ನವ ದೆಹಲಿ: ಭಾರತ ಸರ್ಕಾರವು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ದೇಶಾದ್ಯಂತ ಎಕ್ಸ್‌ಪ್ರೆಸ್ ವೇ, ಸುರಂಗ ಮಾರ್ಗಗಳು, ಹೈಟೆಕ್ ರೈಲು ನಿಲ್ದಾಣಗಳ ನಿರ್ಮಾಣಗಳು ಗಮನ ಸೆಳೆಯುತ್ತಿವೆ. ಈ ಸಾಲಿಗೆ ಈಗ ನ್ಯೂ ಡೆಲ್ಲಿ ರೈಲ್ವೆ ನಿಲ್ದಾಣ(New NDLS) ಕೂಡ ಸೇರ್ಪಡೆಯಾಗಲಿದೆ. ಪ್ರಸ್ತಾಪಿತ ಹೊಸ ರೈಲು ನಿಲ್ದಾಣದ ವಿನ್ಯಾಸವನ್ನು ರೈಲ್ವೆ ಇಲಾಖೆಯು ಟ್ವಿಟರ್‌ನಲ್ಲಿ ಷೇರ್ ಮಾಡಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಿಲ್ದಾಣ ನಿಮಗೆ ಸೈ ಫೈ ಸಿನಿಮಾದಲ್ಲಿರುವ ದೃಶ್ಯ ವೈಭವದಂತೆ ಭಾಸವಾಗುತ್ತದೆ!
ಉದ್ದೇಶಿತ ಹೊಸ ರೈಲು ನಿಲ್ದಾಣವನ್ನು 4700 ಕೋಟಿ ರೂ.ನಿಂದ 4800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಾಕಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಲಿರುವ ಈ ನಿಲ್ದಾಣವು 80 ಮೀಟರ್ ಎತ್ತರ ಹಾಗೂ 450 ಮೀಟರ್ ಉದ್ದ(ಆಲ್ ಮೋಸ್ಟ್ ಅರ್ಧ ಕಿ.ಮೀ) ಇರಲಿದೆ. ದಿಲ್ಲಿ ರೈಲ್ವೆ ನಿಲ್ದಾಣದ 16 ಪ್ಲಾಟ್‍ಫಾರ್ಮ್‌ಗಳನ್ನು ಇದು ಕವರ್ ಮಾಡಲಿದೆ.
ಶೀಘ್ರವೇ ನಿರ್ಮಾಣಗೊಳ್ಳಲಿರುವ ಈ ಹೊಸ ನಿಲ್ದಾಣವು ಪ್ರವೇಶ ರಸ್ತೆಯ ಉದ್ದಕ್ಕೂ 650 ಮೀಟರ್ ಉದ್ದದ ಹೈ ಸ್ಟ್ರೀಟ್ ಅನ್ನು ಹೊಂದಿರುತ್ತದೆ ಮತ್ತು ಇದು ಪಾದಚಾರಿಗಳಿಗೆ ಅನುಕೂಲವಾಗಿರುತ್ತದೆ. ಮಲ್ಟಿ ಮಾಡೆಲ್ ಟಾನ್ಸ್‌ಪೋರ್ಟ್ ಹಬ್ಸ್(ಎಂಎಂಟಿಎಸ್) ಮೂಲಕ ದಿಲ್ಲಿ ಮೆಟ್ರೋ ಯೆಲ್ಲೋ ಲೈನ್ ಮತ್ತು ಏರ್ ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ಗಳನ್ನು ಈ ನಿಲ್ದಾಣವು ಒಳಗೊಂಡಿರುತ್ತದೆ. ಜತೆಗೆ, ನ್ಯಾಷನಲ್ ಕ್ಯಾಪಿಟಲ್ ರೀಜನ್‌ನ ಎಲ್ಲ ಭಾಗಗಳನ್ನು ಸಂಪರ್ಕಿಸುವ ಸ್ಥಳೀಯ ಬಸ್‌ಗಳಿಗೂ ಇದು ಕೇಂದ್ರವಾಗಿರುತ್ತದೆ.
