Site icon Vistara News

Ram Mandir : ಸೋಮನಾಥ ಮಂದಿರ ಉದ್ಘಾಟನೆಗೆ ಹೋಗಲು ನಿರಾಕರಿಸಿದ್ದ ನೆಹರೂ, ಖುಷಿಯಿಂದ ಉದ್ಘಾಟಿಸಿದ್ದ ರಾಷ್ಟ್ರಪತಿ!

Somanath Temple

ಅಯೋಧ್ಯೆ ರಾಮ ಮಂದಿರ (Ram Mandir) ಉದ್ಘಾಟನೆಗೆ ಹೋಗದಿರಲು ಕಾಂಗ್ರೆಸ್‌ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಸೋನಿಯಾ ಗಾಂಧಿ (Sonia Gandhi), ರಾಹುಲ್‌ ಗಾಂಧಿ (Rahul Gandhi), ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಮತ್ತಿತರರು ಕೈಗೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮಂದಿರ ಉದ್ಘಾಟನೆಯನ್ನು ಕಾಂಗ್ರೆಸ್‌ ಬಹಿಷ್ಕರಿಸಿದ್ದು ಇದೇ ಮೊದಲಲ್ಲ. ಸ್ವತಂತ್ರ ಭಾರತದ ಆರಂಭದಲ್ಲಿ ಮರು ನಿರ್ಮಾಣಗೊಂಡ ಗುಜರಾತ್‌ನ ಸೋಮನಾಥ ಮಂದಿರದ ಉದ್ಘಾಟನೆಗೂ ಪ್ರಧಾನಿ ಜವಾಹರ ಲಾಲ್‌ ನೆಹರೂ ಹೋಗಿರಲಿಲ್ಲ! ಮಂದಿರ ಉದ್ಘಾಟನೆಗೆ ಹೋಗದಂತೆ ಆಗಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅವರ ಮೇಲೂ ನೆಹರೂ ಒತ್ತಡ ಹಾಕಿದ್ದರು. ಆದರೆ ರಾಜೇಂದ್ರ ಪ್ರಸಾದ್‌ ಅವರು ನೆಹರೂ ಮಾತು ಧಿಕ್ಕರಿಸಿ ಮಂದಿರವನ್ನು ಉದ್ಘಾಟಿಸಿದ್ದರು!

ಸೋಮನಾಥ ಮಂದಿರ 9ನೇ ಶತಮಾನದಿಂದ 17ನೇ ಶತಮಾನದವರೆಗೆ ಮುಸ್ಲಿಂ ಆಕ್ರಮಣಕಾರರ ನಿರಂತರ ದಾಳಿಗೆ ಸಿಲುಕಿ ಧ್ವಂಸವಾಗಿತ್ತು. ಆದರೆ 1947ರಲ್ಲಿ ಬ್ರಿಟಿಷರು ತೊಲಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಸೋಮನಾಥ ಮಂದಿರ ಮರು ನಿರ್ಮಿಸುವ ಆಸೆ ಚಿಗುರಿತು. ಸೋಮನಾಥ ಮಂದಿರ ಮರು ನಿರ್ಮಾಣದ ರೂವಾರಿ ದೇಶದ ಮೊದಲ ಉಪ ಪ್ರಧಾನಿಯಾಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌. ನೆಹರೂ ಸಂಪುಟದಲ್ಲಿ ಸಚಿವರಾಗಿದ್ದ ಖ್ಯಾತ ಇತಿಹಾಸಕಾರ ಡಾ ಕೆ ಎಂ ಮುನ್ಶಿ ಅವರ ಮಾರ್ಗದರ್ಶನವೂ ಇಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಮಹಾತ್ಮಾ ಗಾಂಧಿ ಅವರ ಆಶಯ ಮತ್ತು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್‌ ಅವರ ದಿಟ್ಟ ನಿರ್ಧಾರ ಈ ಮಹಾ ಕಾರ್ಯದ ಹಿಂದಿತ್ತು.

