Site icon Vistara News

Narendra Modi: ‘ಅವರು ಕೆಲಸ ಮಾಡಲ್ಲ, ಮಾಡಲು ಕೂಡ ಬಿಡಲ್ಲ’; ಪ್ರತಿಪಕ್ಷಗಳಿಗೆ ಕುಟುಕಿದ ಮೋದಿ

PM Modi expressed shock at the loss of lives in an attack on a Gaza hospital

ನವದೆಹಲಿ: ಇಂಡಿಯಾ ಎಂಬ ಹೆಸರಿನ ಒಕ್ಕೂಟ ರಚಿಸಿ, 2024ರ ಲೋಕಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿರುವ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತೆ ಕುಟುಕಿದ್ದಾರೆ. “ದೇಶದಲ್ಲಿರುವ ಪ್ರತಿಪಕ್ಷಗಳು ಕೆಲಸ ಮಾಡುವುದಿಲ್ಲ, ಬೇರೆಯವರು ಕೂಡ ಕೆಲಸ ಮಾಡಲು ಬಿಡುವುದಿಲ್ಲ” ಎಂದು ಮೋದಿ ಹರಿಹಾಯ್ದಿದ್ದಾರೆ.

ಅಮೃತ ಭಾರತ ಸ್ಟೇಷನ್‌ ಯೋಜನೆ (Amrit Bharat Station) ಅಡಿಯಲ್ಲಿ ಕರ್ನಾಟಕದ 13 ರೈಲು ನಿಲ್ದಾಣಗಳು ಸೇರಿ ದೇಶದ 508 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಚಾಲನೆ ನೀಡಿ ಮೋದಿ ಮಾತನಾಡಿದರು. “ದೇಶದ ಹೆಮ್ಮೆಯಾದ ನೂತನ ಸಂಸತ್‌ ಭವನ ನಿರ್ಮಿಸಿದೆವು. ಆದರೆ, ಪ್ರತಿಪಕ್ಷಗಳು ಅದಕ್ಕೂ ವಿರೋಧಿಸಿದವು. ಕರ್ತವ್ಯ ಪಥವನ್ನು ಮತ್ತೆ ಅಭಿವೃದ್ಧಿಗೊಳಿಸಿದೆವು. ದೇಶದ ಯೋಧರಿಗೆ ನಮನ ಸಲ್ಲಿಸಿಲು ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಿದೆವು. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಮೂರ್ತಿ ನಿರ್ಮಿಸಿದ್ದು ಪ್ರತಿಯೊಬ್ಬ ಭಾರತೀಯರೂ ಖುಷಿಪಡುವ ಸಂಗತಿ. ಆದರೆ, ಇಂತಹ ವಿಷಯಗಳಲ್ಲೂ ಪ್ರತಿಪಕ್ಷಗಳು ರಾಜಕೀಯ ಮಾಡಿದವು” ಎಂದು ಹೇಳಿದರು.

ಕ್ವಿಟ್‌ ಇಂಡಿಯಾ ಚಳವಳಿ ಸ್ಫೂರ್ತಿ

“ನಕಾರಾತ್ಮಕ ರಾಜಕಾರಣದಿಂದ ನಾವು ಸಕಾರಾತ್ಮಕ ರಾಜಕೀಯಕ್ಕೆ ಆದ್ಯತೆ ನೀಡಿದ್ದೇವೆ. ದೇಶದ ಪ್ರಗತಿಗೆ ಶ್ರಮಿಸುತ್ತಿದ್ದೇವೆ. ಇದರಿಂದಾಗಿಯೇ, ದೇಶದ ಪ್ರತಿಯೊಬ್ಬರೂ ಕ್ವಿಟ್‌ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳವಳಿಯಿಂದ ಸ್ಫೂರ್ತಿಗೊಂಡಿದ್ದಾರೆ. ಹಾಗಾಗಿಯೇ, ದೇಶದಿಂದ ಭ್ರಷ್ಟಾಚಾರವನ್ನು, ಕುಟುಂಬ ರಾಜಕಾರಣವನ್ನು, ಓಲೈಕೆ ರಾಜಕಾರಣವನ್ನು ತೊಲಗಿಸಲು ಜನ ಶಪಥ ಮಾಡಿದ್ದಾರೆ” ಎಂದು ಜನರ ಬೆಂಬಲ ತಮ್ಮ ಸರ್ಕಾರದ ಪರ ಇದೆ ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ: Narendra Modi: ಪ್ರತಿಪಕ್ಷಗಳ ಒಕ್ಕೂಟಕ್ಕೆ ‘ಘಮಂಡಿಯಾ’ ಎಂದ ಮೋದಿ; ಪದದ ಅರ್ಥದಲ್ಲಿದೆ ಚಾಟಿ

ದೇಶದ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 508 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸಲಾಗುತ್ತಿದೆ. ಕರ್ನಾಟಕದ 13, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ತಲಾ 55, ಬಿಹಾರ 49, ಮಹಾರಾಷ್ಟ್ರ 44, ಪಶ್ಚಿಮ ಬಂಗಾಳ 37, ಮಧ್ಯಪ್ರದೇಶ 34, ಅಸ್ಸಾಂ 32, ಒಡಿಶಾ 25, ಪಂಜಾಬ್‌ 22, ಗುಜರಾತ್‌ ಹಾಗೂ ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್ 20, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ತಲಾ 18 ಹಾಗೂ ಹರಿಯಾಣದಲ್ಲಿ 15 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

Exit mobile version