ನವದೆಹಲಿ: ದೇಶದಲ್ಲಿ ವಸಾಹತು ಕಾಲದ ಕ್ರಿಮಿನಲ್ ಕಾನೂನುಗಳ (Criminal Laws) ಸಂಪೂರ್ಣ ತಿದ್ದುಪಡಿ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೊಳಿಸಲಾಗಿದೆ. ಇವುಗಳ ಬದಲಾಗಿ ಮೂರು ಹೊಸ ಕಾನೂನುಗಳು (New Laws) ಜುಲೈ 1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ.
ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ. ಹೊಸ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿವೆ.
ಏನೆಲ್ಲ ಮಾರ್ಪಾಡು?
ಈಗಿರುವ ಭಾರತೀಯ ದಂಡ ಸಂಹಿತೆಯಲ್ಲಿ 420 ಸೆಕ್ಷನ್ ಅನ್ನು ವಂಚನೆ ಅಪರಾಧಕ್ಕೆ ಅನ್ವಯಿಸಲಾಗುತ್ತದೆ. ಆದರೆ, ಭಾರತೀಯ ನ್ಯಾಯ ಸಂಹಿತೆಯ ಈ ಅಪರಾಧಕ್ಕೆ 316(2), (3) ಮತ್ತು (4) ಸೆಕ್ಷನ್‌ಗಳು ಇರಲಿವೆ. ವಂಚನೆ ಅಪರಾಧಕ್ಕಾಗಿ ಈ ಸೆಕ್ಷನ್‌ಗಳಡಿ ಅಪರಾಧಿಗೆ ಮೂರು ವರ್ಷ, ಐದು ವರ್ಷ ಅಥವಾ ಏಳು ವರ್ಷಗಳವರೆಗೆ ದಂಡ ಸಹಿತ ಜೈಲು ಶಿಕ್ಷೆಯನ್ನು ವಿಸ್ತರಿಸಬಹುದಾಗಿದೆ.
🚨3 new criminal laws—Bharatiya Nyaya Sanhita, BNSS & BSA, will come into force from 1 July. pic.twitter.com/a1Mmh0jGaT
— alpha impact (@AlphaImpactX) February 24, 2024
ಸೆಕ್ಷನ್ 302 ಕೊಲೆಗಲ್ಲ, ಸ್ನ್ಯಾಚಿಂಗ್‌ಗೆ ಅಪ್ಲೈ
ಈಗ ಚಾಲ್ತಿಯಲ್ಲಿರುವ ಐಪಿಸಿ ಸೆಕ್ಷನ್ 302 ಕೊಲೆ ಅಪರಾಧವನ್ನು ಸೂಚಿಸುತ್ತದೆ. ಯಾರು ಕೊಲೆ ಅಪರಾಧವನ್ನು ಮಾಡುತ್ತಾರೋ ಅವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಅಥವಾ ದಂಡ ಸಹಿತ ಶಿಕ್ಷೆಯನ್ನು ವಿಧಿಸಬಹುದಾಗಿದೆ.
ಉದ್ದೇಶಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೊಲೆ ಅಪರಾಧದ ಶಿಕ್ಷೆಯನ್ನು ವಿವರಿಸಲು ಸೆಕ್ಷನ್ 101 ಬಳಸಲಾಗಿದೆ. ಇದಕ್ಕೆ ಎರಡು ಉಪ ಸೆಕ್ಷನ್‌ಗಳು ಕೂಡ ಇವೆ. ಐಪಿಸಿಯಲ್ಲಿದ್ದ ಸೆಕ್ಷನ್ 302 ಈಗ ಉದ್ದೇಶಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕಸಿದುಕೊಳ್ಳುವ(ಸ್ನ್ಯಾಚಿಂಗ್) ಅಪರಾಧವನ್ನು ಸೂಚಿಸುತ್ತದೆ. ಸೆಕ್ಷನ್ 302(1) ಪ್ರಕಾರ, ಕಳ್ಳತನ ಮಾಡುವ ಸಲುವಾಗಿ, ಅಪರಾಧಿಯು ಹಠಾತ್ತನೆ ಅಥವಾ ತ್ವರಿತವಾಗಿ ಅಥವಾ ಬಲವಂತವಾಗಿ ವಶಪಡಿಸಿಕೊಂಡರೆ ಅಥವಾ ಯಾವುದೇ ವ್ಯಕ್ತಿಯಿಂದ ಅಥವಾ ಅವನ ಸ್ವಾಧೀನದಿಂದ ಯಾವುದೇ ಚಲಿಸಬಹುದಾದ ಆಸ್ತಿಯನ್ನು ಕಸಿದುಕೊಂಡರೆ ಅಥವಾ ಕಸಿದುಕೊಂಡರೆ ಎಂದು ವ್ಯಾಖ್ಯಾನಿಸುತ್ತದೆ.
ದೇಶದ್ರೋಹ ಕಾನೂನು ಬದಲು
ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದ ದೇಶದ್ರೋಹದ ಕಾನೂನು ನೂತನ ಕ್ರಿಮಿನಲ್ ಕಾನೂನಿನಲ್ಲಿ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ. ದೇಶದ್ರೋಹ ಕಾನೂನಿನಲ್ಲಿ ಬಂಧಿತರಾದವರಿಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆ ನೀಡಬಹುದಾಗಿದ್ದು, ಈ ಕಾನೂನು ರದ್ದುಗೊಳಿಸಲಾಗುತ್ತದೆ ಎಂದು ಹೇಳಿದರು. ಇದರ ಬದಲಾಗಿ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಕೂಡ ತಿಳಿಸಿದರು.
ಇದನ್ನೂ ಓದಿ: Parliament Session: ಅಪರಾಧ ಎಸಗಿ ದೇಶ ಬಿಟ್ಟು ಹೋದವರಿಗೆ ಇನ್ನಿಲ್ಲ ನೆಮ್ಮದಿ; ಬರ್ತಿದೆ ಹೊಸ ಕಾನೂನು!
ಅತ್ಯಾಚಾರಿಗಳಿಗೆ 20 ವರ್ಷ ಜೈಲು
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ನೂತನ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. “ಹೊಸ ಕಾನೂನುಗಳ ಅಡಿಯಲ್ಲಿ ಅತ್ಯಾಚಾರಿಗಳಿಗೆ ಗರಿಷ್ಠ 20 ವರ್ಷ ಅಥವಾ ಅವರು ಜೀವಿತಾವಧಿವರೆಗೆ ಜೈಲಿನಲ್ಲಿ ಕಾಲ ಕಳೆಯುವ ರೀತಿ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ, ಅತ್ಯಾಚಾರ ಸಂತ್ರಸ್ತೆಯರ ಮಾಹಿತಿ ಬಹಿರಂಗಪಡಿಸಿದವರಿಗೂ ಶಿಕ್ಷೆ ವಿಧಿಸುವ ಕಾನೂನು ಇರಲಿದೆ” ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ಗುಂಪು ಹತ್ಯೆ ಅಪರಾಧಿಗಳಿಗೆ ಜೀವಾವಧಿ
ದೇಶದಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ಗುಂಪು ಹತ್ಯೆಗಳ (Mob Lynching) ಸಂಖ್ಯೆ ಜಾಸ್ತಿಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಗುಂಪು ಹತ್ಯೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಿದೆ. ಗುಂಪು ಹತ್ಯೆಯಲ್ಲಿ ಭಾಗಿಯಾದವರಿಗೆ ಕನಿಷ್ಠ ಏಳು ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ, ಹೆಚ್ಚಿನ ಮೊತ್ತದ ದಂಡವನ್ನೂ ವಿಧಿಸಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