Site icon Vistara News

Swatantrya Veer Savarkar: ಸಾವರ್ಕರ್‌ರನ್ನು ವಿರೋಧಿಸಿದ್ದರು ನೇತಾಜಿ, ತಪ್ಪು ಇತಿಹಾಸ ಬೇಡ; ನಟ ಹೂಡಾರನ್ನು ಬೆಂಡೆತ್ತಿದ ನೇತಾಜಿ ಫ್ಯಾಮಿಲಿ

Savarkar and Netaji

ನವದೆಹಲಿ:ಸ್ವಾತಂತ್ರ್ಯ ವೀರ್ ಸಾವರ್ಕರ್’ (Swatantrya Veer Savarkar) ಚಿತ್ರದ ನಟ ರಣದೀಪ್ ಹೂಡಾ (Randeep Hooda) ಅವರು, ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೂ ಸಾವರ್ಕರ್ ಪ್ರೇರಣೆಯಾಗಿದ್ದರು ಎಂದು ಟ್ವೀಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ರಣದೀಪ್ ಹೂಡಾ ಅವರು ತಮ್ಮ ಸಿನಿಮಾದ ಪ್ರಚಾರದ ಗಿಮಿಕ್‌ಗಾಗಿ ಟ್ವೀಟ್ ಮಾಡಿದ್ದಾರೆ. ವಾಸ್ತವದಲ್ಲಿ ಸುಭಾಶಚಂದ್ರ ಬೋಸ್ (Netaji Subhas Chandra Bose) ಅವರು ಸಾವರ್ಕರ್ ಅವರನ್ನು ವಿರೋಧಿಸಿದ್ದರು. ಅವರೊಬ್ಬ ಜಾತ್ಯತೀತ ನಾಯಕರಾಗಿದ್ದರು ಎಂದು ಬೋಸ್ ಅವರ ಮರಿ ಮೊಮ್ಮಗ ಅವರು ಹೇಳಿದ್ದಾರೆ.

Swatantrya Veer Savarkar: ರಣದೀಪ್ ಹೂಡಾ ಏನೆಂದು ಟ್ವೀಟ್ ಮಾಡಿದ್ದರು?

ಸಾವರ್ಕರ್ ಜಯಂತಿಯ ಹಿನ್ನೆಲೆಯಲ್ಲಿ ರಣದೀಪ್ ಹೂಡಾ ಅವರು, ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದರು. ಈ ವೇಳೆ ಟ್ವೀಟ್ ಮಾಡಿದ್ದ ಹೂಡಾ ಅವರು, ಬ್ರಿಟಿಷರ್‌ರಿಂದ ಮೋಸ್ಟ್ ವಾಂಟೆಡ್ ಆಗಿದ್ದ ಸಾವರ್ಕರ್ ಅವರು ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತು ಖುದಿರಾಮ್ ಬೋಸ್ ಅವರಂಥ ಕ್ರಾಂತಿಕಾರಿಗಳ ಹಿಂದಿರುವ ಪ್ರೇರಣೆಯಾಗಿದ್ದರು. ವೀರ್ ಸಾವರ್ಕರ್ ಯಾರು? ಸತ್ಯ ಕಥೆಯ ಅನಾವರಣಗೊಳ್ಳಲಿದೆ. ರಣದೀಪ್ ಹೂಡಾ ಅವರು ಈ ಸಿನಿಮಾದಲ್ಲಿ ಸ್ವಾತಂತ್ರ್ಯವೀರ್ ಸಾವರ್ಕರ್ ಆಗಿ ನಟಿಸಿದ್ದಾರೆ. ಸಿನಿಮಾ 2023ರಲ್ಲಿ ತೆರೆ ಕಾಣಲಿದೆ ಎಂದು ಹೇಳಿದ್ದರು.