‘ಮಂದಿರವಲ್ಲೇ ಕಟ್ಟಿದೆವು’ ಕೃತಿಯ ಕುರಿತ ಸಂಕ್ಷಿಪ್ತ ವಿವರದ ವಿಡಿಯೊ ಇಲ್ಲಿದೆ

ಸರ್ದಾರ್‌ ಪಟೇಲ್‌ ಪ್ರಸ್ತಾಪಕ್ಕೆ ನೆಹರೂ ಆಕ್ಷೇಪ

ಸೋಮನಾಥ ಮಂದಿರವನ್ನು ಕೇಂದ್ರ ಸರಕಾರವೇ ಮುಂದೆ ನಿಂತು ನಿರ್ಮಿಸಬೇಕೆಂಬ ಅಂದಿನ ಉಪ ಪ್ರಧಾನಿ ಸರ್ದಾರ್‌ ವಲ್ಲಭಭಾಯಿ ಪಟೇಲರ ಪ್ರಸ್ತಾಪಕ್ಕೆ ನೆಹರೂ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸೋಮನಾಥ ಮಂದಿರವನ್ನು ಪಾಳು ಬಿದ್ದ ಸ್ಥಿತಿಯಲ್ಲೇ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಗೆ ಒಪ್ಪಿಸಿ, ಅದನ್ನೊಂದು ಐತಿಹಾಸಿಕ ಸ್ಮಾರಕವನ್ನಾಗಿಸಬೇಕು ಎಂಬ ಬೇಡಿಕೆ ಅವರದಾಗಿತ್ತು. ಪ್ರಧಾನಿ ನೆಹರೂ ಕೂಡ ಇದಕ್ಕೆ ದನಿಗೂಡಿಸಿದರು. ಆದರೆ ಪಟೇಲರು ಪಟ್ಟು ಬಿಡಲಿಲ್ಲ. ಭಾರತ ಸ್ವತಂತ್ರವಾದ ಬಳಿಕವೂ, ಮುಸ್ಲಿಮರಿಗೆ ಅವರದೇ ಬೇಡಿಕೆಯಂತೆ ಧರ್ಮದ ಆಧಾರದಲ್ಲಿ ಪಾಕಿಸ್ತಾನವನ್ನು ಒಡೆದು ಕೊಟ್ಟ ನಂತರವೂ, ಈ ದೇಶದ ಬಹುಸಂಖ್ಯಾತ ಹಿಂದೂಗಳಿಗೆ ತಮ್ಮ ಮಂದಿರ ಮರು ನಿರ್ಮಿಸುವ ಹಕ್ಕಿಲ್ಲ ಎಂದರೆ ಇದೆಂಥ ಸ್ವಾತಂತ್ರ್ಯ ಎಂದು ನೆಹರೂ ಸಂಪುಟ ಸಭೆಯಲ್ಲಿ ಪಟೇಲರು ಅಬ್ಬರಿಸಿದರು. ಪಟೇಲರ ಪ್ರತಿಪಾದನೆಗೆ ಸಚಿವ ಸಂಪುಟದ ಎಲ್ಲ ಸಚಿವರೂ ಒಪ್ಪಲೇಬೇಕಾಯಿತು. ಮಂದಿರ ಮರು ನಿರ್ಮಾಣಕ್ಕೆ ನೆಹರೂ ಸಂಪುಟ ಒಪ್ಪಿಗೆಯೇನೋ ನೀಡಿತು. ಆದರೆ ಪಟೇಲರ ನಿಧನದ ಬಳಿಕ ನೆಹರೂ ಮತ್ತೆ ಅಡ್ಡಗಾಲು ಹಾಕತೊಡಗಿದರು. ಕೇಂದ್ರ ಸರಕಾರ ಸೋಮನಾಥ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವುದು ದೇಶದ ಜಾತ್ಯತೀತ ತತ್ತ್ವಕ್ಕೆ ವಿರುದ್ಧ ಎಂದು ನೆಹರೂ ಗೊಣಗತೊಡಗಿದರು. ಆದರೆ ನೆಹರೂ ಸಂಪುಟದಲ್ಲಿ ಆಹಾರ ಮತ್ತು ಕೃಷಿ ಸಚಿವರಾಗಿದ್ದ ಕೆ ಎಂ ಮುನ್ಶಿ ಅವರು ಪಟ್ಟು ಹಿಡಿದರು.

