ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಸೇರಿ ಗಾಂಧಿ ಕುಟುಂಬಸ್ಥರ ಹೆಸರಿದ್ದ ಸರ್ಕಾರದ ಕಚೇರಿ, ಸಂಸ್ಥೆಗಳನ್ನು ಮರುನಾಮಕರಣ ಮಾಡಿದ್ದಾರೆ. ಈಗ ದೆಹಲಿಯಲ್ಲಿರುವ ನೆಹರು ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿಯ (NMML) ಹೆಸರನ್ನು (Nehru Name Row) ಬದಲಾಯಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ಎನ್‌ಎಂಎಂಎಲ್ ಸೊಸೈಟಿ ಸಭೆಯಲ್ಲಿ ನೆಹರು ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿ ಎಂಬ ಹೆಸರನ್ನು ಪ್ರಧಾನಮಂತ್ರಿ ಮ್ಯೂಸಿಯಂ ಆ್ಯಂಡ್ ಸೊಸೈಟಿ ಎಂಬುದಾಗಿ ಕರೆಯಲು ತೀರ್ಮಾನಿಸಲಾಗಿದೆ. ಎನ್‌ಎಂಎಂಎಲ್ ಸೊಸೈಟಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉಪಾಧ್ಯಕ್ಷರಾಗಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಅನುರಾಗ್ ಠಾಕೂರ್ ಸೇರಿ 29 ಜನ ಇದರ ಸದಸ್ಯರಾಗಿದ್ದಾರೆ. ಈ ಸಭೆಯಲ್ಲಿ ಹೆಸರು ಬದಲಾಯಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕಾಂಗ್ರೆಸ್ ಕೆಂಡಾಮಂಡಲ
ನೆಹರು ಮ್ಯೂಸಿಯಂ ಹೆಸರು ಬದಲಾವಣೆ ಮಾಡಿರುವುದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. “ಸಣ್ಣತನ ಹಾಗೂ ಸೇಡಿನ ಪ್ರತಿರೂಪವೇ ನರೇಂದ್ರ ಮೋದಿ. ಕಳೆದ 59 ವರ್ಷದಿಂದ ಎನ್‌ಎಂಎಂಎಲ್ ಜಾಗತಿಕ ಬೌದ್ಧಿಕ ಹೆಗ್ಗುರುತಾಗಿದೆ. ಪುಸ್ತಕ ಹಾಗೂ ದಾಖಲೆಗಳ ಖಜಾನೆಯಾಗಿದೆ. ನವ ಭಾರತ ನಿರ್ಮಾತೃವಾದ ಜವಾಹರ ಲಾಲ್ ನೆಹರು ಅವರ ಹೆಸರು, ಹೆಗ್ಗಳಿಕೆಗೆ ಧಕ್ಕೆ ತರಲು ಮೋದಿ ಅವರು ಎಲ್ಲವನ್ನೂ ಮಾಡುತ್ತಾರೆ. ಸ್ವಯಂಘೋಷಿತ ವಿಶ್ವಗುರು ಅಭದ್ರತೆಯಿಂದ ಹೀಗೆ ಮಾಡುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಜೈರಾಮ್ ರಮೇಶ್ ಟ್ವೀಟ್
Pettiness & Vengeance, thy name is Modi. For over 59 years Nehru Memorial Museum & Library (NMML) has been a global intellectual lamdmark and treasure house of books & archives. It will henceforth be called Prime Ministers Museum & Society. What won't Mr. Modi do to distort,…
— Jairam Ramesh (@Jairam_Ramesh) June 16, 2023
ಇದನ್ನೂ ಓದಿ: PM Modi Speech In Rajya Sabha: ನೆಹರು, ಇಂದಿರಾ, ಖರ್ಗೆ, ಅಭಿವೃದ್ಧಿ; ಮೇಲ್ಮನೆಯಲ್ಲಿ ಮೋದಿ ಮಾತಿನ ಚಾಟಿ
ಜವಾಹರ ಲಾಲ್ ನೆಹರು ಅವರ ಅಧಿಕೃತ ನಿವಾಸವಾದ ತೀನ್ ಮೂರ್ತಿ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಲಾದ ಪ್ರಧಾನಮಂತ್ರಿಗಳ ಮ್ಯೂಸಿಯಂಗೆ ಮೋದಿ ಅವರು ಚಾಲನೆ ನೀಡಿ ಒಂದು ವರ್ಷವಾದ ಬಳಿಕ ಈಗ ನೆಹರು ಮ್ಯೂಸಿಯಂ ಹೆಸರು ಬದಲಾಯಿಸಲಾಗಿದೆ. 2019ರಲ್ಲಿಯೇ ಸೊಸೈಟಿಯನ್ನು ಪುನರ್‌ರಚನೆ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಸೇರಿ ಹಲವರನ್ನು ಸೊಸೈಟಿಯಿಂದ ತೆಗೆದುಹಾಕಲಾಗಿತ್ತು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