ಸಾವರ್ಕರ್‌ ಮತ್ತು ನೇತಾಜಿ ವಿಚಾರಧಾರೆ ತದ್ವಿರುದ್ಧವಾಗಿದ್ದವು

ರಣದೀಪ್ ಹೂಡಾ ಅವರ ಟ್ವೀಟ್‌ಗೆ ಉಗ್ರವಾಗಿ ಪ್ರತಿಕ್ರಿಯಿಸಿರುವ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು, ಸುಭಾಶ್ ಚಂದ್ರ ಬೋಸ್ ಅವರ ಸಾವರ್ಕರ್ ಹಾಗೂ ಮಹ್ಮಮದ್ ಜಿನ್ನಾ ಅವರು ವಿರೋಧಿಸಿದ್ದರು. ಅವರೊಬ್ಬ ಜಾತ್ಯತೀತ ನಾಯಕರಾಗಿದ್ದರು. ಹೂಡಾ ಹೇಳುತ್ತಿರುವುದು ಕೇವಲ ಪ್ರಚಾರದ ಗಿಮಿಕ್ ಆಗಿದೆ ಎಂದು ಹೇಳಿದ್ದಾರೆ.

ನೇತಾಜಿ ಅವರು ಕೇವಲ ಇಬ್ಬರಿಂದ ಪ್ರೇರಣೆ ಪಡೆದಿದ್ದರು. ಒಬ್ಬರು ಸ್ವಾಮಿ ವಿವೇಕಾನಂದರು. ಅವರು ಅಧ್ಯಾತ್ಮದ ಗುರು. ಮತ್ತೊಬ್ಬರು ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ್ ದಾಸ್. ಇವರು ಬೋಸ್ ರಾಜಕೀಯ ಮಾರ್ಗದರ್ಶಕರಾಗಿದ್ದರು. ಈ ಇಬ್ಬರ ಹೊರತಾಗಿ ನೇತಾಜಿ ಅವರಿ ಇತರ ಯಾವುದೇ ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರಣೆಯಾಗಿರಲಿಲ್ಲ. ಸಾವರ್ಕರ್ ಅವರು ದೊಡ್ಡ ವ್ಯಕ್ತಿತ್ವದ ವ್ಯಕ್ತಿ. ಸ್ವಾತಂತ್ರ್ಯ ಹೋರಾಟಗಾರ. ಆದರೆ, ಸಾವರ್ಕರ್ ಅವರ ವಿಚಾರಧಾರೆ ಮತ್ತು ನೇತಾಜಿ ಅವರ ಸಿದ್ಧಾಂತ ನಾಟಕೀಯ ಎಂಬಂಥ ತ್ವದಿರುದ್ಧಗಳಾಗಿವೆ. ಹಾಗಾಗಿ, ಸಾವರ್ಕರ್ ತತ್ವ ಮತ್ತು ಸಿದ್ಧಾಂತವನ್ನು ನೇತಾಜಿ ಅವರು ಅನುಸರಿಸಲು ನನಗೇ ಯಾವುದೇ ಕಾರಣಗಳು ಕಾಣುತ್ತಿಲ್ಲ. ವಾಸ್ತವದಲ್ಲಿ ನೇತಾಜಿ ಅವರು ಸಾವರ್ಕರ್ ಅವರನ್ನು ವಿರೋಧಿಸಿದ್ದರು ಎಂದು ಹೇಳಿದ್ದಾರೆ.