ನೆಹರೂ ಮಾತು ಕೇಳದ ಸಚಿವ ಮುನ್ಶಿ

ಸಂಪುಟ ಸಭೆಯೊಂದರ ಬಳಿಕ ನೆಹರೂ ಅವರು ಮುನ್ಶಿಯವರನ್ನು ಕರೆದು ಹೇಳಿದರು: ನೋಡಿ, ನೀವು ಸೋಮನಾಥ ಮಂದಿರ ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವುದು ನನಗೆ ಸರಿ ಕಾಣುತ್ತಿಲ್ಲ. ಇದು ಕೇವಲ ಹಿಂದೂಗಳ ಭಾವನಾತ್ಮಕ ವಿಷಯ. ಇಷ್ಟಾದ ಮೇಲೂ ಮುನ್ಶಿ ಸುಮ್ಮನಾಗಲಿಲ್ಲ. ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. 1951ರ ಏಪ್ರಿಲ್ 24ರಂದು ನೆಹರೂಗೆ “”ನೆಹರೂಜಿ, ಸಂಪುಟ ಸಭೆಯಲ್ಲಿ ನೀವು ಸೋಮನಾಥ ಕುರಿತು ಪ್ರಸ್ತಾಪಿಸಿದ್ದೀರಿ. ಇದು ಕೇವಲ ಹಿಂದೂ ಭಾವನೆಗಳನ್ನು ಉದ್ದೀಪಿಸುವ ಪ್ರಯತ್ನ ಎಂದು ವ್ಯಾಖ್ಯಾನಿಸಿದ್ದೀರಿ. ಈ ಕಾರ್ಯ ಮಾಡುತ್ತಿರುವುದಕ್ಕೆ ನನಗೆ ಸಂತಸವಿದೆ. ಈ ವಿಚಾರದಲ್ಲಿ ನನ್ನ ಯೋಚನೆ ಮತ್ತು ಚಟುವಟಿಕೆಯಿಂದ ಹಿಂದೆ ಸರಿಯಲು ಬಯಸಲಾರೆ. ಸೋಮನಾಥ ಮಂದಿರವನ್ನು ಭಾರತ ಸರಕಾರವೇ ಮರು ನಿರ್ಮಿಸುತ್ತಿರುವ ಬಗ್ಗೆ ದೇಶವಾಸಿಗಳು ಸಂತಸಗೊಂಡಿದ್ದಾರೆ. ಸ್ವತಂತ್ರ ಭಾರತದಲ್ಲಿ ನಮ್ಮ ಸರಕಾರ ಮಾಡುತ್ತಿರುವ ಮತ್ತು ಮಾಡಲಿರುವ ಎಲ್ಲ ಕೆಲಸಗಳಿಗಿಂತ ಮಂದಿರ ನಿರ್ಮಾಣ ಕಾರ್ಯಕ್ಕೆ ಹೆಚ್ಚು ಜನ ಬೆಂಬಲವಿದೆ. ಘಾಸಿಗೊಂಡಿರುವ ಕೋಟ್ಯಂತರ ಹಿಂದೂಗಳಿಗೆ ಸಾಂತ್ವನ ಸಿಗದ ಹೊರತು ನಮಗೆ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲ…ʼʼ ಎಂದು ಸಚಿವ ಕೆ ಎಂ ಮುನ್ಶಿ ಪತ್ರ ಬರೆದರು.

