ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭೇಟಿ ನೀಡಿದ ಬಳಿಕ, ಮೋದಿ ಭೇಟಿಯ ಕುರಿತು ಮಾಲ್ಡೀವ್ಸ್ ಸಚಿವರು ಉದ್ಧಟತನ ತೋರಿದ ಬಳಿಕ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಚಹರೆಯೇ ಬದಲಾಗುತ್ತಿದೆ. ದೇಶದ ಲಕ್ಷಾಂತರ ಜನ ಮಾಲ್ಡೀವ್ಸ್ (Maldives) ಬದಲು ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತಿದೆ. ಇನ್ನು ಈಸ್ ಮೈ ಟ್ರಿಪ್‌ನಂತಹ (Ease My Trip) ವಿಮಾನ ಟಿಕೆಟ್ ಬುಕ್ಕಿಂಗ್ ಸಂಸ್ಥೆಗಳು ಆಫರ್ ನೀಡಲು ಮುಂದಾಗಿವೆ. ಇದರ ಬೆನ್ನಲ್ಲೇ, ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ (Minicoy Islands) ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
“ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ ಎರಡು ಉದ್ದೇಶಗಳಿಗಾಗಿ ಕೇಂದ್ರ ಸರ್ಕಾರ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಸಿದೆ. ಜನರು ಪ್ರವಾಸಕ್ಕೆ ತೆರಳಲು ಹಾಗೂ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಕೂಡ ಇಲ್ಲಿಂದ ಹಾರಾಟ ನಡೆಸುವ, ಲ್ಯಾಂಡ್ ಆಗುವ ಉದ್ದೇಶದಿಂದ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆದಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರವು ಏರ್‌ಫೀಲ್ಡ್ ಮಾತ್ರ ನಿರ್ಮಿಸುವ ಪ್ರಸ್ತಾಪ ಹೊಂದಿತ್ತು. ಆದರೀಗ, ಸಾರ್ವಜನಿಕರಿಗೂ ಅನುಕೂಲವಾಗುವ ದಿಸೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾಪ ಹೊಂದಿದೆ” ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಮಾಲ್ಡೀವ್ಸ್ ಉದ್ಧಟತನದ ಬಳಿಕ ಲಕ್ಷದ್ವೀಪದತ್ತ ದೇಶದ ಜನರ ಗಮನ ವಾಲಿದೆ. ಮಾಲ್ಡೀವ್ಸ್‌ಗೆ ಏಕೆ ಹೋಗುವುದು, ಲಕ್ಷದ್ವೀಪದಲ್ಲೇ ಅದ್ಭುತ ದ್ವೀಪಗಳಿವೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನ ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದ ಸರ್ಕಾರವೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಮುಂದಾಗಿದೆ. ಇದರ ಭಾಗವಾಗಿಯೇ ಹೊಸ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ. ಲಕ್ಷದ್ವೀಪ ಪ್ರವಾಸೋದ್ಯಮದ ಬಗ್ಗೆ ತುಚ್ಚವಾಗಿ ಮಾತನಾಡಿದ ಮಾಲ್ಡೀವ್ಸ್‌ಗೂ ಇದರಿಂದ ಪೆಟ್ಟು ಬೀಳಲಿದೆ ಎನ್ನಲಾಗುತ್ತದೆ.
ಇದನ್ನೂ ಓದಿ: Lakshadweep: ಮಾಲ್ಡೀವ್ಸ್ ಬಿಡಿ, ಲಕ್ಷದ್ವೀಪದಲ್ಲಿ ನೋಡಲೇಬೇಕಾದ ತಾಣಗಳ ಪರಿಚಯ ಇಲ್ಲಿದೆ
ಭಾರತ ಹಾಗೂ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ ಕಾರಣ ಬಾಯ್ಕಾಟ್ ಮಾಲ್ಡೀವ್ಸ್ ಎಂಬ ಅಭಿಯಾನ ಶುರುವಾಗಿದೆ. ಇದರಿಂದ ಕಂಗಾಲಾದ ಮಾಲ್ಡೀವ್ಸ್ ಭಾರತದ ಕ್ಷಮೆ ಕೇಳಿದೆ. “ಭಾರತದ ಬಗ್ಗೆ ಮಾಲ್ಡೀವ್ಸ್ ಸಚಿವರು ಹೇಳಿಕೆ ನೀಡಿದ ಮಾತ್ರಕ್ಕೆ ಭಾರತದ ಬಗ್ಗೆ ಮಾಲ್ಡೀವ್ಸ್ ಜನರಿಗೆ ಇರುವ ಗೌರವ ಕಡಿಮೆಯಾಗುವುದಿಲ್ಲ. ಆದರೆ, ಉದ್ಧಟತನದ ಹೇಳಿಕೆ ನೀಡಿರುವುದಕ್ಕೆ ನಾವು ಭಾರತದ ಕ್ಷಮೆಯಾಚಿಸುತ್ತೇವೆ. ಭಾರತೀಯರ ಆಕ್ರೋಶವನ್ನು ಗೌರವಿಸುತ್ತೇವೆ. ಆದರೆ, ಭಾರತೀಯರು ಕೂಡಲೇ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ನಿಲ್ಲಿಸಬೇಕು” ಎಂದು ಮಾಲ್ಡೀವ್ಸ್ ಸಂಸದೆ, ಮಾಜಿ ಡೆಪ್ಯೂಟಿ ಸ್ಪೀಕರ್ ಆಗಿರುವ ಇವಾ ಅಬ್ದುಲ್ಲಾ ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