ನವ ದೆಹಲಿ: ಕಾಶ್ಮೀರದ ವಿಚಾರದಲ್ಲಿ ಕಳೆದ ಏಳು ದಶಕಗಳಿಂದಲೂ ಒಂದು ಐತಿಹಾಸಿಕ ಸುಳ್ಳನ್ನು ಹೆಣೆಯಲಾಗಿದೆ. ಕಾಶ್ಮೀರವು ಭಾರತಕ್ಕೆ ಸೇರ್ಪಡೆಯಾಗಲು ಒಪ್ಪದೆ ಅಡ್ಡಿಪಡಿಸಿದ್ದ ರಾಜ ಪ್ರಭುತ್ವದ ಸಂಸ್ಥಾನ ಎಂದೇ ಸುಳ್ಳು ಇತಿಹಾಸವನ್ನು ಪ್ರತಿಪಾದಿಸಲಾಗಿತ್ತು. ಆದರೆ ಅಂಥ ಸಮಸ್ಯೆಯನ್ನು ಸೃಷ್ಟಿಸಿದ್ದು ಈ ಹಿಂದೆ ಕಾಶ್ಮೀರದ ಮಹಾರಾಜನಾಗಿದ್ದ ಹರಿ ಸಿಂಗ್ ಅಲ್ಲ, ಬದಲಿಗೆ ನೆಹರೂ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಆರೋಪಿಸಿದ್ದಾರೆ.
ನೆಹರೂ ಅವರು ತಮ್ಮ ಕುಟುಂಬ, ಗೆಳೆತನ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ರಾಷ್ಟ್ರೀಯ ಹಿತಕ್ಕಿಂತಲೂ ಮೇಲಿಟ್ಟಿದ್ದರು. ಇದಕ್ಕಾಗಿ ಭಾರತ ಭಾರಿ ಬೆಲೆಯನ್ನು ತೆರಬೇಕಾಗಿ ಬಂದಿದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ 27ರ ಮಹತ್ವ: ಅಕ್ಟೋಬರ್ 27ಕ್ಕೆ ಐತಿಹಾಸಿಕ ಮಹತ್ವ ಇದೆ. ಮೊದಲನೆಯದಾಗಿ ಜಮ್ಮು ಕಾಶ್ಮೀರವು ಭಾರತಕ್ಕೆ ಸೇರ್ಪಡೆಯಾದ ದಿನದ 75ನೇ ವರ್ಷಾಚರಣೆಯಿದು. ಎರಡನೆಯದಾಗಿ ನೆಹರೂ ಅವರು ಅಕ್ಟೋಬರ್ 27ರ ಮೊದಲು ಮತ್ತು ನಂತರ ಎಸಗಿದ 5 ಮಹಾ ಪ್ರಮಾದಗಳ 75ನೇ ವರ್ಷಾಚರಣೆಯೂ ಇದಾಗಿದೆ. ಏಳು ದಶಕಗಳ ಕಾಲ ಭಾರತ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಯಿತು. ಕಿರಣ್ ರಿಜಿಜು ಅವುಗಳನ್ನು ಕೆಳಕಂಡಂತೆ ವಿವರಿಸಿದ್ದಾರೆ.
