ನವದೆಹಲಿ: “ನವ ಭಾರತ ಎಂದರೆ ಸದ್ಯಕ್ಕೆ ‘ಆದಿ’ ಹಾಗೂ ‘ಆಧುನಿಕತೆ’ಯ ಸಂಕೇತವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ, ಸಂಪ್ರದಾಯ, ಕಲೆ, ಆಚಾರ-ವಿಚಾರಗಳನ್ನು ಪ್ರದರ್ಶಿಸುವ ‘ಆದಿ ಮಹೋತ್ಸವ’ಕ್ಕೆ (Aadi Mahotsav) ಚಾಲನೆ ನೀಡಿದ ಬಳಿಕ ಮಾಡಿದ ಅವರು, ದೇಶದ ಏಳಿಗೆಗೆ ಆದಿವಾಸಿಗಳ ಕೊಡುಗೆಯನ್ನು ಸ್ಮರಿಸಿದರು.
“ನಗರಗಳಿಂದ ಗ್ರಾಮಗಳು ದೂರ ಉಳಿದ ಕಾರಣ ಹಾಗೂ ಆಳುವ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಮೊದಲು ಯುವಕರು ಪ್ರತ್ಯೇಕವಾದದ ಬಲೆಗೆ ಸಿಲುಕಿ ನರಳುತ್ತಿದ್ದರು. ಆದರೆ, ನಮ್ಮ ಸರ್ಕಾರವು ಆದಿವಾಸಿಗಳು, ಬುಡಕಟ್ಟು ಸಮುದಾಯದವರನ್ನೂ ಮುನ್ನೆಲೆಗೆ ತರುತ್ತಿದೆ. ಅವರಿಗೂ ಸರ್ಕಾರದ ಯೋಜನೆಗಳು ತಲುಪುತ್ತಿವೆ. ಇದರಿಂದಾಗಿ ನವ ಭಾರತ ಎಂದರೆ ಆದಿ (ಆದಿವಾಸಿಗಳು) ಹಾಗೂ ಆಧುನಿಕತೆಯ ಸಂಗಮ” ಎಂದಿದ್ದಾರೆ.
ಆದಿವಾಸಿಗಳಿಗಾಗಿ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾದನ ಕುರಿತು ಪ್ರಸ್ತಾಪಿಸಿದ ಪ್ರಧಾನಿ, “ಏಕ ಭಾರತ ಶ್ರೇಷ್ಠ ಭಾರತ ಕಲ್ಪನೆಯ ಸಾಕಾರಕ್ಕೆ ಆದಿವಾಸಿಗಳ ಕೊಡುಗೆ ಅಪಾರವಾಗಿದೆ. ಹಾಗಾಗಿ, ಬುಡಕಟ್ಟು ಸಮುದಾಯದವರ ಏಳಿಗೆ ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗಾಗಿ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದೇವೆ. ಇದರಿಂದ ಯುವಕರಿಗೆ ತಮ್ಮ ಕಲೆಯ ಕುರಿತು ತರಬೇತಿ ನೀಡುವುದು ಹಾಗೂ ಕೌಶಲಾಭಿವೃದ್ಧಿ ಹೆಚ್ಚಿಸಲಾಗುತ್ತಿದೆ” ಎಂದು ಹೇಳಿದರು. ಇದೇ ವೇಳೆ, ಮೋದಿ ಅವರು ಹಲವು ಬುಡಕಟ್ಟು ಕಲಾವಿದರ ಜತೆ ಮಾತುಕತೆ ನಡೆಸಿದರು.