Site icon Vistara News

Nehru Museum: ನಿರ್ಧರಿಸಿದ 48 ಗಂಟೆಯಲ್ಲೇ ನೆಹರು ಮ್ಯೂಸಿಯಂ ಬೋರ್ಡ್‌ ಬದಲು; ಮೊದಲ ಪ್ರಧಾನಿ ಹೆಸರು ಮಾಯ

Nehru Museum Renamed

Nehru Memorial Museum and Library Society renamed as Prime Ministers’ Museum and Library Society

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ನೆಹರು ಮೆಮೋರಿಯಲ್‌ ಮ್ಯೂಸಿಯಂ ಆ್ಯಂಡ್‌ ಲೈಬ್ರರಿಯ (NMML) ಹೆಸರು (Nehru Museum) ಬದಲಾಯಿಸಲು ತೆಗೆದುಕೊಂಡ ಕೇವಲ 48 ಗಂಟೆಯಲ್ಲಿಯೇ ನೆಹರು ಮ್ಯೂಸಿಯಂ ಹೆಸರು ಬದಲಾಗಿದೆ. ನೆಹರು ಮೆಮೋರಿಯಲ್‌ ಮ್ಯೂಸಿಯಂ ಆ್ಯಂಡ್‌ ಲೈಬ್ರರಿಯ ಬೋರ್ಡ್‌ಅನ್ನು ಪ್ರಧಾನಮಂತ್ರಿ ಮ್ಯೂಸಿಯಂ ಆ್ಯಂಡ್‌ ಸೊಸೈಟಿ ಎಂಬುದಾಗಿ ಬದಲಾಯಿಸಲಾಗಿದೆ.

ಎನ್‌ಎಂಎಂಎಲ್‌ ಸೊಸೈಟಿ ಸಭೆಯಲ್ಲಿ ನೆಹರು ಮೆಮೋರಿಯಲ್‌ ಮ್ಯೂಸಿಯಂ ಆ್ಯಂಡ್‌ ಲೈಬ್ರರಿ ಎಂಬ ಹೆಸರನ್ನು ಪ್ರಧಾನಮಂತ್ರಿ ಮ್ಯೂಸಿಯಂ ಆ್ಯಂಡ್‌ ಸೊಸೈಟಿ ಎಂಬುದಾಗಿ ಬದಲಿಸಲು ಜೂನ್‌ 15ರಂದು ತೀರ್ಮಾನಿಸಲಾಗಿತ್ತು. ಎನ್‌ಎಂಎಂಎಲ್‌ ಸೊಸೈಟಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾದರೆ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಉಪಾಧ್ಯಕ್ಷರಾಗಿದ್ದಾರೆ. ಕೇಂದ್ರ ಸಚಿವರಾದ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಅನುರಾಗ್‌ ಠಾಕೂರ್‌ ಸೇರಿ 29 ಜನ ಇದರ ಸದಸ್ಯರಾಗಿದ್ದಾರೆ. ಈ ಸಭೆಯಲ್ಲಿ ಹೆಸರು ಬದಲಾಯಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರ ಕುರಿತು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಹೆಸರು ಬದಲಾಯಿಸಿ, ಬೋರ್ಡ್‌ ಕೂಡ ಹೊಸದಾಗಿ ಅಳವಡಿಸಲಾಗಿದೆ.

ಹೊಸ ಹೆಸರು

ಕಾಂಗ್ರೆಸ್‌ ಕೆಂಡಾಮಂಡಲ

ನೆಹರು ಮ್ಯೂಸಿಯಂ ಹೆಸರು ಬದಲಾವಣೆ ಮಾಡಿರುವುದಕ್ಕೆ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ. “ಸಣ್ಣತನ ಹಾಗೂ ಸೇಡಿನ ಪ್ರತಿರೂಪವೇ ನರೇಂದ್ರ ಮೋದಿ. ಕಳೆದ 59 ವರ್ಷದಿಂದ ಎನ್‌ಎಂಎಂಎಲ್‌ ಜಾಗತಿಕ ಬೌದ್ಧಿಕ ಹೆಗ್ಗುರುತಾಗಿದೆ. ಪುಸ್ತಕ ಹಾಗೂ ದಾಖಲೆಗಳ ಖಜಾನೆಯಾಗಿದೆ. ನವ ಭಾರತ ನಿರ್ಮಾತೃವಾದ ಜವಾಹರ ಲಾಲ್‌ ನೆಹರು ಅವರ ಹೆಸರು, ಹೆಗ್ಗಳಿಕೆಗೆ ಧಕ್ಕೆ ತರಲು ಮೋದಿ ಅವರು ಎಲ್ಲವನ್ನೂ ಮಾಡುತ್ತಾರೆ. ಸ್ವಯಂಘೋಷಿತ ವಿಶ್ವಗುರು ಅಭದ್ರತೆಯಿಂದ ಹೀಗೆ ಮಾಡುತ್ತಿದ್ದಾರೆ” ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ. ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೇರಿ ಹಲವರು ಟೀಕಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ಕೂಡ ನೀಡಿದೆ.

ಇದನ್ನೂ ಓದಿ: Modi in Karnataka: ಸರ್‌. ಎಂ. ವಿಶ್ವೇಶ್ವರಯ್ಯ ಅವರ ಕುರಿತು ಹೊಸ ಮ್ಯೂಸಿಯಂ ನಿರ್ಮಾಣ: ಪ್ರಧಾನಿ ನರೇಂದ್ರ ಮೋದಿ ಭರವಸೆ

ಜವಾಹರ ಲಾಲ್‌ ನೆಹರು ಅವರ ಅಧಿಕೃತ ನಿವಾಸವಾದ ತೀನ್‌ ಮೂರ್ತಿ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಲಾದ ಪ್ರಧಾನಮಂತ್ರಿಗಳ ಮ್ಯೂಸಿಯಂಗೆ ಮೋದಿ ಅವರು ಚಾಲನೆ ನೀಡಿ ಒಂದು ವರ್ಷವಾದ ಬಳಿಕ ಈಗ ನೆಹರು ಮ್ಯೂಸಿಯಂ ಹೆಸರು ಬದಲಾಯಿಸಲಾಗಿದೆ. 2019ರಲ್ಲಿಯೇ ಸೊಸೈಟಿಯನ್ನು ಪುನರ್‌ರಚನೆ ಮಾಡಲಾಗಿತ್ತು. ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್‌ ರಮೇಶ್‌ ಸೇರಿ ಹಲವರನ್ನು ಸೊಸೈಟಿಯಿಂದ ತೆಗೆದುಹಾಕಲಾಗಿತ್ತು.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version