Site icon Vistara News

Air India: ವಿಮಾನದಲ್ಲಿ ಸಿಬ್ಬಂದಿಗೆ ಬೈದು ಟಾಯ್ಲೆಟ್‌ ಬಾಗಿಲು ಮುರಿದ ವ್ಯಕ್ತಿ; ಸಿಗರೇಟ್‌ ಚಟಕ್ಕಾಗಿ ಅವಾಂತರ

Air India Flight

Nepal national abuses Air India cabin crew onboard, breaks lavatory door

ನವದೆಹಲಿ: ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರ ಅವಾಂತರಗಳು, ಗಲಾಟೆ, ಗದ್ದಲಗಳು ಮುಂದುವರಿದಿವೆ. ಕೆನಡಾದ ಟೊರೊಂಟೊದಿಂದ ದೆಹಲಿಗೆ ಹೊರಟ್ಟಿದ್ದ ಏರ್‌ ಇಂಡಿಯಾ (Air India) ವಿಮಾನದಲ್ಲಿ ನೇಪಾಳದ ಪ್ರಜೆಯೊಬ್ಬ ಸಿಬ್ಬಂದಿಗೆ ಬೈಯುವ ಜತೆಗೆ ಟಾಯ್ಲೆಟ್‌ (Lavatory) ಬಾಗಿಲು ಮುರಿದುಹಾಕಿದ್ದಾನೆ. ವಿಮಾನದಲ್ಲಿ ಇಂತಹ ದುರ್ವರ್ತನೆ ತೋರಿದವನ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳವಾರ (ಜುಲೈ 11) ಟೊರೊಂಟೊದಿಂದ ವಿಮಾನವು ದೆಹಲಿಗೆ ತೆರಳುತ್ತಿತ್ತು. ಇದೇ ವೇಳೆ, ಮಹೇಶ್‌ ಪಂಡಿತ್‌ ಎಂಬ ನೇಪಾಳದ ವ್ಯಕ್ತಿಯು ಟಾಯ್ಲೆಟ್‌ಗೆ ತೆರಳಿ ಸಿಗರೇಟ್‌ ಸೇದಲು ಮುಂದಾಗಿದ್ದಾನೆ. ಆತ ಲೈಟರ್‌ ಹೊತ್ತಿಸಿದಾಗ ಅಲರ್ಟ್‌ ರವಾನೆಯಾಗಿದೆ. ಆಗ ವಿಮಾನದ ಸಿಬ್ಬಂದಿಯು ಟಾಯ್ಲೆಟ್‌ ಬಾಗಿಲು ಬಡಿದಿದ್ದಾರೆ. ಇದರಿಂದ ಕೆರಳಿದ ಆತನು ಸಿಬ್ಬಂದಿಗೆ ಬೈದಿದ್ದಾನೆ. ಹಾಗೆಯೇ, ಶೌಚಾಲಯದ ಬಾಗಿಲು ಮುರಿದಿದ್ದಾನೆ.

“ವ್ಯಕ್ತಿಯು ಪದೇಪದೆ ಎದ್ದು ತಿರುಗಾಡುತ್ತಿದ್ದ ಕಾರಣ ಎಚ್ಚರಿಕೆ ನೀಡಲಾಗಿತ್ತು. ಅವರ ಬಳಿ ಲೈಟರ್‌ ಇರುವುದು ಕಂಡುಬಂತು. ಟಾಯ್ಲೆಟ್‌ ಬಾಗಿಲು ಬಡಿದಾಗ ಅವರು ನನ್ನನ್ನು ಥಳಿಸಿದರು. ವಿಮಾನದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕೂಡಲೇ ಇದನ್ನು ಪೈಲಟ್‌ ಗಮನಕ್ಕೆ ತರಲಾಯಿತು. ನಾಲ್ವರು ಸಿಬ್ಬಂದಿ ಸೇರಿ ಅವರನ್ನು ಸೀಟಿನ ಮೇಲೆ ಕೂರಿಸಲಾಯಿತು” ಎಂದು ಕ್ಯಾಬಿನ್‌ ಸೂಪರ್‌ವೈಸರ್‌ ಆದಿತ್ಯ ಕುಮಾರ್‌ ತಿಳಿಸಿದ್ದಾರೆ. ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಇವರೇ ದೂರು ನೀಡಿದ್ದಾರೆ.

ಇದನ್ನೂ ಓದಿ: Air India: ಏರ್‌ ಇಂಡಿಯಾ ವಿಮಾನಕ್ಕೆ ಪೈಲಟ್‌ಗಳೇ ಇಲ್ಲ, ಏರ್‌ಪೋರ್ಟ್‌ನಲ್ಲಿ 182 ಜನರ ಪರದಾಟ

ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕೆಲ ತಿಂಗಳ ಹಿಂದಷ್ಟೇ, ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು. ಇನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿ ಮಾಡಿತ್ತು.

Exit mobile version