ಅವರು ಲಕ್ಷದ್ವೀಪ, ಜುನಾಗಢ ಅಥವಾ ಜೋಧಪುರಕ್ಕೆ ಹೋದರೆ? ಅವರು ಕೇವಲ ಕಾಶ್ಮೀರಕ್ಕೆ ಹೋದರು ಮತ್ತು ಆ ಕೆಲಸವನ್ನು ಪೂರ್ತಿಯಾಗಿ ಮಾಡಲಿಲ್ಲ ಎಂದು ಅಮಿತ್ ಶಾ ಹೇಳಿದರು.
ಕಾಶ್ಮೀರಿಗಳು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಬಗ್ಗೆ ಮಾತನಾಡುವ ಜನರ ಮಾತನ್ನು ಕೇಳುವುದಿಲ್ಲ, ಅವರು ಈಗ ಪ್ರಜಾಪ್ರಭುತ್ವದ ಮಾತುಗಳನ್ನು ಕೇಳುತ್ತಾರೆ. 2014 ರ ಮೊದಲು, ಸಾವಿರಾರು ಜನರು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿದ್ದರು. ಈಗ ಯಾರಾದರೂ ಅಂತಹದನ್ನು ನೋಡುತ್ತಾರೆಯೇ? ಈಗ ಉಗ್ರರನ್ನು ಕೊಂದ ಸ್ಥಳದಲ್ಲೇ ಅವರ ಅಂತ್ಯ ಕ್ರಿಯೆ ನಡೆಯುತ್ತಿದೆ ಎಂದು ಅಮಿತ್ ಶಾ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Jammu and Kashmir: ನೆಹರು ತಪ್ಪಿನಿಂದ ಪಿಒಕೆ ಸೃಷ್ಟಿ; ಅದು ನಮ್ಮದೇ: ಸಂಸತ್‌ನಲ್ಲಿ ಅಮಿತ್ ಶಾ