ಭಾರತ 1947ರಲ್ಲಿ ವಿಭಜನೆಯಾದಾಗ, ರಾಜ ಪ್ರಭುತ್ವ ಇದ್ದ ಸಂಸ್ಥಾನಗಳಿಗೆ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಿಕೊಳ್ಳಲು ಸ್ವಾತಂತ್ರ್ಯ ಇತ್ತು. ಆಗ ಒಟ್ಟು 560 ಸಂಸ್ಥಾನಗಳಿದ್ದವು. ಈ ಪೈಕಿ ಹೈದರಾಬಾದ್ ಮತ್ತು ಜುನಾಗಢ ಭಾರತದ ಜತೆ ಸೇರಿಕೊಳ್ಳಲು ನಿರಾಕರಿಸಿದ್ದವು. ಆದರೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಾಣ್ಮೆ, ಮನವೊಲಿಕೆ, ತಂತ್ರಗಾರಿಕೆ ಮತ್ತು ಇಚ್ಛಾಶಕ್ತಿಯ ಪರಿಣಾಮ ಇವೆರಡೂ ರಾಜ್ಯಗಳು ಭಾರತದ ಜತೆ ವಿಲೀನಕ್ಕೆ ಒಪ್ಪಿದವು. ಆದರೆ ಕಳೆದ ಏಳು ದಶಕಗಳಲ್ಲಿ ಚಾರಿತ್ರಿಕ ಸುಳ್ಳೊಂದನ್ನು ಬಿಂಬಿಸಲಾಗಿತ್ತು. ಕಾಶ್ಮೀರ ಕೂಡ ಭಾರತದ ಜತೆ ವಿಲೀನವಾಗಲು ನಿರಾಕರಿಸಿದ ರಾಜ ಸಂಸ್ಥಾನವಾಗಿತ್ತು ಎಂದೇ ಬಿಂಬಿಸಲಾಗಿತ್ತು. ವಾಸ್ತವವಾಗಿ ಆಗ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು 1947ರ ಜುಲೈನಲ್ಲಿಯೇ ಜಮ್ಮು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸುವ ಸಂಬಂಧ ಭಾರತೀಯ ನಾಯಕತ್ವವನ್ನು ಸಂಪರ್ಕಿಸಿದ್ದರು. ಜುಲೈ ಮಧ್ಯಭಾಗದಲ್ಲಿ ಅನೌಪಚಾರಿಕ ಸುತ್ತಿನ ಮಾತುಕತೆ ನಡೆದಿತ್ತು ಎಂಬುದನ್ನು ಸ್ವತಃ ನೆಹರೂ ಅವರೇ ಹೇಳಿಕೊಂಡಿದ್ದರು ಎಂದು ರಿಜಿಜು ವಿವರಿಸಿದ್ದಾರೆ. ಜತೆಗೆ ನೆಹರೂ ಎಸಗಿದ 5 ಪ್ರಮಾದಗಳನ್ನು ಪಟ್ಟಿ ಮಾಡಿದ್ದಾರೆ. ಅದು ಇಂತಿದೆ.
ಕಾಶ್ಮೀರದ ವಿರುದ್ಧ ನೆಹರೂ ಎಸಗಿದ ಮೊದಲ ಪ್ರಮಾದ
ಕಾಶ್ಮೀರ ವಿಶೇಷ ಪ್ರಕರಣ, ಅದರ ಇತ್ಯರ್ಥಕ್ಕೆ ಆತುರ ಸಲ್ಲದು ಎಂದು ನೆಹರೂ ಒತ್ತಿ ಹೇಳಿದ್ದರು. 1952ರ ಭಾಷಣದಲ್ಲಿ, ಮಹಾರಾಜ ಮತ್ತು ಆತನ ಸರ್ಕಾರ ಭಾರತದ ಜತೆ ವಿಲೀನಕ್ಕೆ ಒಪ್ಪಿದರೂ, ನಾವು ಅದಕ್ಕಿಂತಲೂ ಹೆಚ್ಚಿನ ಜನಪ್ರಿಯ ಅನುಮೋದನೆ ಪಡೆಯಲು ಬಯಸುತ್ತೇವೆ ಎಂದು ನೆಹರೂ ಹೇಳಿದ್ದರು. ವಾಸ್ತವವಾಗಿ ಜನಮತ ಗಣನೆಯ ಮೂಲಕ ಅನುಮೋದನೆ ಪಡೆಯಬೇಕಾದ ಅಗತ್ಯ ಕಾಯಿದೆಯ ಪ್ರಕಾರ ಇರದಿದ್ದರೂ, ನೆಹರೂ ಈ ರೀತಿ ವಾದಿಸಿದ್ದರು. ಬಳಿಕ ಕಾಶ್ಮೀರ ವಿವಾದ ಜ್ವಲಂತವಾಗಿ ಮುಂದುವರಿಯಿತು. ಸ್ವಾತಂತ್ರ್ಯ ಲಭಿಸಿದಾಗ ಭಾರತದ ಜತೆ ಸೇರಲು ಕಾಶ್ಮೀರ ಬಯಸಿದ್ದರೂ, ನಿರಾಕರಿಸಿದ್ದು ನೆಹರೂ. ಇದು ಕಾಶ್ಮೀರ ಕುರಿತ ಅವರ ಮೊದಲ ಪ್ರಮಾದ.
