ಜೈಪುರ: “ದೇಶದ ಇತಿಹಾಸದಲ್ಲಿ ನಡೆದ ತಪ್ಪುಗಳನ್ನು ಸರಿಪಡಿಸಲಾಗಿದೆ. ಇದು ನವಭಾರತವಾಗಿದ್ದು, ಜಗತ್ತೇ ನಮ್ಮನ್ನು ಭರವಸೆಯ ಕಣ್ಣುಗಳಿಂದ ನೋಡುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ರಾಜಸ್ಥಾನದಲ್ಲಿ ಭಗವಾನ್ ದೇವನಾರಾಯಣರ ಜಯಂತಿ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೇಶದ ಇತಿಹಾಸದ ತಪ್ಪುಗಳು ಮರುಕಳಿಸುವುದಿಲ್ಲ. ಅದರಲ್ಲೂ, ಕಳೆದ ಕೆಲವು ದಶಕಗಳಿಂದ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲಾಗಿದೆ” ಎಂದರು.
“ದೇಶಕ್ಕಾಗಿ ನಿಜವಾಗಿಯೂ ಶ್ರಮಿಸಿದವರನ್ನು ಈಗ ಸ್ಮರಿಸಲಾಗುತ್ತಿದೆ. ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಇತಿಹಾಸದುದ್ದಕ್ಕೂ ಭಾರತವನ್ನು ವಿಭಜಿಸಲು ಯತ್ನಗಳು ನಡೆದಿವೆ. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ಸೈದ್ಧಾಂತಿಕವಾಗಿ ಭಾರತವನ್ನು ಇಬ್ಭಾಗ ಮಾಡಲು ಯತ್ನಿಸಲಾಗಿದೆ. ಆದರೆ, ಭಾರತವು ಬಲಿಷ್ಠ ನಾಗರಿಕತೆ ಹಾಗೂ ಬಲಿಷ್ಠ ತತ್ತ್ವಗಳ ಮೇಲೆ ನಿಂತಿರುವ ರಾಷ್ಟ್ರವಾಗಿರುವುದರಿಂದ ಯಾರೂ ನಮ್ಮನ್ನು ಮುಗಿಸಲು ಸಾಧ್ಯವಾಗಿಲ್ಲ. ಮುಂದೆಯೂ ಇದು ನೆರವೇರುವುದಿಲ್ಲ” ಎಂದು ಹೇಳಿದರು.
“ಭಾರತವು ಈಗ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ಗತಕಾಲದ ತಪ್ಪುಗಳನ್ನು ಸರಿಪಡಿಸಿಕೊಂಡು, ಏಳಿಗೆಯೆಡೆಗೆ ಮುನ್ನುಗುತ್ತಿದೆ. ಹಾಗಾಗಿ, ಜಗತ್ತೇ ಇಂದು ಭಾರತದ ಕಡೆ ನೋಡುತ್ತಿದೆ. ಹೊಸ ಆಶಾವಾದವು ನಮ್ಮ ಮೇಲೆ ಮೂಡಿದೆ. ಇದಕ್ಕೆ ನಮ್ಮ ಬಲಿಷ್ಠ ಮೌಲ್ಯಗಳು ಹಾಗೂ ನಾಗರಿಕತೆಯೇ ಕಾರಣ” ಎಂದು ತಿಳಿಸಿದರು.
ಇದನ್ನೂ ಓದಿ: Narendra Modi Bust | ಬಂಗಾರದಲ್ಲಿ ನರೇಂದ್ರ ಮೋದಿ ಪುತ್ಥಳಿ ಕೆತ್ತಿಸಿದ ಗುಜರಾತ್ ಉದ್ಯಮಿ, ಏನಿದಕ್ಕೆ ಕಾರಣ?