Site icon Vistara News

Poster War: ‘ರಾಹುಲ್‌ ಗಾಂಧಿ ಆಧುನಿಕ ಕಾಲದ ರಾವಣ’ ಎಂದ ಬಿಜೆಪಿ; ಕಾಂಗ್ರೆಸ್ ತಿರುಗೇಟು

Rahul Gandhi Poster

New Age Ravan Vs Jumla Boy: BJP-Congress Poster War Escalates On X Social Media

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇವೆ. ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಈಗಿನಿಂದಲೇ ರಣತಂತ್ರ ರೂಪಿಸುತ್ತಿವೆ. ಪ್ರಚಾರ, ಒಗ್ಗಟ್ಟು, ಒಕ್ಕೂಟ, ಜನರ ಮುಂದಿಡಬೇಕಾದ ವಿಚಾರಗಳು, ಸಾಮಾಜಿಕ ಜಾಲತಾಣಗಳ ಸದ್ಬಳಕೆ ಸೇರಿ ಹಲವು ದಿಸೆಯಲ್ಲಿ ತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ವಿರುದ್ಧ ಬಿಜೆಪಿಯು ಪೋಸ್ಟರ್‌ ಸಮರ (Poster War) ಸಾರಿದೆ. ಇದಕ್ಕೆ ಕಾಂಗ್ರೆಸ್‌ ಕೂಡ ತಿರುಗೇಟು ನೀಡಿದೆ. “ರಾಹುಲ್‌ ಗಾಂಧಿ ಆಧುನಿಕ ರಾವಣ” ಎಂಬ ಪೋಸ್ಟರ್‌ ಶೇರ್‌ ಮಾಡುವ ಮೂಲಕ ಬಿಜೆಪಿಯು ಪೋಸ್ಟರ್‌ ಯುದ್ಧಕ್ಕೆ ನಾಂದಿ ಹಾಡಿದೆ.

ಬಿಜೆಪಿ ಪೋಸ್ಟರ್‌ ಏನು?

“ರಾಹುಲ್‌ ಗಾಂಧಿ ಅವರನ್ನು ರಾವಣನಂತೆ ಚಿತ್ರಿಸಿರುವ ಪೋಸ್ಟರ್‌ ಹಂಚಿಕೊಂಡಿರುವ ಬಿಜೆಪಿಯು, ರಾಹುಲ್‌ ಗಾಂಧಿ ಅವರನ್ನು ಆಧುನಿಕ ರಾವಣ ಎಂದು ಕರೆದಿದೆ. ಸಿನಿಮಾ ರೀತಿಯ ಪೋಸ್ಟರ್‌ನಲ್ಲಿ, “ಭಾರತ ಅಪಾಯದಲ್ಲಿದೆ. ರಾವಣ, ಕಾಂಗ್ರೆಸ್‌ ಪಕ್ಷದ ಪ್ರೊಡಕ್ಷನ್.‌ ನಿರ್ದೇಶನ ಜಾರ್ಜ್‌ ಸೋರೊಸ್”‌ ಎಂದಿದೆ. ಮತ್ತೊಂದೆಡೆ, “ಆಧುನಿಕ ಕಾಲದ ರಾವಣ. ಈತ ದುಷ್ಟ, ಧರ್ಮವಿರೋಧಿ, ರಾಮನ ವಿರೋಧಿ. ಭಾರತವನ್ನು ನಿರ್ನಾಮ ಮಾಡುವುದೇ ಈತನ ಗುರಿ” ಎಂಬ ಪೋಸ್ಟ್‌ ಹಂಚಿಕೊಂಡಿದೆ.

ತಿರುಗೇಟು ಕೊಟ್ಟ ಕಾಂಗ್ರೆಸ್‌

ಬಿಜೆಪಿ ಪೋಸ್ಟರ್‌ಗೆ ಕಾಂಗ್ರೆಸ್‌ ಕೂಡ ಪೋಸ್ಟರ್‌ ಮೂಲಕವೇ ತಿರುಗೇಟು ನೀಡಿದೆ. ನರೇಂದ್ರ ಮೋದಿ ಒಬ್ಬ ಸುಳ್ಳುಗಾರ ಎಂಬ ರೀತಿಯ ಪೋಸ್ಟರ್‌ ಹಂಚಿಕೊಂಡಿದೆ. “ಈತ ಆಧುನಿಕ ಕಾಲದ ಮೋದಾನವ. ಈತ ದುಷ್ಟ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ಜನವಿರೋಧಿ, ಮಾನವೀಯತೆಯ ವಿರೋಧಿ. ಭಾರತವನ್ನು ಹಾಳು ಮಾಡುವುದು ಹಾಗೂ ಇಂಡಿಯಾ ಎಂಬ ಐಡಿಯಾದ ನಿರ್ನಾಮ ಮಾಡುವುದು ಈತನ ಗುರಿ” ಎಂದು ಟಾಂಗ್‌ ಕೊಟ್ಟಿದೆ.

ಇದನ್ನೂ ಓದಿ: Social Media Harrassment : ಬಿಜೆಪಿ ಪರ ಪೋಸ್ಟ್‌ ಹಾಕುವವರಿಗೆ ಪೊಲೀಸ್‌ ದೌರ್ಜನ್ಯ, ಬೆದರಿಕೆ ; ಡಿಜಿಪಿಗೆ ದೂರು

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ವಾಗ್ವಾದ, ವಾಗ್ಯುದ್ಧ, ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ. ಪ್ರತಿಪಕ್ಷಗಳು ಕೂಡಿ ರಚಿಸಿರುವ ಇಂಡಿಯಾ ಒಕ್ಕೂಟವನ್ನು ನರೇಂದ್ರ ಮೋದಿ ಅವರು “ಘಮಂಡಿಯಾ” (ಅಹಂಕಾರಿಗಳು) ಎಂದು ಕರೆದಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಕೂಡ ಸರಿಯಾಗಿಯೇ ಪ್ರತ್ಯುತ್ತರ ನೀಡುತ್ತಿದೆ. ಈಗ ಎರಡೂ ಪಕ್ಷಗಳ ಮಧ್ಯೆ ಪೋಸ್ಟರ್‌ ಸಮರ ಆರಂಭವಾಗಿದ್ದು, ಇದು ಕೆಲವೇ ದಿನಗಳಲ್ಲಿ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ.

Exit mobile version