ನವ ದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭ ಹಣಕಾಸು ಸಚಿವಾಲಯ 75 ರೂ.ಗಳ ( Rs 75 Commemorative coin) ವಿಶೇಷ ನಾಣ್ಯದ ಬಿಡುಗಡೆಯನ್ನೂ ಘೋಷಿಸಿದೆ. (New Parliament Building) ಇಂಥ ವಿಶೇಷ ಸಂದರ್ಭಗಳಲ್ಲಿ ಸ್ಮರಣಾರ್ಥ ವಿಶೇಷ ನಾಣ್ಯ ಬಿಡುಗಡೆ ಮಾಡುವ ವಾಡಿಕೆ ಹೊಸತಲ್ಲ. ಈ ಹಿಂದೆ ಭಾರತದಲ್ಲಿ ಇಂಥ ಹಲವು ನಾಣ್ಯಗಳನ್ನು ಬಿಡುಗಡೆ ಮಾಡಲಾಗಿತ್ತು.
75 ರೂ. ನಾಣ್ಯದ ವಿವರ:
ನೂತನ 75 ರೂ.ಗಳ ನಾಣ್ಯ 36 ಗ್ರಾಂಗಳಷ್ಟಿದ್ದು, 44 ಮಿಲಿಮೀಟರ್ ವ್ಯಾಸ ಹೊಂದಿದೆ. ಅಂಚಿನಲ್ಲಿ ಉದ್ದಕ್ಕೂ 200 ಸರಪಣಿಗಳ ಮುದ್ರಣವಿರುತ್ತದೆ. ನಾಣ್ಯವು 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ಕ್ವಾಟರ್ನರಿ ಮಿಶ್ರಲೋಹವನ್ನು ಹೊಂದಿದೆ.
ನಾಣ್ಯದ ಒಂದು ಭಾಗದಲ್ಲಿ ರಾಷ್ಟ್ರೀಯ ಲಾಂಛನವಾದ ಅಶೋಕ ಸ್ತಂಭದಲ್ಲಿರುವ ಸಿಂಹಗಳ ಜೊತೆಗೆ ‘ಸತ್ಯಮೇವ ಜಯತೇ’ ಎಂಬ ವಾಕ್ಯ ನಾಣ್ಯದ ಹಿಂಭಾಗದಲ್ಲಿ ಇರಲಿದೆ. ಇಂಗ್ಲಿಷ್ ಹಾಗೂ ದೇವನಾಗರಿ ಲಿಪಿಯಲ್ಲಿ ಎಡ- ಬಲ ಕಡೆಗಳಲ್ಲಿ ʼಭಾರತʼ ಎಂದು ಬರೆದಿರುತ್ತದೆ. ನಾಣ್ಯದ ಮೇಲ್ಬದಿಯಲ್ಲಿ ಇಂಗ್ಲಿಷ್‌ನಲ್ಲಿ ಹಾಗೂ ಕೆಳಬದಿಯಲ್ಲಿ ದೇವನಾಗರಿ ಲಿಪಿಯಲ್ಲಿ ʼಸಂಸತ್ ಭವನʼ ಎಂದು ಕೆತ್ತಲಾಗಿದೆ. ನಾಣ್ಯದ ವಿನ್ಯಾಸ ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ.
ಪಡೆಯುವುದು ಹೇಗೆ?
ಈ 75 ರೂ.ಗಳ ವಿಶೇಷ ನಾಣ್ಯ ಸಾಮಾನ್ಯ ಚಲಾವಣೆಯಲ್ಲಿ ಇರುವುದಿಲ್ಲ. ಇಂಥ ನಾಣ್ಯಗಳು ಸೀಮಿತ ಅವಧಿಗೆ ದೊರೆಯುತ್ತವೆ. ಮುಂಬಯಿ, ಕೋಲ್ಕತಾ, ಹೈದರಾಬಾದ್ ಮತ್ತು ನೋಯ್ಡಾದಲ್ಲಿನ ಸರ್ಕಾರಿ ನೋಟು ಮುದ್ರಣಾಲಯಗಳಲ್ಲಿ (ಟಂಕಸಾಲೆ) ಟಂಕಿಸುತ್ತಾರೆ. ವಿಶೇಷ ನಾಣ್ಯಗಳನ್ನು ಸಾಮಾನ್ಯವಾಗಿ ನಾಣ್ಯ ಸಂಗ್ರಹಾಸಕ್ತರು ಖರೀದಿಸುತ್ತಾರೆ. ಕೋಲ್ಕತಾ ಮಿಂಟ್, ಮುಂಬಯಿ ಮಿಂಟ್, ಹೈದರಾಬಾದ್ ಮಿಂಟ್ ( Kolkata Mint, Mumbai Mint, Hyderabad Mint ವೆಬ್ ಸೈಟ್‌ಗಳಲ್ಲಿ ಸಂಪರ್ಕಿಸಿ ನಾಣ್ಯ ಖರೀದಿಸಬಹುದು. ಈ ನಾಣ್ಯಗಳ ಬುಕಿಂಗ್ ಅನ್ನು 3- 6 ತಿಂಗಳು ಮೊದಲೇ ಆರಂಭಿಸುತ್ತಾರೆ. ಜನ ನೇರವಾಗಿ ಈ ಕೇಂದ್ರಗಳಿಗೆ ತೆರಳಿ ಪಡೆಯಬಹುದು. ಒಂದಕ್ಕಿಂತ ಹೆಚ್ಚು ನಾಣ್ಯ ಖರೀದಿಸುವುದಿದ್ದರೆ ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ.
ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಉತ್ತಮ ಆಸನ ವ್ಯವಸ್ಥೆ ಸೇರಿ ಸಕಲ ಸೌಕರ್ಯಗಳಿರುವ ನೂತನ ಸಂಸತ್ ಭವನದ ನಿರ್ಮಾಣಕ್ಕೆ ದೇಶದ ಹತ್ತಾರು ಭಾಗಗಳಿಂದ ಕಲ್ಲು, ಮಾರ್ಬಲ್ ಸೇರಿ ಹಲವು ವಸ್ತುಗಳನ್ನು ಬಳಸಲಾಗಿದೆ. ಆಯಾ ಪ್ರಾದೇಶಿಕ ಗಣ್ಯರ ಫೋಟೊಗಳು, ಸಂದೇಶಗಳನ್ನೂ ಸಂಸತ್ ಭವನದಲ್ಲಿ ಕೆತ್ತಲಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಸಂಸತ್ ಭವನದಲ್ಲಿ ಬಸವಣ್ಣನವರ ಫೋಟೊ, ಅವರ ವಚನವನ್ನು ಕನ್ನಡದಲ್ಲಿ ಕೆತ್ತಲಾಗಿದೆ. ಆ ಮೂಲಕ ಪ್ರಾದೇಶಿಕ ವೈವಿಧ್ಯತೆಗೂ ಆದ್ಯತೆ ನೀಡಲಾಗಿದೆ.
ಇದನ್ನೂ ಓದಿ: 75 Years To NCC: ಎನ್‌ಸಿಸಿಗೆ 75ನೇ ವಾರ್ಷಿಕೋತ್ಸವ, 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ ಮೋದಿ