ಇದನ್ನೂ ಓದಿ : Ram Mandir : ಮಂದಿರ ಉದ್ಘಾಟನೆಗೆ ಅನುಷ್ಠಾನ ಸ್ವೀಕರಿಸಿದ ಪ್ರಧಾನಿ ಮೋದಿ; ಏನಿದು ಕಠಿಣ ಅಧ್ಯಾತ್ಮ ಸಾಧನೆ?

ನೆಹರೂ ವಿರೋಧ ಲೆಕ್ಕಿಸದೆ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿ!

ಕೊನೆಗೂ ಸೋಮನಾಥ ಮಂದಿರ ಮರು ನಿರ್ಮಾಣವಾಯಿತು. ಇದರ ಉದ್ಘಾಟನೆ ನೆರವೇರಿಸಲು ಮುನ್ಶಿಯವರು ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರಪ್ರಸಾದ್ ಅವರನ್ನು ಆಮಂತ್ರಿಸಿದರು. ರಾಷ್ಟ್ರಪತಿಯೊಬ್ಬರು ಹಿಂದೂ ದೇವಾಲಯ ಉದ್ಘಾಟಿಸುವುದು ಜಾತ್ಯತೀತ ತತ್ತ್ವಕ್ಕೆ ವಿರುದ್ಧ ಎಂದು ನೆಹರೂ ಮತ್ತೆ ತಗಾದೆ ತೆಗೆದರು. ಆದರೆ ದೇವಾಲಯದ ಉದ್ಘಾಟಿಸಲು ಡಾ. ರಾಜೇಂದ್ರ ಪ್ರಸಾದ್ ಖುಷಿಯಿಂದ ಒಪ್ಪಿಕೊಂಡರು!
ದೇಗುಲ ಉದ್ಘಾಟಿಸುವುದರಲ್ಲಿ ತಪ್ಪೇನಿದೆ? ಮಸೀದಿ ಅಥವಾ ಚರ್ಚ್ ಉದ್ಘಾಟನೆಗೆ ಆಹ್ವಾನಿಸಿದರೂ ನಾನು ಹೋಗುವೆ. ಎಂದು ನೆಹರೂಗೆ ಉತ್ತರ ಕೊಟ್ಟರು. ನಮ್ಮ ದೇಶ ಧರ್ಮಾಧಾರಿತವೂ ಅಲ್ಲ, ಧರ್ಮದ ವಿರುದ್ಧವೂ ಅಲ್ಲ. ಇದು ನಮ್ಮ ಜಾತ್ಯತೀತ ತತ್ತ್ವದ ಮುಖ್ಯ ತಿರುಳು ಎಂದವರು ನೆಹರೂಗೆ ತಿಳಿ ಹೇಳಿದರು. ಅಂತೂ, 1951ರ ಮೇ 11ರಂದು ಸೋಮನಾಥ ಮಂದಿರ ವಿಧ್ಯುಕ್ತವಾಗಿ ಭಕ್ತರ ದರ್ಶನಕ್ಕೆ ತೆರೆದುಕೊಂಡಿತು. ಆಗ ಇಡೀ ದೇಶ ಸಂಭ್ರಮಿಸಿತು. ಆದರೆ ಪ್ರಧಾನಿ ನೆಹರೂ ಮಾತ್ರ ಸೋಮನಾಥ ಮಂದಿರದಿಂದ ದೂರವೇ ಉಳಿದರು!
ವಿಸ್ತಾರ ನ್ಯೂಸ್‌ (ಡಿಜಿಟಲ್‌) ಸಂಪಾದಕರಾದ ರಮೇಶ್‌ ಕುಮಾರ್‌ ನಾಯಕ್‌ ಅವರು ರಚಿಸಿರುವ “ಮಂದಿರವಲ್ಲೇ ಕಟ್ಟಿದೆವುʼʼ ಕೃತಿಯಲ್ಲಿ ಈ ಕುರಿತ ಮತ್ತಷ್ಟು ವಿವರ ಲಭ್ಯವಿದೆ.

Exit mobile version