Site icon Vistara News

Dattatreya Hosabale: ನಮ್ಮ ಮೇಲೆ ದಾಳಿ ಮಾಡಿದ ಮೊಘಲರು ನಮಗಿಂತ ಮೇಲಲ್ಲ; ದತ್ತಾತ್ರೇಯ ಹೊಸಬಾಳೆ

Dattatreya Hosabale

ನವದೆಹಲಿ: “ಭಾರತದ ಮೇಲೆ ದಾಳಿ ನಡೆಸಿದ ಮೊಘಲರ ವಿರುದ್ಧ ದೇಶದ ಹೋರಾಟ ನಡೆಸಲಾಗಿದೆಯೇ ಹೊರತು, ಎಂದಿಗೂ ನಾವು ಅವರನ್ನು ನಮಗಿಂತ ಮೇಲು ಎಂಬುದಾಗಿ ಭಾವಿಸಿಲ್ಲ” ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದರು. ಅಲ್ಲದೆ, “ನಾವು ವಸಾಹತುಶಾಹಿ ಮನಸ್ಥಿತಿಯನ್ನು ಇನ್ನಾದರೂ ಬಿಡಬೇಕು” ಎಂದು ಕೂಡ ಸಲಹೆ ನೀಡಿದರು.

ದೆಹಲಿಯಲ್ಲಿ ನಡೆದ ರಾಜ್ಯಸಭೆ ಮಾಜಿ ಸದಸ್ಯ ಬಲಬೀರ್‌ ಪುಂಜ್‌ ಅವರ “ನರೆಟಿವ್‌ ಕಾ ಮಾಯಾಜಾಲ” (Narrative ka Mayajaal) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದತ್ತಾತ್ರೇಯ ಹೊಸಬಾಳೆ ಮಾತನಾಡಿದರು. “ಮೊಘಲರು ನಮಗಿಂತ ಮೇಲಿದ್ದರು ಎಂದು ನಾವು ಭಾವಿಸಿಲ್ಲ. ಮೊಘಲರು ದಾಳಿ ಮಾಡಿದಾಗ ವೀರಾವೇಶದಿಂದ ಹೋರಾಟ ನಡೆಸಲಾಗಿದೆ. ನಮ್ಮ ಮೇಲೆ ಕ್ರೂರ ದಾಳಿ ಮಾಡಿದವರು ಎಂದಿಗೂ ನಮಗಿಂತ ಮೇಲಿರುವುದಿಲ್ಲ” ಎಂದು ತಿಳಿಸಿದರು.

“ನಾವು ಬ್ರಿಟಿಷರ ಗುಲಾಮರಾಗಿದ್ದೆವು ಎಂಬ ಮನಸ್ಥಿತಿಯು ಅತಿ ಹೆಚ್ಚು ಓದಿಕೊಂಡವರು ಸೇರಿ ಹಲವರಲ್ಲಿದೆ. ಇಂತಹ ವಸಾಹತುಶಾಹಿ ಮನಸ್ಥಿತಿ ಈಗ ಬದಲಾಗಬೇಕಿದೆ. ನಮ್ಮ ಜೀವನ ಶೈಲಿಯಲ್ಲಿ ಐರೋಪ್ಯ ಕೇಂದ್ರಿತ ವಿಚಾರಗಳು ಅಡಗಿವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಐರೋಪ್ಯ ಸಂಸ್ಕೃತಿ ಅಡಕವಾಗಿದೆ. ನಮ್ಮ ಸಮಾಜದ ಚಿಂತನೆಗಳು ಹಾಗೆಯೇ ಇವೆ. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕವಾದರೂ ಈ ವಸಾಹತುಶಾಹಿ ಮನಸ್ಥಿತಿ ಬದಲಾಗಬೇಕಿತ್ತು. ಈಗಲಾದರೂ ಇದು ಬದಲಾಗಬೇಕಿದೆ” ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: Mohan Bhagawat: ಒಬ್ಬ ವ್ಯಕ್ತಿಯಿಂದ ಭಾರತದ ಏಳಿಗೆ ಅಸಾಧ್ಯ: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌

“ಭಾರತದ ಅಂತಃಸತ್ವ ಇರುವುದೇ ಭಾರತೀಯತೆಯಲ್ಲಿ. ಇದನ್ನು ನಾವು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಭಾರತದ ಸಂಸ್ಕೃತಿ, ಧರ್ಮ, ಆಚಾರ-ವಿಚಾರ, ಸಂಪ್ರದಾಯಗಳನ್ನು ಇಬ್ಭಾಗಗೊಳಿಸಲು, ದ್ವೇಷವನ್ನು ಹರಡಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಇಷ್ಟಾದರೂ ಅಂತಹ ಕುತ್ಸಿತ ಮನಸ್ಥಿತಿಗಳು ಯಶಸ್ವಿಯಾಗಿಲ್ಲ ಎಂಬುದನ್ನು ನಾವು ಅರಿಯಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಕೂಡ ಭಾಗವಹಿಸಿದ್ದರು.

Exit mobile version