Site icon Vistara News

Ayodhya Airport: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಹಿಂದು ಧರ್ಮ ಗ್ರಂಥ ರಚನೆಕಾರರ ಹೆಸರು?

Ayodhya Airport

New airport in Ayodhya to be named after Maharishi Valmiki: Sources

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರವನ್ನು (Ram Mandir) 2024ರ ಜನವರಿ 22ರಂದು ಲೋಕಾರ್ಪಣೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇನ್ನು ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಮೊದಲು ಅಂದರೆ ಡಿಸೆಂಬರ್‌ 30ರಂದು ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ವಿಮಾನ ನಿಲ್ದಾಣವನ್ನು (Ayodhya Airport) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ರಾಮಾಯಣ ಗ್ರಂಥ ರಚಿಸಿದ ಮಹರ್ಷಿ ವಾಲ್ಮೀಕಿ (Maharishi Valmiki) ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಈಗ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಯೋಧ್ಯೆ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಎಂಬ ಹೆಸರಿದೆ. ಇದನ್ನು ಮಹರ್ಷಿ ವಾಲ್ಮೀಕಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಅಯೋಧ್ಯಾಧಾಮ ಎಂಬುದಾಗಿ ಬದಲಾಯಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸುಮಾರು 1,450 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆರಂಭದಲ್ಲಿ ಇಂಡಿಗೋ ಹಾಗೂ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಹಾರಾಟ ಆರಂಭಿಸಲಿವೆ ಎನ್ನಲಾಗಿದೆ.

29 ಯೋಜನೆಗಳಿಗೆ ಶಂಕುಸ್ಥಾಪನೆ

ಅಯೋಧ್ಯೆ ಭೇಟಿ ವೇಳೆ ನರೇಂದ್ರ ಮೋದಿ ಅವರು 11 ಸಾವಿರ ಕೋಟಿ ರೂ.ಗಿಂತ ಅಧಿಕ ಮೊತ್ತದ 29 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ತಮ್ಮ ಅಯೋಧ್ಯೆ ಭೇಟಿಯ ಸಂದರ್ಭದಲ್ಲಿ ರೋಡ್‌ಶೋ ಮತ್ತು ಸಾರ್ವಜನಿಕ ಸಭೆಯನ್ನೂ ನಡೆಸಲಿದ್ದಾರೆ ಎಂದು ಅಯೋಧ್ಯೆಯ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ.

“ಪ್ರಧಾನಿ ರೈಲುಗಳಿಗೆ ಹಸಿರು ಬಾವುಟ ತೋರಿಸಲಿದ್ದಾರೆ. ನಂತರ ವಿಮಾನ ನಿಲ್ದಾಣದ ಮುಂದಿನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಅವರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ಅಯೋಧ್ಯೆಯ ಆಯುಕ್ತರು ತಿಳಿಸಿದ್ದಾರೆ.

ಜನವರಿ 22ರಂದು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಭಗವಾನ್ ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಉತ್ತರ ಪ್ರದೇಶ ಸರ್ಕಾರವು ಡಿಸೆಂಬರ್ 30ರಿಂದ ಜನವರಿ ವರೆಗೆ ನಡೆಯುವ ಕಾರ್ಯಕ್ರಮಗಳ ಸರಣಿಯ ರಾಮೋತ್ಸವಕ್ಕಾಗಿ ₹100 ಕೋಟಿ ಬಜೆಟ್ ಅನ್ನು ನಿಗದಿಪಡಿಸಿದೆ.

ಇದನ್ನೂ ಓದಿ: Ayodhya Ram Mandir: ಆಹ್ವಾನಕ್ಕೆ ಥ್ಯಾಂಕ್ಸ್ ಎಂದ ಕಾಂಗ್ರೆಸ್; ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ?

ಈ ಮಹತ್ವದ ಧಾರ್ಮಿಕ ಕಾರ್ಯಕ್ರಮಕ್ಕೆ ಮುಂಚಿತವಾಗಿ, ಆಡಳಿತವು ನಗರದ ಸೌಂದರ್ಯೀಕರಣ ಅಭಿಯಾನವನ್ನು ಪ್ರಾರಂಭಿಸಿದೆ. ರಸ್ತೆಗಳನ್ನು ಅಗಲೀಕರಣಗೊಳಿಸಲಾಗುತ್ತಿದೆ ಮತ್ತು ಮೂಲಸೌಕರ್ಯಗಳನ್ನು ನವೀಕರಿಸಲಾಗುತ್ತಿದೆ. ಸಮಾರಂಭಕ್ಕೆ 3000 ವಿವಿಐಪಿಗಳು ಸೇರಿದಂತೆ 7000 ಜನರನ್ನು ಆಹ್ವಾನಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version