ಈ ರೈಲು ನಿಲ್ದಾಣ ಸಂಕೀರ್ಣವು, ಎರಡು ಗುಮ್ಮಟಗಳೊಂದಿಗೆ ಒಟ್ಟು ಆರು ಮಜಲುಗಳ ಕಟ್ಟಡವಾಗಿರಲಿದೆ. ಕೆಲವು ವರದಿಗಳ ಪ್ರಕಾರ, ಪ್ರಧಾನಿ ಕಾರ್ಯಾಲಯದ ನೇರ ಉಸ್ತುವಾರಿ ಇದಕ್ಕಿರಲಿದೆ. ಒಮ್ಮೆ ಉದ್ದೇಶಿತ ರೈಲು ನಿಲ್ದಾಣವು ಪೂರ್ಣಗೊಂಡರೆ, ದಿಲ್ಲಿಯ ಹೊಸ ಲ್ಯಾಂಡ್‌ಮಾರ್ಕ್ ಆಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ.
ಮಹತ್ವದ ರೈಲು ನಿಲ್ದಾಣ
ದೇಶಾದ್ಯಂತ ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸುವ ಕೆಲಸವನ್ನು ರೈಲ್ವೆ ಇಲಾಖೆ ಮಾಡುತ್ತದೆ. ಇದರ ಭಾಗವಾಗಿಯೇ ಭೋಪಾಲ್‌ನ ರಾಣಿ ಕಮಲಾಪತಿ, ಗುಜರಾತ್‌ನ ಗಾಂಧಿ ನಗರ, ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗಳಿಗೆ ಮಾಡರ್ನ್ ಲುಕ್ ನೀಡಲಾಗಿದೆ.
ನವ ದೆಹಲಿ ರೈಲು ನಿಲ್ದಾಣವು ದೇಶದ ಅತ್ಯಂತ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಮತ್ತಷ್ಟು ಬ್ಯೂಸಿಯೆಸ್ಟ್ ನಿಲ್ದಾಣವೂ ಹೌದು. ರಾಷ್ಟ್ರ ರಾಜಧಾನಿ ಹೃದಯ ಭಾಗದಲ್ಲಿರುವ ಈ ರೈಲು ನಿಲ್ದಾಣವು ದೇಶದ ಬಹುತೇಕ ಎಲ್ಲ ರೈಲು ನೆಟ್‌ವರ್ಕ್‌ಗೆ ಕನೆಕ್ಟ್ ಮಾಡುತ್ತದೆ. ಜಮ್ಮು-ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ತನಕ ಮತ್ತು ಗುಜರಾತ್‌ನಿಂದ ನಾಗಾಲ್ಯಾಂಡ್ ವರೆಗೆ ಸಂಪರ್ಕವಿದೆ. ಈ ರೈಲು ನಿಲ್ದಾಣದಿಂದ ಪ್ರಯಾಣಿಕರು ದೇಶದ ಯಾವುದೇ ಮೂಲೆಗೆ ಸಂಚರಿಸಬಹುದು.
ಉದ್ದೇಶಿತ ರೈಲು ನಿಲ್ದಾಣದ ವಿನ್ಯಾಸ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಿಶ್ರ ಪ್ರತಿಕ್ರಿಯೆ ದೊರಕಿದೆ. ಕೆಲವರು ಇದೊಂದು ಅವಾಸ್ತವಿಕ ವಿನ್ಯಾಸ ಎಂದು ಕರೆದಿದ್ದಾರೆ. ವಾಸ್ತವದಲ್ಲಿ ಈಗಿರುವ ವಿನ್ಯಾಸದಲ್ಲಿ ರೈಲು ನಿಲ್ದಾಣ ಮೂಡಿಬರಬಹುದು ಇಲ್ಲದೆ ಬೇರೆ ರೀತಿಯಲ್ಲಿ ಇರಬಹುದು. ಆದರೆ, ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸುತ್ತಿರುವುದಂತೂ ನಿಜ.