ಎರಡನೇ ಪ್ರಮಾದ: ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಇತರ ಅರಸರ ಸಂಸ್ಥಾನಗಳ ಮಾದರಿಯಲ್ಲಿ ಭಾರತದ ಜತೆಗೆ ವಿಲೀನಕ್ಕೆ ಸಹಿ ಹಾಕಿದ್ದರು. ಆದರೆ ಕಾಶ್ಮೀರದ ವಿಲೀನ ಕುರಿತ ಒಡಂಬಡಿಕೆಯನ್ನು ಮಾತ್ರ ತಾತ್ಕಾಲಿಕ ಎಂದು ಸ್ವತಃ ನೆಹರೂ ಘೋಷಿಸಿದ್ದರು! ಇದು ಎರಡನೇ ಪ್ರಮಾದ.
ಮೂರನೇ ಪ್ರಮಾದ: ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸಲು ಅಲ್ಲಿನ ಮಹಾರಾಜ ಹರಿ ಸಿಂಗ್ ಒಪ್ಪಿದ್ದರೂ, ವಿಶ್ವಸಂಸ್ಥೆಯನ್ನು ಸಂಪರ್ಕಿಸಿದ ನೆಹರೂ, ಕಾಶ್ಮೀರವನ್ನು ಭಾರತ ಮತ್ತು ಪಾಕಿಸ್ತಾನ ನಡುವಣ ವಿವಾದ ಎಂದು ಒಪ್ಪಿದರು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದಾಸ್ಪದವಾಗಿ ಉಳಿಯಿತು.
ನಾಲ್ಕನೇ ಪ್ರಮಾದ
ವಿಶ್ವಸಂಸ್ಥೆಯು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ನಡೆಸಲು ಉದ್ದೇಶಿಸಿದ್ದ ಜನಾಭಿಪ್ರಾಯ ಸಂಗ್ರಹವನ್ನು ಭಾರತ ತಡೆಯಿತು ಎಂಬ ಮಿಥ್ಯೆ ಸೃಷ್ಟಿಯಾಯಿತು. ವಾಸ್ತವವಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಮುನ್ನ ಪಾಕಿಸ್ತಾನವು ಕದನ ವಿರಾಮ ಮತ್ತು ಆಕ್ರಮಿತ ಪ್ರದೇಶದಿಂದ ಸೇನೆಯನ್ನು ಹಿಂತೆಗೆದುಕೊಳ್ಳಬೇಕಿತ್ತು. ಆದರೆ ಪಾಕಿಸ್ತಾನ ಮೊದಲ ಎರಡೂ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಜನಾಭಿಪ್ರಾಯ ಸಂಗ್ರಹ ಸಾಧ್ಯವಾಗಲಿಲ್ಲ, ಹೊರತಾಗಿ ಭಾರತದ ತಪ್ಪಿರಲಿಲ್ಲ. ಈ ಪ್ರಮಾದಕ್ಕೆ ಕಾರಣ ನೆಹರೂ, ವಿವಾದವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದುದಾಗಿತ್ತು.
ಐದನೇ ಪ್ರಮಾದ: ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡುವ ಮೂಲಕ ಐದನೇ ಪ್ರಮಾದವನ್ನು ನೆಹರೂ ಎಸಗಿದರು. ಇದರ ದುಷ್ಪರಿಣಾಮವನ್ನು ಭಾರತ ಅನುಭವಿಸಬೇಕಾಯಿತು ಎಂದು ಕಿರಣ್ ರಿಜಿಜು ವಿವರಿಸಿದ್ದಾರೆ.