ನಟ ರಣದೀಪ್ ಹೂಡಾ ಅವರ ಟ್ವೀಟ್

ಸಾವರ್ಕರ್, ಜಿನ್ನಾ, ಮಹಾಸಭಾ ವಿರೋಧಿಸಿದ್ದ ನೇತಾಜಿ

ಬೋಸ್ ಅವರ ಲೇಖನಗಳನ್ನು ಪರಿಶೀಲಿಸಿದರೆ, ಸಾವರ್ಕರ್ ಮತ್ತು ಮಹಮ್ಮದ್ ಜಿನ್ನಾ ಅವರಿಂದ ನಾವು ಏನನ್ನೂ ನಿರೀಕ್ಷಿಸುವಂತಿಲ್ಲ. ಹಾಗೆಯೇ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದೂ ಮಹಾಸಭಾ ಮತ್ತು ಜಿನ್ನಾ ಅವರಿಂದ ಯಾವ ನಿರೀಕ್ಷೆ ಇಲ್ಲ. ನೇತಾಜಿ ಅವರು ಶುದ್ಧ ಜಾತ್ಯತೀತ ನಾಯಕರಾಗಿದ್ದರು. ಕೋಮವಾದಿಗಳನ್ನು ಅವರು ವಿರೋಧಿಸಿದ್ದರು. ಶರದ್ ಚಂದ್ರ ಬೋಸ್ ಮತ್ತು ನೇತಾಜಿ ಸುಭಾಶ್ ಚಂದ್ರ ಬೋಸ್ ಸಹೋದರಿರಬ್ಬರೂ ಸಂಪೂರ್ಣವಾಗಿ ಕೋಮವಾದವನ್ನು ವಿರೋಧಿಸಿದ್ದರು. ಹೀಗಿರಬೇಕಾದರೆ ನೇತಾಜಿ ಅವರು ಸಾವರ್ಕರ್ ಅವರನ್ನು ಬೆಂಬಲಿಸಿದ್ದರು ಅಥವಾ ಅನುಸರಿಸುತ್ತಿದ್ದರು ಎಂದು ಹೇಗೆ ಹೇಳುತ್ತೀರಿ? ಸಾವರ್ಕರ್ ಅವರು ಅಂಡಮಾನ್ ಜೈಲಿಗೆ ಹೋಗುವ ಮುಂಚೆ ಕ್ರಾಂತಿಕಾರಿಯಾಗಿದ್ದರು. ಆದರೆ, ಬಳಿಕ ಅವರು ಬದಲಾದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Randeep Hooda: ಕೇವಲ 4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿಕೊಂಡ ರಣದೀಪ್ ಹೂಡಾ; ಪ್ರಶ್ನೆ ಮಾಡೋರಿಗೆ ನಿರ್ಮಾಪಕ ಹೇಳಿದ್ದೇನು?

ರಣದೀಪ್ ಹೇಳುತ್ತಿರುವುದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ. ಅವರೊಬ್ಬ ಫಿಲ್ಮ್ ಆ್ಯಕ್ಟರ್. ಹಾಗಾಗಿ, ಸತ್ಯ ಇತಿಹಾಸವನ್ನು ಪ್ರದರ್ಶಿಸುವಂತೆ ನಾನು ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ. ಭಾರತದ ಸ್ವಾತಂತ್ರ್ಯ ಹೋರಾಟದ ಸತ್ಯಕತೆಯನ್ನು ಅವರು ತರಲಿ. ಒಂದೊಮ್ಮೆ ನೀವು ತಪ್ಪಾದ ಇತಿಹಾಸವನ್ನು ಬಿಂಬಿಸಿದರೆ ಈ ದೇಶದ ಯುವ ಜನರಿಗೆ ಅವಮಾನ ಮಾಡಿದಂತಾಗುತ್ತದೆ. ಸುಭಾಸ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತು ಖುದಿರಾಮ್ ಬೋಸ್ ಅವರು ಸಾವರ್ಕರ್ ಅವರ ಸಿದ್ಧಾಂತದಿಂದ ಪ್ರೇರಿತರಾಗಿದ್ದರು ಮತ್ತು ಅನುಸರಿಸಿದರು ಎಂದು ಹೇಳುವುದು ಸಂಪೂರ್ಣವಾಗಿ ತಪ್ಪಾಗಿದೆ. ಬದಲಿಗೆ ಅವರು ಸಿದ್ಧಾಂತವನ್ನು ಬಲವಾಗಿ ವಿರೋಧಿಸಿದರು ಎಂಬ ನೇತಾಜಿ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version